Advertisement

ನೀರ್ಚಾಲು ಮದಕ: ಜಲ ಮರುಪೂರಣ ಸಾಹಸ

11:15 PM Jul 18, 2019 | Sriram |

ಕಾಸರಗೋಡು: ಶತಮಾನದ ಇತಿಹಾಸವಿರುವ ನೀರ್ಚಾಲು ಮದಕವನ್ನು ಅಭಿವೃದ್ಧಿಪಡಿಸಿ ಜಲ ಮರುಪೂರಣಗೈಯುವ ಕಾಮಗಾರಿ ಪುನರಾರಂಭಗೊಂಡಿದೆ. 2016 ಜ. 1ರಂದು ಸಿ.ಪಿ.ಸಿ.ಆರ್‌.ಐ. ಡೈರೆಕ್ಟರ್‌ ಡಾ| ಪಿ. ಚೌಡಪ್ಪ ಹಾಗೂ ಬದಿಯಡ್ಕ ಗ್ರಾಮ ಪಂಚಾಯತ್‌ ಅಧ್ಯಕ್ಷ ಕೆ.ಎನ್‌. ಕೃಷ್ಣ ಭಟ್ ಅವರ ಉಪಸ್ಥಿತಿಯಲ್ಲಿ ಕಾಸರಗೋಡು ಶಾಸಕ ಎನ್‌.ಎ. ನೆಲ್ಲಿಕುನ್ನು ಅವರು ಮದಕದ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿದ್ದರು.

Advertisement

ಶಿಲಾನ್ಯಾಸ ಕಾರ್ಯವನ್ನು ಬಹಿಷ್ಕರಿಸುವ ಮೂಲಕ ಹಲವಾರು ಸಮಸ್ಯೆಗಳಿಗೆ ಕಾರಣವಾಗಿ ನಿರ್ಮಾಣದ ಕೆಲಸಗಳು ಸ್ಥಗಿತಗೊಳ್ಳು ವಂತಾಯಿತು. ಸರಕಾರದ ಕಂದಾಯ ಇಲಾಖೆ, ಭೂಗರ್ಭ ಇಲಾಖೆ, ಕೇರಳ ಭೂ ಅಭಿವೃದ್ಧಿ ನಿಗಮ, ಮಣ್ಣು ಜಲ ಸಂರಕ್ಷಣ ಇಲಾಖೆ, ಜಲಶಕ್ತಿ ಅಭಿಯಾನ ಇಲಾಖೆ, ನಬಾರ್ಡ್‌, ಸಣ್ಣ ನೀರಾವರಿ ಇಲಾಖೆ, ಬದಿಯಡ್ಕ ಗ್ರಾಮ ಪಂಚಾಯತ್‌ ಮತ್ತು ವಿವಿಧ ಇಲಾಖಾ ಮಟ್ಟದಲ್ಲಿ ಯೋಜನೆಯ ಸತ್ಯಾವಸ್ಥೆಯ ಅವಲೋಕನದ ಬಳಿಕ ಜಲಸಂರಕ್ಷಣೆಗೆ ಆದ್ಯತೆ ನೀಡಿ ಜಿಲ್ಲಾಧಿಕಾರಿಯವರು ಅಧಿಕಾರಿಗಳ ಮಟ್ಟದ ಸಭೆಯಲ್ಲಿ ಅಂತಿಮ ತೀರ್ಮಾನ ಕೈಗೊಂಡರು. ಕೃಷಿ ಹಾಗೂ ಕುಡಿಯುವ ನೀರು ಲಭ್ಯತೆಗೆ ಈ ಮದಕವನ್ನು ಅಭಿವೃದ್ಧಿಪಡಿಸುವುದರಿಂ ಶಾಶ್ವತ ಜಲ ಕ್ಷಾಮಕ್ಕೆ ಪರಿಹಾರ ಸಿಗಬಹುದಾಗಿದೆ.

