Advertisement
ಸಂಗೋಳ್ಳಿ ರಾಯಣ್ಣ ಅವರ ಪುಣ್ಯಸ್ಮರಣೆಯ ಅಂಗವಾಗಿ ಮೆಜೆಸ್ಟಿಕ್ ಸಮೀಪವಿರುವ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ಅವರ ಪ್ರತಿಮೆಗೆ ಭಾನುವಾರ ಮಾಲಾರ್ಪಣೆ ನೆರವೇರಿಸಿದ ನಂತರ ಮಾತನಾಡಿದ ಅವರು, ಅಪ್ರತಿಮ ದೇಶಭಕ್ತ ಸಂಗೋಳ್ಳಿ ರಾಯಣ್ಣ ಅವರನ್ನು ಸದಾ ಸ್ಮರಿಸುವ ದೃಷ್ಟಿಯಿಂದ ಬಿಬಿಎಂಪಿ ವ್ಯಾಪ್ತಿಯ ಗಾಂಧಿನಗರ ವಿಧಾನಸಭಾ ಕ್ಷೇತ್ರದಲ್ಲಿ ಬರುವ ಆನಂದ್‌ರಾವ್ ವೃತ್ತದ ಮೇಲ್ಸೇತುವೆಗೆ ಸಂಗೋಳ್ಳಿ ರಾಯಣ್ಣ ಮೇಲ್ಸೇತುವೆ ಎಂದು ನಾಮಕರಣ ಮಾಡಲು ಈಗಾಗಲೇ ತೀರ್ಮಾನ ತೆಗೆದುಕೊಂಡಿದ್ದೇವೆ ಎಂದು ಹೇಳಿದರು.
ಸಂಗೋಳ್ಳಿ ರಾಯಣ್ಣ ಅವರು ಒಂದು ಜನಾಂಗ ಅಥವಾ ಸಮುದಾಯಕ್ಕೆ ಸೀಮಿತರಾದವರಲ್ಲ. ಕನ್ನಡದ ಮೊದಲ ಸ್ವಾತಂತ್ರ್ಯ ಹೋರಾಟಗಾರರಾಗಿರುವ ಇವರು, ಸಮಸ್ತ ಕನ್ನಡಿಗರ ಶೌರ್ಯದ ಪ್ರತೀಕವಾಗಿದ್ದಾರೆ. ಸಾಮಾನ್ಯ ಕುಟುಂಬದಿಂದ ಬಂದು ಅಪ್ರತಿಮ ಹೋರಾಟಗಾರರಾಗಿ ಬೆಳೆದಿದ್ದಾರೆ. ಕಿತ್ತೂರು ರಾಣಿ ಚೆನ್ನಮ್ಮಳ ಬಲಗೈ ಬಂಟನಾಗಿ ಬ್ರಿಟಿಷ್ ಇಸ್ಟ್‌ಇಂಡಿಯಾ ಕಂಪೆನಿ ವಿರುದ್ಧ ಹೋರಾಟ ಮಾಡಿದ ದಿಟ್ಟ ವೀರ ಎಂದು ಬಣ್ಣಿಸಿದರು. ಅಪ್ರತಿಮ ದೇಶಭಕ್ತ ಸಂಗೋಳ್ಳಿ ರಾಯಣ್ಣ ಅವರನ್ನು ಸದಾ ಸ್ಮರಿಸಿಕೊಳ್ಳಬೇಕು. ಕಿತ್ತೂರಿನ ಸಣ್ಣ ಸಂಸ್ಥಾನದಲ್ಲಿದ್ದ ರಾಯಣ್ಣ, ಬ್ರಿಟಿಷರ ವಿರುದ್ಧ ಹೋರಾಡಿದ ಚರಿತ್ರೆ ರೋಚಕವಾಗಿದೆ. ಸಂಗೋಳ್ಳಿ ರಾಯಣ್ಣನವರ ಜೀವನ ನಮಗೆಲ್ಲ ಪ್ರೇರಣೆಯಾಗಬೇಕು. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಹುತಾತ್ಮರಾಗಿದ್ದಾರೆ. ಅವರ ಧ್ಯೇಯವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದೇ ಸಂಗೋಳ್ಳಿ ರಾಯಣ್ಣ ಅವರಿಗೆ ನಾವು ಸಲ್ಲಿಸುವ ನಮನ ಎಂದು ಹೇಳಿದರು.