Advertisement

ಸದ್ಯ ಸುಖಾಂತ್ಯ :  ಆನಂದ್‌ ಸಿಂಗ್‌ ಮನವೊಲಿಸಿದ ಸಿಎಂ

12:23 AM Aug 12, 2021 | Team Udayavani |

ಬೆಂಗಳೂರು: ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಚಿವ ಸಂಪುಟ ದಲ್ಲಿ ಉಂಟಾಗಿದ್ದ ಖಾತೆ ಸಂಕಟ ಸದ್ಯಕ್ಕೆ ಸುಖಾಂತ್ಯ ಕಂಡಿದೆ. ಸ್ವಾತಂತ್ರ್ಯೋತ್ಸವದ ಬಳಿಕ ಖಾತೆ ಗೊಂದಲ ದಿಲ್ಲಿ  ವರಿಷ್ಠರ ಅಂಗಳ ತಲುಪಲಿದೆ.

Advertisement

ಬುಧವಾರ ಸುಮಾರು 2 ತಾಸುಗಳ ಕಾಲ ನಡೆದ ಸಂಧಾನ ಸಭೆಯಲ್ಲಿ ತಾತ್ಕಾಲಿಕವಾಗಿ ಸಿಂಗ್‌ ಅವರ ಮನವೊಲಿಸುವಲ್ಲಿ  ಸಿಎಂ ಬಸವರಾಜ ಬೊಮ್ಮಾಯಿ

ಯಶಸ್ವಿಯಾಗಿದ್ದಾರೆ. ಸದ್ಯ ಅಸಮಾಧಾನವನ್ನು ಬದಿಗಿರಿಸಿ ಆನಂದ್‌ ಸಿಂಗ್‌ ಅವರು ಸ್ವಾತಂತ್ರ್ಯೋತ್ಸವ ದಂದು ವಿಜಯನಗರದಲ್ಲಿ ಧ್ವಜಾರೋಹಣ ಮಾಡಲಿ ದ್ದಾರೆ. ಆ ಬಳಿಕ ಖಾತೆ ಹಂಚಿಕೆ ವಿಚಾರವನ್ನು ವರಿಷ್ಠರ ಜತೆ ಚರ್ಚಿಸಿ ಬಗೆಹರಿಸಲು ನಿರ್ಧರಿಸಲಾಗಿದೆ. ಸಚಿವ ಆರ್‌. ಅಶೋಕ್‌, ಶಾಸಕ ರಾಜು ಗೌಡ ಅವರು ಆನಂದ್‌ ಸಿಂಗ್‌ ಸಮಾಧಾನ ಪ್ರಯತ್ನದಲ್ಲಿ ಭಾಗಿಯಾಗಿದ್ದರು.

ಸ್ವಾತಂತ್ರ್ಯ ದಿನಾಚರಣೆಯ ಬಳಿಕ ಆನಂದ್‌ ಸಿಂಗ್‌ ಅವರು ದಿಲ್ಲಿಗೆ ತೆರಳಿ ವರಿಷ್ಠರ ಜತೆ ಚರ್ಚಿಸಲಿ ದ್ದಾರೆ ಎನ್ನಲಾಗಿದೆ. ಬಳಿಕ ಸಿಎಂ ಕೂಡ ದಿಲ್ಲಿಗೆ ತೆರಳಿ ವರಿಷ್ಠರ ಜತೆ ಮಾತುಕತೆ ನಡೆಸಲಿದ್ದಾರೆ ಎನ್ನಲಾಗಿದೆ.

ಸಚಿವ ಆನಂದ್‌ ಸಿಂಗ್‌ ಅವರು ಉತ್ತಮ ಖಾತೆ ಬಯಸಿದ್ದು ನಿಜ. ಅವರ ಮನವಿಯನ್ನು ಸಕಾರಾತ್ಮಕವಾಗಿ ಪರಿಗಣಿಸಿದ್ದು, ವರಿಷ್ಠರಿಗೆ ಅದನ್ನು ಮನವರಿಕೆ ಮಾಡಲು ಪ್ರಯತ್ನಿಸಲಾಗುವುದು. ಸಿಂಗ್‌ ಜತೆಗೆ ಗೊಂದಲ ಇಲ್ಲ. ವಿಜಯನಗರದಲ್ಲಿ ಆ. 15ರಂದು ಆನಂದ್‌ ಸಿಂಗ್‌ ಧ್ವಜಾರೋಹಣ ಮಾಡಲಿದ್ದಾರೆ ಎಂದು ಸಿಎಂ ಬೊಮ್ಮಾಯಿ ಸಭೆಯ ಬಳಿಕ ಸ್ಪಷ್ಟಪಡಿಸಿದರು.

Advertisement

ನನ್ನ ಮನವಿಯನ್ನು ಸಿಎಂ ಪರಿಗಣಿಸಿದ್ದಾರೆ. ವರಿಷ್ಠರ ಜತೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳುವುದಾಗಿಯೂ ಹೇಳಿದ್ದಾರೆ. ರಾಜೀನಾಮೆ ನೀಡು ತ್ತಿರುವುದಾಗಿ ಅಥವಾ ನೀಡಿರುವುದಾಗಿ ನಾನು ಎಲ್ಲಿಯೂ ಹೇಳಿಲ್ಲ ಎಂದು ಸಚಿವ ಆನಂದ್‌ ಸಿಂಗ್‌ ತಿಳಿಸಿದರು.

