ಗಂಗಾವತಿ ; ವಿಶ್ವ ಪರಂಪರಾ ಪಟ್ಟಿಯಲ್ಲಿರುವ ಬಾದಾಮಿ, ಐಹೊಳೆ, ಪಟ್ಟದ ಕಲ್ಲು ಪ್ರದೇಶದ ಸುತ್ತ ಮನೆಗಳು ವಾಣಿಜ್ಯ ಸಂಕೀರ್ಣಗಳಿಂದ ಐತಿಹಾಸಿಕ ಸ್ಥಳಗಳು ಅಪಾಯದಂಚಿನಲ್ಲಿದ್ದು ಅಂತಹ ಸ್ಥಿತಿ ಹಂಪಿ ಕಿಷ್ಕಿಂದಾ ಪ್ರದೇಶಕ್ಕೆ ಬರದಂತೆ ಎಚ್ಚರಿಕೆ ವಹಿಸಿದ್ದು ಹಂಪಿ ಅಭಿವೃದ್ಧಿ ಪ್ರಾಧಿಕಾರದ ನೂತನ ಮಾಸ್ಟರ್ ಪ್ಲಾನ್ ಘೋಷಣೆ ಇನ್ನಷ್ಟು ವಿಳಂಭವಾಗಲಿದೆ ಎಂದು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ತಿಳಿಸಿದರು.
ಅವರು ಸೋಮವಾರದ ಕಿಷ್ಕಿಂದಾ ಅಂಜನಾದ್ರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಪುರಾತನ ಸ್ಮಾರಕಗಳು, ಕಟ್ಟಡಗಳು, ವಿನ್ಯಾಸಗಳು ಹಾಗೂ ಇತಿಹಾಸವನ್ನು ಪರಿಗಣಿಸಿ ಯುನೆಸ್ಕೋ ಹಂಪಿ, ಬದಾಮಿ, ಐಹೊಳೆ ಮತ್ತು ಪಟ್ಟದಕಲ್ಲು ಪ್ರದೇಶವನ್ನು ವಿಶ್ವಪರಂಪರಾ ಪ್ರದೇಶ ಎಂದು ಘೋಷಣೆ ಮಾಡಿದೆ. ಆದ್ದರಿಂದ ದೇಶ ವಿದೇಶದ ಪ್ರವಾಸಿಗರು ಈ ಸ್ಥಳಗಳಿಗೆ ಭೇಟಿ ನೀಡುತ್ತಿದ್ದಾರೆ. ಬದಾಮಿ, ಐಹೊಳೆ ಮತ್ತು ಪಟ್ಟದ ಕಲ್ಲು ಪ್ರದೇಶದ ಸ್ಮಾರಕಗಳ ಸುತ್ತ ಮನೆಗಳು, ಅಂತಸ್ತಿನ ಕಟ್ಟಡಗಳು, ವಾಣಿಜ್ಯ ಸಂಕೀರ್ಣ ಹೀಗೆ ಯುನೆಸ್ಕೋ ಮಾನದಂಡ ಉಲ್ಲಂಘನೆ ಕಾರ್ಯ ನಡೆಯುತ್ತಿದೆ. ಇಂತಹ ಸ್ಥಿತಿ ಹಂಪಿ ಕಿಷ್ಕಿಂದಾ ಪ್ರದೇಶದಲ್ಲಿ ನಡೆಯದಂತೆ ಕಠಿಣವಾಗಿ ತಡೆಯಲಾಗಿದೆ. ಇಲ್ಲಿಯ ಸ್ಮಾರಕಗಳು, ಪ್ರಕೃತಿ ಸೌಂದರ್ಯಗಳಿಂದ ಯುನೆಸ್ಕೋ ಹಂಪಿ-ಕಿಷ್ಕಿಂದಾ ಪ್ರದೇಶವನ್ನು ವಿಶ್ವಪರಂಪರಾ ಪ್ರದೇಶದ ಪಟ್ಟಿಯಲ್ಲಿ ಸೇರಿಸಿದೆ. ಇದನ್ನು ಕಾಪಾಡಲು ಹಂಪಿ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿ ಈ ಪ್ರದೇಶದಲ್ಲಿ ಮೂಲನೈಸರ್ಗಿಕ ಸೌಂದರ್ಯ ಕಾಪಾಡಲಾಗುತ್ತಿದೆ. ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಹಮಾವಾ ಹಾಗೂ ಎರಡು ಜಿಲ್ಲಾಡಳಿತಗಳನ್ನು ಕಠಿಣ ಕ್ರಮ ಕೈಗೊಳ್ಳುತ್ತಿದೆ. ಈ ಪ್ರದೇಶದಲ್ಲಿ ಸ್ಮಾರಕಗಳು, ಪ್ರಾಕೃತಿಕ ಸೌಂದರ್ಯ ಕಾಪಾಡಲು ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ.
ಇದನ್ನೂ ಓದಿ : ಉಕ್ರೇನ್‌ನಿಂದ ಹಿಂದಿರುಗಿದವರಿಗೆ ರಷ್ಯಾ ವಿವಿಯಲ್ಲಿ ಅವಕಾಶ
ಕಮರ್ಷಿಯಲ್ ಮಾಡಲು ಅವಕಾಶವಿಲ್ಲ. ಆದ್ದರಿಂದ ಆನೆಗೊಂದಿ ಭಾಗದಲ್ಲಿ ನಾಯಿ ಕೊಡೆಗಳಂತೆ ಇದ್ದ ರೆಸಾರ್ಟ್ ಗಳಿಗೆ ಬೀಗ ಹಾಕಲಾಗಿದೆ. ಚುನಾವಣೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ. ನಮ್ಮ ಪ್ರದೇಶವನ್ನು ಕಮರ್ಷಿಯಲ್ ಚಟುವಟಿಕೆಗಳಿಂದ ಸಂರಕ್ಷಣೆ ಮಾಡದಿದ್ದರೆ ಭವಿಷ್ಯದಲ್ಲಿ ನಮ್ಮನ್ನು ಯಾರು ಕ್ಷಮಿಸುವುದಿಲ್ಲ. ಹಂಪಿ ಕಿಷ್ಕಿಂದಾ ಪ್ರದೇಶ ಅತ್ಯಂತ ಸೂಕ್ಷ್ಮ ಪ್ರದೇಶವಾಗಿದ್ದು 2008ರಲ್ಲಿ ಪರಿಷ್ಕರಣೆಯಾಗಬೇಕಿದ್ದ ಹಂಪಿ ಅಭಿವೃದ್ಧಿ ಪ್ರಾಧಿಕಾರದ ನೂತನ ಮಾಸ್ಟರ್ ಪ್ಲಾನ್(ಮಹಾಯೋಜನೆ) 15 ವರ್ಷಗಳಾದರೂ ಪರಿಷ್ಕರಣೆಯಾಗಿಲ್ಲ ಸ್ಥಳೀಯರಿಂದ ಆಕ್ಷೇಪ ಸಲಹೆ ಆಹ್ವಾನಿಸಿ ಮಾಸ್ಟರ್ ಪ್ಲಾನ್ ಅಂತಿಮಗೊಳಿಸಲಾಗಿದ್ದು ಇನ್ನೂ 6 ತಿಂಗಳಲ್ಲಿ ಘೋಷಣೆ ಮಾಡಲಾಗುತ್ತದೆ ಎಂದರು.