Advertisement

SCP/TSP ಹಣ ಗ್ಯಾರಂಟಿಗಳಿಗೆ ಬಳಕೆ- ಸದನದಲ್ಲಿ ಗದ್ದಲ; ಬಾವಿಗಿಳಿದು ವಿಪಕ್ಷಗಳಿಂದ ಧರಣಿ

11:39 PM Dec 08, 2023 | Team Udayavani |

ಬೆಳಗಾವಿ: ಎಸ್‌ಸಿಪಿ ಮತ್ತು ಟಿಎಸ್‌ಪಿ ಯೋಜನೆಗೆ ಮೀಸಲಿಟ್ಟಿರುವ ಅನುದಾನವನ್ನು ಯಾವುದೇ ಕಾರಣಕ್ಕೂ ದುರ್ಬಳಕೆಯಾಗಲು ಅವಕಾಶ ನೀಡುವುದಿಲ್ಲ. ಈ ಅನುದಾನವನ್ನು ಪ.ಜಾತಿ ಮತ್ತು ಪಂಗಡದ ಜನರ ಅಭಿವೃದ್ಧಿಗೆ ವಿನಿಯೋಗಿಸುತ್ತಿರುವ ಕಾರಣ ಅನ್ಯ ಉದ್ದೇಶಕ್ಕಾಗಿ ಬಳಸಿರುವುದಿಲ್ಲ ಎಂದು ಸಮಾಜ ಕಲ್ಯಾಣ ಸಚಿವ ಡಾ| ಎಚ್‌.ಸಿ.ಮಹದೇವಪ್ಪ ಸ್ಪಷ್ಟಪಡಿಸಿದರು.

Advertisement

ವಿಧಾನಪರಿಷ‌ತ್‌ನಲ್ಲಿ ಶುಕ್ರವಾರ ಸದಸ್ಯ ಛಲವಾದಿ ನಾರಾಯಣ ಸ್ವಾಮಿ ಕೇಳಿದ ಪ್ರಶ್ನೆಗೆ ಉತ್ತರಿಸಿ, ಎಸ್‌ಸಿಎಸ್‌ಪಿ/ಟಿಎಸ್‌ಪಿ ಅನುದಾನದಲ್ಲಿ ದುರ್ಬಳಕೆ ತಡೆಯುವ ಉದ್ದೇಶದಿಂದಲೇ ಕಾಯ್ದೆಯ ಸೆಕ್ಷನ್‌ 7 (ಡಿ) ಅನ್ನು ಕೈ ಬಿಡಲು ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದರು.

ಎಸ್‌ಸಿಎಸ್‌ಪಿ/ ಟಿಎಸ್‌ಪಿ ಅಧಿನಿಯಮ 2013 ಮತ್ತು ನಿಯಮಗಳು 2017ರಲ್ಲಿ ಪ.ಜಾತಿ ಮತ್ತು ಪಂಗಡದ ಜನರಿಗೆ ನೇರವಾಗಿ ಪ್ರಯೋಜನವಾಗುವ ಕಾರ್ಯಕ್ರಮಗಳಿಗೆ ಈ ಅನುದಾನವನ್ನು ಹಂಚಿಕೆ ಮಾಡಿ ಅನುಷ್ಠಾನಗೊಳಿಸಲು ಅವಕಾಶವಿದೆ ಎಂದರು.

ಎಸ್‌.ಸಿ.ಎಸ್‌.ಪಿ., ಟಿ.ಎಸ್‌.ಪಿ. ಯೋಜನೆಯಡಿ ಗ್ಯಾರಂಟಿ ಯೋಜನೆಗಳಾದ ಗೃಹಲಕ್ಷ್ಮಿ ಯೋಜನೆಗೆ 5,075 ಕೋಟಿ ರೂ., ಅನ್ನಭಾಗ್ಯ ಯೋಜನೆಗೆ 2,779.50 ಕೋಟಿ ರೂ., ಗೃಹಜ್ಯೋತಿ ಯೋಜನೆಯಡಿ 2,410 ಕೋಟಿ ರೂ., ಶಕ್ತಿ ಯೋಜನೆಗೆ 812 ಕೋಟಿ ರೂ., ಯುವನಿಧಿ ಯೋಜನೆಗೆೆ 67.50 ಕೋಟಿ ರೂ. ಒದಗಿಸಲಾಗಿದ್ದು, ಈ ಮೊತ್ತವನ್ನು ಪ.ಜಾತಿ ಮತ್ತು ಪ.ಪಂಗಡದವರಿಗೆ ಉಪಯೋಗಿಸುತ್ತಿರುವುದರಿಂದ ಈ ಅನುದಾನದ ದುರ್ಬಳಕೆ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಿದರು.

