ಮಂಗಳೂರು: ಕಂಬಳದ ಗದ್ದೆಯಲ್ಲಿ ಉಸೇನ್ ಬೋಲ್ಟ್ ದಾಖಲೆ ಮುರಿದ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆಯ ಮೀಯಾರಿನ ಯುವಕ ಶ್ರೀನಿವಾಸಗೌಡ ಅವರಿಗೆ ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ ತಮ್ಮ ಟ್ವೀಟ್ಟರ್ ಖಾತೆಯಲ್ಲಿ ಮೆಚ್ಚುಗೆಯನ್ನು ಸೂಚಿಸಿದ್ದಾರೆ.
ಫೆ. 1ರಂದು ಮಂಗಳೂರು ಸಮೀಪದ ಐಕಳ ಎಂಬಲ್ಲಿ ನಡೆದ ತುಳುನಾಡಿನ ಸಾಂಪ್ರದಾಯಿಕ ಕಂಬಳ ಕ್ರೀಡೆಯಲ್ಲಿ ಶ್ರೀನಿವಾಸ ಗೌಡ ಅವರು 142.50 ಮೀಟರ್ ಕರೆ (ಕಂಬಳ ಕೋಣಗಳ ಟ್ರ್ಯಾಕ್) ಯನ್ನು ಕೇವಲ 13.62 ಸೆಕೆಂಡ್ ಗಳಲ್ಲಿ ಕ್ರಮಿಸಿದ್ದಾರೆ. ಇದು ಕಂಬಳ ಕ್ರೀಡೆಯಲ್ಲಿ ಇದುವರೆಗಿನ ಅತ್ಯಂತ ವೇಗದ ದಾಖಲೆಯಾಗಿದ್ದು ಶ್ರೀನಿವಾಸ್ ಗೌಡ ಅವರನ್ನು ಉಸೇನ್ ಬೋಲ್ಟ್ ಜೊತೆಗೆ ಹೋಲಿಸಲಾಗುತ್ತಿದೆ.
ಈ ಕುರಿತು ಔಟ್ ಲುಕ್ ನಲ್ಲಿ ಪ್ರಕಟವಾದ ಶ್ರೀನಿವಾಸ ಗೌಡರ ಸಾಧನೆ ಕುರಿತ ಲೇಖನವನ್ನು ಟ್ವೀಟ್ಟರ್ ನಲ್ಲಿ ಹಂಚಿಕೊಂಡ ಆನಂದ್ ಮಹೀಂದ್ರಾ , ಒಮ್ಮೆ ಈ ವ್ಯಕ್ತಿಯ ಮೈಕಟ್ಟನ್ನು ಗಮನಿಸಿ, ಈತ ಅಸಾಧರಣ ಸಾಹಸ ಮಾಡಲು ಸಮರ್ಥನಾಗಿದ್ದಾನೆ . ಈತನಿಗೆ ಕೇಂದ್ರ ಕ್ರೀಡಾ ಸಚಿವರಾದ ಕಿರಿಣ್ ರಿಜಿಜು 100 ಮೀ ಓಟಗಾರನಾಗಲು ಸಮರ್ಥ ತರಬೇತಿಯನ್ನು ನೀಡಲು ಅನುಕೂಲ ಕಲ್ಪಿಸಬೇಕು ಅಥವಾ ಓಲಂಪಿಕ್ ನಲ್ಲಿ ಕಂಬಳವನ್ನು ಸೇರಿಸಬೇಕು. ಏನೇ ಆಗಲಿ ಶ್ರೀನಿವಾಸ ಗೌಡ ಅವರಿಗೆ ಚಿನ್ನದ ಪದಕ ಧಕ್ಕಬೇಕು ಎಂದು ತಿಳಿಸಿದ್ದಾರೆ.
ಶ್ರೀನಿವಾಸ ಗೌಡ ಗುರಿ ತಲುಪಲು ತೆಗೆದುಕೊಂಡ ಸಮಯವನ್ನು 100 ಮೀ. ಓಟದೊಮದಿಗೆ ತಾಳೆ ಹಾಕಿ ನೋಡಿದರೆ ಅದು 9.55 ಸೆಕೆಂಡ್ ಆಗುತ್ತದೆ. ಬೋಲ್ಟ್ ವಿಶ್ವದಾಖಲೆ ಗಣನೆಗೆ ತೆಗೆದುಕೊಂಡರೆ ಅವರಿಗೆ 142.50 ಮೀ ಕ್ರಮಿಸಲು 13.65 ಸೆಕೆಂಡ್ ಬೇಕಾಗುತ್ತದೆ. ತಾಳೆ ಹಾಕಿದಾಗ ಶ್ರೀನಿವಾಸ ಗೌಡ ಅವರು ಉಸೇನ್ ಬೋಲ್ಟ್ ಗಿಂತ 0.03 ಸೆಕೆಂಡ್ ಮುಂದಿದ್ದಾರೆ.
ಈ ಮೂಲಕ ಆನಂದ್ ಮಹೀಂದ್ರಾ ತಮ್ಮ ಟ್ವೀಟ್ ನಲ್ಲಿ ಕರ್ನಾಟಕದ ಕರಾವಳಿ ಪ್ರದೇಶದ ಸಾಂಪ್ರದಾಯಿಕ ಕ್ರೀಡೆಯಾದ ಕಂಬಳಕ್ಕೆ ಬೆಂಬಲ ನೀಡಿದರು. ಗ್ರಾಮೀಣ ಪ್ರತಿಭೆಗಳನ್ನು ಪ್ರೋತ್ಸಾಹಿಸಿದ್ದಕ್ಕಾಗಿ ಮತ್ತು ಕಂಬಳವನ್ನು ಬೆಂಬಲಿಸಿದ್ದಕ್ಕಾಗಿ ಆನಂದ್ ಮಹೀಂದ್ರಾ ಅವರಿಗೆ ಟ್ವೀಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ಕ್ರೀಡಾ ಸಚಿವ, ಶ್ರೀನಿವಾಸ ಗೌಡ ರನ್ನು ಕರೆಯಿಸಿ ಪರಿಣಿತರಿಂದ ತರಬೇತಿ ಕೊಡಿಸಲಾಗುವುದು ಎಂದಿದ್ದಾರೆ.