Advertisement

ಕೃಷಿ ಅಧ್ಯಯನದಲ್ಲಿ ದತ್ತಾಂಶಗಳ ವಿಶ್ಲೇಷಣೆ ಪಠ್ಯ ಜೋಡಣೆ ಅವಶ್ಯ

01:31 PM Sep 16, 2017 | Team Udayavani |

ಧಾರವಾಡ: ಕೃಷಿ ವಿವಿಗಳಲ್ಲಿ ದತ್ತಾಂಶ ಸಂಗ್ರಹ ಹಾಗೂ ವಿಶ್ಲೇಷಣೆಯ ಪಠ್ಯ ಜೋಡಿಸುವ  ಅವಶ್ಯಕತೆ ಇದೆ. ಅದೇ ರೀತಿ ಮಾಹಿತಿ ತಂತ್ರಜ್ಞಾನ ಅಭಿವೃದ್ಧಿ ಪಡಿಸುವ ಹಾಗೂ ಅದನ್ನು ಮುಂದಕ್ಕೆ ತೆಗೆದುಕೊಂಡು ಹೋಗುವ ಗುರುತರ ಜವಾಬ್ದಾರಿ ಯುವಕರ ಮೇಲಿದೆ ಎಂದು ಮುಂಬೈ ಐಐಟಿಯ ಪ್ರಧಾನ ಸಂಶೋಧನಾ ವಿಜ್ಞಾನಿ ಡಾ| ಜೆ. ಆದಿನಾರಾಯಣ ಹೇಳಿದರು. 

Advertisement

ಧಾರವಾಡ ಕೃವಿವಿಯಲ್ಲಿ ಆಯೋಜಿಸಿದ್ದ ಭಾರತೀಯ ಸನ್ನಿವೇಶದಲ್ಲಿ ಕೃಷಿ ಮತ್ತು ಅರಣ್ಯ ಕ್ಷೇತ್ರಗಳಿಗೆ ಉಪಯುಕ್ತ ರೀತಿ ದೂರ ಸಂವೇದಿ ಅಪ್ಲಿಕೇಶನ್‌(ರಿಮೋಟ್‌ ಸೆನ್ಸಿಂಗ್‌ ಅಪ್ಲಿಕೇಶನ್‌) ಬಳಕೆ ಕುರಿತ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು. 

ದತ್ತಾಂಶ ವಿಶ್ಲೇಷಣೆ ಕುರಿತಾದ ಕೃಷಿ ಅಧ್ಯಯನದಲ್ಲಿ ಪಠ್ಯ ಜೋಡಣೆಗೆ ಕೃಷಿ ವಿವಿಗಳ ಕುಲಪತಿಗಳು ಚಿಂತಿಸಬೇಕು. ಕೃಷಿ ಹಾಗೂ ಅರಣ್ಯ ಇನ್ನಿತರ ಕ್ಷೇತ್ರಗಳಲ್ಲಿ ದೊಡ್ಡ ಮಟ್ಟದ ದತ್ತಾಂಶ ಸಂಗ್ರಹ ಹಾಗೂ ಹೊಸ ಸಂಶೋಧನೆ, ತಂತ್ರಜ್ಞಾನ ಬಳಕೆ ಅವಶ್ಯಕತೆ ಹೆಚ್ಚಿದೆ. ಇದಕ್ಕೆ ತಕ್ಕ ಮಾನವ ಸಂಪನ್ಮೂಲವನ್ನು ರೂಪಿಸಬೇಕಾಗಿದೆ ಎಂದರು. 

ಕೃಷಿ ಮತ್ತು ಅರಣ್ಯದಲ್ಲಿ ಸುಸ್ಥಿರತೆ ವ್ಯವಸ್ಥೆ ನಿಟ್ಟಿನಲ್ಲಿ ಅನೇಕ ಸಂಕಷ್ಟ, ಸವಾಲು ನಿವಾರಣೆಗ ಐಟಿ-ಐಸಿಡಿಸಿ ಬಳಕೆ ಅಗತ್ಯ. ರಿಮೋಟ್‌ ಸೆನ್ಸಿಂಗ್‌ ಇದಕ್ಕೆ ಸಹಕಾರಿಯಾಗಿದೆ. ಭಾರತದಲ್ಲಿ ಸ್ಟಾರ್ಟ್‌ ಅಪ್‌ ಪ್ರಮಾಣ ಹೆಚ್ಚುತ್ತಿದೆ. ಆದರೆ, ಅತ್ಯುತ್ತಮ ವ್ಯವಹಾರ-ಉದ್ಯಮ ಮಾದರಿಗಳ ಕೊರತೆ ಸಾಕಷ್ಟಿದೆ.

ಸ್ಮಾರ್ಟ್‌ ತಂತ್ರಜ್ಞಾನ ಬಳಕೆಯೊಂದಿಗೆ ಇದನ್ನು ನಿವಾರಿಸಿಕೊಳ್ಳಬಹುದಾಗಿದೆ ಎಂದು ಹೇಳಿದರು. ಧಾರವಾಡ ಕೃವಿವಿ ಕುಲಪತಿ ಡಾ| ಡಿ.ಪಿ. ಬಿರಾದಾರ ಅಧ್ಯಕ್ಷತೆ ವಹಿಸಿ ಮಾತನಾಡಿ, ಯಾವುದೇ ಹೊಸ ತಂತ್ರಜ್ಞಾನ ಕೈಗೊಂಡರೂ ಅದರ ಕುರಿತಾಗಿ ಮೊದಲು ವಿಶ್ವಾಸಾರ್ಹತೆ ಮೂಡಬೇಕು.