ರಾಜಕೀಯ ಅಂತ್ಯವೂ ಆಗಬಹುದು :

ಬೆಂಗಳೂರಿಗೆ ತೆರಳುವ ಮುನ್ನ ಹೊಸಪೇಟೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದ ಆನಂದ್‌ ಸಿಂಗ್‌, ಇದು ಹೊಸ ರಾಜಕೀಯ ಆರಂಭವೂ ಆಗಬಹುದು ಅಥವಾ ಅಂತ್ಯವೂ ಆಗಬಹುದು ಎಂದು ಮಾರ್ಮಿಕವಾಗಿ ಹೇಳಿ ಅಸಮಾಧಾನವನ್ನು ಬಹಿರಂಗ ಪಡಿಸಿದ್ದರು.

ಯಡಿಯೂರಪ್ಪ  ಸಂಧಾನ : ಬಯಸಿದ ಖಾತೆ ನೀಡಿಲ್ಲ  ಎನ್ನುವ ಕಾರಣಕ್ಕೆ ಮುನಿಸಿಕೊಂಡಿದ್ದ ಸಚಿವ ಆನಂದ್‌ ಸಿಂಗ್‌ ಅವರನ್ನು ಮಾಜಿ ಸಿಎಂ ಯಡಿಯೂರಪ್ಪ ಮತ್ತು ಸಿಎಂ ಬಸವರಾಜ ಬೊಮ್ಮಾಯಿ ಮನವೊಲಿ ಸಿದ್ದು, ಮುಂದಾಗಬಹುದಾದ ಅನಾಹುತವನ್ನು ಮೊಳಕೆಯಲ್ಲೇ ಚಿವುಟುವ ಪ್ರಯತ್ನ ನಡೆಸಿದ್ದಾರೆ.

ಬುಧವಾರ ಬೆಳಗ್ಗೆಯಿಂದಲೇ ಆನಂದ್‌ ಸಿಂಗ್‌ ಅವರ ಮನವೊಲಿಕೆಗೆ ಸಿಎಂ ಬೊಮ್ಮಾಯಿ ಅವರು ಸುರಪುರ ಶಾಸಕ ರಾಜು ಗೌಡ ಮೂಲಕ ಪ್ರಯತ್ನ ನಡೆಸಿದ್ದರು. ಆನಂದ್‌ ಸಿಂಗ್‌ ತಮಗೆ ಆಗಿರುವ ಅನ್ಯಾಯದ ಬಗ್ಗೆ ಮಾಜಿ ಸಿಎಂ ಯಡಿಯೂರಪ್ಪ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಗಮನಕ್ಕೆ ತಂದಿದ್ದರು ಎನ್ನಲಾಗಿದೆ.

ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಾನು, ಆನಂದ್‌ ಸಿಂಗ್‌ ಮತ್ತು ಶಾಸಕ ರಾಜು ಗೌಡ ಚರ್ಚಿಸಿದ್ದೇವೆ. ಎರಡು ತಾಸು ನಡೆದ ಚರ್ಚೆಯಲ್ಲಿ ಆನಂದ್‌ ಸಿಂಗ್‌ ತಮ್ಮ ಭಾವನೆಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ. ಅವರು ರಾಜೀನಾಮೆ ನೀಡಲಿದ್ದಾರೆ ಎನ್ನುವುದು ಶುದ್ಧ ಸುಳ್ಳು. ಅವರ ಮನವಿಯ ಬಗ್ಗೆ ಮುಖ್ಯಮಂತ್ರಿಗಳು ಕೇಂದ್ರದ ನಾಯಕರ ಜತೆಗೆ ಚರ್ಚಿಸಿ, ಸೂಕ್ತ ತೀರ್ಮಾನ ಕೈಗೊಳ್ಳಲಿದ್ದಾರೆ.ಆರ್‌. ಅಶೋಕ್‌, ಕಂದಾಯ ಸಚಿವರು.

ಸಂಧಾನ ಸಭೆ ನೂರಕ್ಕೆ ನೂರರಷ್ಟು ಯಶಸ್ವಿಯಾಗಿದೆ. ಎಲ್ಲರೂ ಮನಬಿಚ್ಚಿ ಮಾತನಾಡಿದ್ದಾರೆ. ಆನಂದ್‌ ಸಿಂಗ್‌ ಅವರು ನನ್ನ ಒಳ್ಳೆಯ ಸ್ನೇಹಿತ, ಆದ್ದರಿಂದ ಅವರಿಗೆ ಒಳ್ಳೆಯದು ಬಯಸುವುದು ನನ್ನ ಕರ್ತವ್ಯ. ಪಕ್ಷದ ನಾಯಕರ ಸೂಚನೆಯಂತೆ ಅವರನ್ನು ಕರೆತಂದು ಮುಕ್ತವಾಗಿ ಚರ್ಚಿಸಿದ್ದೇವೆ. ಗೊಂದಲ ಸುಖಾಂತ್ಯ ಕಂಡಿದೆ.ರಾಜು ಗೌಡ, ಶಾಸಕರು

Advertisement

Udayavani is now on Telegram. Click here to join our channel and stay updated with the latest news.

Next