ವಿಪಕ್ಷಗಳಿಂದ ಧರಣಿ
ಸಚಿವರಾದ ಎಚ್‌.ಸಿ.ಮಹದೇವಪ್ಪ ಮತ್ತು ಪ್ರಿಯಾಂಕ್‌ ಖರ್ಗೆ ಅವರು ನೀಡಿದ ಉತ್ತರ ವಿಪಕ್ಷದ ಸದಸ್ಯರಿಗೆ ತೃಪ್ತಿ ತರಲಿಲ್ಲ. ಸರಕಾರದ ನಿರ್ಧಾರವನ್ನು ಖಂಡಿಸಿ ಸದನದ ಬಾವಿಗಿಳಿದು ಧರಣಿ ನಡೆಸಿದರು. ಆಗ ಆಡಳಿತ ಮತ್ತು ವಿಪಕ್ಷದ ಸದಸ್ಯರ ನಡುವೆ ಮಾತಿನ ಸಮರ ನಡೆದು ಗದ್ದಲದ ವಾತಾವರಣ ನಿರ್ಮಾಣವಾಯಿತು. ಸಭಾಪತಿ ಬಸವರಾಜ ಹೊರಟ್ಟಿ ಅವರು 10 ನಿಮಿಷಗಳ ಕಾಲ ಸದನವನ್ನು ಮುಂದೂಡಿದರು. ಮತ್ತೆ ಕಲಾಪ ಆರಂಭವಾಗುತ್ತಿದ್ದಂತೆ ಸದನದ ಬಾವಿಗಿಳಿದ ವಿಪಕ್ಷ ಸದಸ್ಯರು ಸರಕಾರದ ವಿರುದ್ಧ ಘೋಷಣೆ ಕೂಗಿದರು.

Advertisement

ಸೋಮವಾರ ಚರ್ಚೆಗೆ ಅವಕಾಶ
ಸದಸ್ಯರ ಧರಣಿಯಿಂದ ಅಸಮಾಧಾನಗೊಂಡ ಸಭಾಪತಿಗಳು, ಗದ್ದಲವನ್ನು ನೋಡಿದರೆ ನನಗೆ ನೋವಾಗುತ್ತದೆ. ನಾನು ಇಲ್ಲಿ ಇರಬಾರದು. ರಾಜೀನಾಮೆ ಕೊಟ್ಟು ಮನೆಗೆ ಹೋಗಬೇಕೆಂದು ನೋವಿನಿಂದ ಹೇಳಿದರು. ಆದರೂ ವಿಪಕ್ಷದ ಸದಸ್ಯರು ಗಲಾಟೆ ನಿಲ್ಲಿಸಲಿಲ್ಲ. ಕೊನೆಗೆ ಅನಿವಾರ್ಯವಾಗಿ ಸಭಾಪತಿಗಳು ಮತ್ತೆ 10 ನಿಮಿಷಗಳ ಕಾಲ ಸದನ ಮುಂದೂಡಿದರು. ಕಲಾಪ ಆರಂಭವಾದಾಗ ಸದಸ್ಯರು ಪ್ರತಿಭಟನೆ ಮುಂದುವರಿಸಿದ್ದನ್ನು ನೋಡಿದ ಸಭಾಪತಿಗಳು ಸೋಮವಾರ ಚರ್ಚೆಗೆ ಅವಕಾಶ ಮಾಡಿಕೊಡಲಾಗುವುದು ಎಂದು ಹೇಳಿದ ಬಳಿಕ ವಿಪಕ್ಷದ ಸದಸ್ಯರು ಧರಣಿಯನ್ನು ಹಿಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next