2011ರಿಂದ ಕೃಷಿ ಇಲಾಖೆ, ಗ್ರಾಮ ಕಚೇರಿ, ತಾಲೂಕು, ಜಿಲ್ಲಾಧಿಕಾರಿ, ಕಂದಾಯ ಉಪಜಿಲ್ಲಾಧಿಕಾರಿ ಕಾರ್ಯಾಲಯಗಳ ಕಡತಗಳ ಸೂಕ್ಷ್ಮ ಪರಿಶೋಧನೆಗಳಿಗೆ ಒಳಪಟ್ಟು ನಬಾರ್ಡ್‌ ಆರ್‌.ಐ.ಡಿ.ಎಫ್‌.ಸಹಸ್ರ ಸರೋವರ ಯೋಜನೆಯನ್ನು ಹಿಂದಿನ ಸರಕಾರದ ಕೃಷಿ ಸಚಿವ ಕೆ.ಪಿ. ಮೋಹನನ್‌ ಅವರು ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ ಯೋಜನೆಗೆ ಅಂಗೀಕಾರವನ್ನು ನೀಡಿದ್ದರು. ಅನುದಾನವಾಗಿ 94 ಲಕ್ಷ ರೂಪಾಯಿ ಮಂಜೂರಾತಿ ನೀಡಿದ್ದರು.

8 ವರ್ಷಗಳ ಪರಿಶ್ರಮ
ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಸಂಪರ್ಕಿಸಿ ಯೋಜನೆಯನ್ನು ಅನುಷ್ಠಾನಗೊಳಿಸುವಲ್ಲಿ ಕಳೆದ 8 ವರ್ಷಗಳಿಂದ ನಿರಂತರ ಶ್ರಮಿಸುವಲ್ಲಿ ನೀರ್ಚಾಲು ಮದಕ ಅಭಿವೃದ್ಧಿ ಸಮಿತಿ ಸಂಚಾಲಕ ಎಂ. ಎಚ್. ಜನಾರ್ದನ ಅವರು ಪ್ರಮುಖ ಪಾತ್ರವಹಿಸಿದ್ದರು.

ಕೆರೆಯ ಪಾರ್ಶ್ವದಲ್ಲಿ ಉಳಿಕೆಯಿರುವ ಸ್ಥಳದಲ್ಲಿ ಔಷಧೀಯ ಹಾಗು ಹೂವಿನ ತೋಟ ನಿರ್ಮಿಸುವ ಯೋಜನೆಯು ಕಾರ್ಯಗತಗೊಳ್ಳಲಿದೆ.

Advertisement

ಪ್ರದೇಶಕ್ಕೆ ಅತ್ಯಂತ ಆವಶ್ಯಕತೆಯಾಗಿರುವ ಬದಿಯಡ್ಕ, ನೀರ್ಚಾಲು ಅಗ್ನಿಶಮನ ರಕ್ಷಾ ಕೇಂದ್ರವು ಈ ಮದಕದ ಸಮೀಪವೇ ನಿರ್ಮಾಣಗೊಳ್ಳಲಿರುವುದು ಒಂದು ವೈಶಿಷ್ಟ್ಯವಾಗಿದೆ. ಅಗ್ನಿಶಮನ ಕೇಂದ್ರ ಹಾಗೂ ನೀರು ಒಂದೆಡೆಯೇ ಸಂಗಮಿಸುವುದು ಈ ಊರಿನ ಜನರ ಭಾಗ್ಯವಾಗಲಿದೆ.

ನೀರು ಶುದ್ಧಗೊಳಿಸಲು ರೀಚಾರ್ಜ್‌ ಪಿಟ್
ಮದಕವನ್ನು 156 ಮೀ. ಉದ್ದ, 20 ಮೀ. ಅಗಲ, 5 ಮೀ. ಆಳಗೊಳಿಸಿ ದಕ್ಷಿಣ ಭಾಗದಲ್ಲಿ ಯಥೇಷ್ಟ ಸ್ಥಳ ಉಳಿಸಿಕೊಂಡು ಪಶ್ಚಿಮದಲ್ಲಿ 10 ಅಡಿ ಕಾಲುದಾರಿ ಪೂರ್ವಕ್ಕೆ 5 ಮೀ. ಸ್ಥಳಾವಕಾಶದೊಂದಿಗೆ ಕೆರೆಯ ಸುತ್ತು ಒಂದೂವರೆ ಮೀಟರ್‌ ಎತ್ತರದ ತಡೆಗೋಡೆ ನಿರ್ಮಾಣ ವಾಗಲಿದೆ. ಇದರೊಂದಿಗೆ ನೀರಿನ ಸ್ವಚ್ಛತೆಗೆ ರೀಚಾರ್ಜ್‌ ಪಿಟ್ ನಿರ್ಮಾಣಗೊಳ್ಳಲಿದೆ.

Advertisement

Udayavani is now on Telegram. Click here to join our channel and stay updated with the latest news.

Next