Advertisement

ವಿಜ್ಞಾನಿಗಳು ತಮ್ಮ ಸಹಪಾಠಿ, ನೀತಿ ನಿರೂಪಕರಿಗೆ ಮನವರಿಕೆ ಮಾಡಿಕೊಡಬೇಕು ಹಾಗೂ ಇದರ ಪ್ರಯೋಜನ ರೈತರಿಗೆ ಮುಟ್ಟಬೇಕು ಎಂದರು. ದೇಶದಲ್ಲಿ ಅನೇಕ ಸಂಶೋಧನೆಗಳಾಗುತ್ತವೆ. ಅವುಗಳು ಮನವರಿಕೆಯಲ್ಲಿ ಸೋಲು ಅನುಭವಿಸುತ್ತಿವೆ. ಗ್ರಾಮೀಣ ದತ್ತಾಂಶಕ್ಕಾಗಿ ಇಂದಿಗೂ ಗ್ರಾಮಲೆಕ್ಕಾಧಿಕಾರಿ, ಗ್ರಾಮಸೇವಕರ ನೆರವು ಪಡೆಯಬೇಕಾಗಿದೆ.

ಅವರು ನೀಡುವ ಮಾಹಿತಿ ನಿಖರತೆಯಿಂದ ಇರುವುದಿಲ್ಲ. ರಿಮೋಟ್‌ ಸೆನ್ಸಿಂಗ್‌ ಯಾವುದೇ ಹಸ್ತಕ್ಷೇಪ ಇಲ್ಲದೆ ನಿಖರ ಮಾಹಿತಿ ಒದಗಿಸಬಲ್ಲದು ಎಂದರು. ಬಿಟಿ ಸಾಸಿವೆಯನ್ನು ದೇಶದ ವಿಜ್ಞಾನಿಗಳೇ ಅಭಿವೃದ್ಧಿ ಪಡಿಸಿದ್ದು, ಇದನ್ನು ವಾಣಿಜ್ಯ ಬಳಕೆಗೆ ನೀಡುವ ಬಗ್ಗೆ ವಿವಾದವಿದೆ. ವಿಜ್ಞಾನ-ತಂತ್ರಜ್ಞಾನದ ಮಾಹಿತಿ ಇಲ್ಲದ ಕೆಲವರು ಇದನ್ನು ವಿರೋಧಿಸುತ್ತಿದ್ದಾರೆ.

ಇಂತಹ ತಂತ್ರಜ್ಞಾನ ಕುರಿತು ಮನವರಿಕೆ ಅವಶ್ಯ ಎಂದು ಹೇಳಿದರು. ರಾಯಚೂರು ಕೃವಿವಿ ಕುಲಪತಿ ಡಾ| ಪಿ.ಎಂ. ಸಾಲಿಮಠ ಮಾತನಾಡಿ, ಇಂದಿನ ಕೃಷಿ ಕವಲು ದಾರಿಯಲ್ಲಿ ಸಾಗುತ್ತಿದೆ. ಅನೇಕ ಸಮಸ್ಯೆ, ಸವಾಲು ಎದುರಿಸುತ್ತಿದ್ದು, ಜನಸಂಖ್ಯೆ ಹಾಗೂ ಆಹಾರ ಬೇಡಿಕೆ ಹೆಚ್ಚುತ್ತಿದೆ. ಉತ್ಪಾದನೆ ಹೆಚ್ಚಳ ವಿಜ್ಞಾನಿಗಳಿಗೆ ಸವಾಲಾಗಿದೆ. ಹವಾಮಾನ ಬದಲಾವಣೆ ತೀವ್ರವಾಗುತ್ತಿದೆ. ಮನ್ಸೂನ್‌ಗಳ ಕಣ್ಣಾಮುಚ್ಚಾಲೆ ಹೆಚ್ಚುತ್ತಿದೆ.

ನೀತಿ ನಿರೂಪಕರು ವಿಜ್ಞಾನದ ಪ್ರಾಮುಖ್ಯತೆ ಅರಿಯಬೇಕು ಎಂದರು.  ಧಾರವಾಡ ಕೃವಿವಿ ಆಡಳಿತ ಮಂಡಳಿ ಸದಸ್ಯ ಈಶ್ವರಚಂದ್ರ ಹೊಸಮನಿ ವೇದಿಕೆಯಲ್ಲಿದ್ದರು. ಅರಣ್ಯ ಕಾಲೇಜು ಪ್ರಾಧ್ಯಾಪಕ ಡಾ| ಎ.ಜಿ. ಕೊಪ್ಪದ ಪ್ರಾಸ್ತಾವಿಕ ಮಾತನಾಡಿದರು. ಅರಣ್ಯ ಕಾಲೇಜು ಡೀನ್‌ ಡಾ| ಎಚ್‌. ಬಸಪ್ಪ ಸ್ವಾಗತಿಸಿದರು. ಧಾರವಾಡ ಕೃವಿವಿ ಪ್ರಾಧ್ಯಾಪಕ ಡಾ| ಆರ್‌.ಎಸ್‌. ಪೊದ್ದಾರ ವಂದಿಸಿದರು. ನಂತರ ವಿವಿಧ ತಾಂತ್ರಿಕ ಗೋಷ್ಠಿಗಳು ನಡೆದವು. 

Advertisement

Udayavani is now on Telegram. Click here to join our channel and stay updated with the latest news.

Next