ಬೆಂಗಳೂರು: ನಗರದ ಜನತೆಯ ಸಮಸ್ಯೆಗಳಿಗೆ ಆನ್‌ಲೈನ್ ಮೂಲಕ ಶೀಘ್ರ ಪರಿಹಾರ ಒದಗಿಸುವಲ್ಲಿ ಬಿಬಿಎಂಪಿ ವಿಫಲವಾಗಿದ್ದು, ತಾನೇ ಜಾರಿಗೊಳಿಸಿದ ಗ್ಲೋಬಲ್ ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್ ಸಿಸ್ಟಂ (ಜಿಪಿಎಂಎಸ್) ವ್ಯವಸ್ಥೆ ಮೂಲೆಗುಂಪಾಗಿದೆ.
ನಗರದ ಜನರ ಸಮಸ್ಯೆಗಳಿಗೆ ಶೀಘ್ರ ಸ್ಪಂದಿಸಿ ಸಮಸ್ಯೆಗಳಿಗೆ ಪರಿಹಾರ ಒದಗಿಸುವುದು ಹಾಗೂ ಪಾಲಿಕೆ ಅಧಿಕಾರಿಗಳು ಉತ್ತರದಾಯಿತ್ವಗೊಳಿಸುವ ಉದ್ದೇಶದಿಂದ ಜಿಪಿಎಂಎಸ್ ವ್ಯವಸ್ಥೆಯನ್ನು ಪಾಲಿಕೆಯಲ್ಲಿ 2011ರಲ್ಲಿ ಜಾರಿಗೊಳಿಸಲಾಗಿದೆ. ಜಿಪಿಎಂಎಸ್ ತಂತಾಂತ್ರಕ್ಕೆ ನಗರದ ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾದರೂ, ಪಾಲಿಕೆ ಮಾತ್ರ ತಂತ್ರಾಂಶ ಬಲಪಡಿಸುವ ಕೆಲಸಕ್ಕೆ ಮುಂದಾಗುತ್ತಿಲ್ಲ.
ಬಿಬಿಎಂಪಿ ವ್ಯಾಪ್ತಿಯಲ್ಲಿನ ಯಾವುದೇ ಸಮಸ್ಯೆಗಳನ್ನು ಬಿಬಿಎಂಪಿಯ ಗಮನಕ್ಕೆ ತರಲು ಜಿಪಿಎಂಎಸ್ ವ್ಯವಸ್ಥೆ ಸಹಕಾರಿಯಾಗಿದ್ದು, ಫೋಟೋ, ಆಡಿಯೋ ಸಮೇತವಾಗಿ ದೂರುಗಳನ್ನು ನೀಡಬಹುದಾಗಿದೆ. ಜತೆಗೆ ಸಾರ್ವಜನಿಕರ ದೂರುಗಳಿಗೆ ಪಾಲಿಕೆಯಿಂದ ಕೈಗೊಂಡ ಕ್ರಮಗಳ ಕುರಿತು ತಿಳಿಸುವ ವ್ಯವಸ್ಥೆಯೂ ತಂತ್ರಾಂಶದಲ್ಲಿದೆ.
ಅದರಂತೆ 2011ರಿಂದಲೂ ಸಾರ್ವಜನಿಕರಿಂದ ಹೆಚ್ಚಿನ ಸಂಖ್ಯೆ ದೂರುಗಳು ಬಂದರೂ, ಅವುಗಳಿಗೆ ಪರಿಹಾರ ಒದಗಿಸುವ ಕಾರ್ಯ ಪಾಲಿಕೆಯಿಂದ ಆಗುತ್ತಿಲ್ಲ. ಬೀದಿ ದೀಪ, ತ್ಯಾಜ್ಯ ಸಮಸ್ಯೆ, ರಸ್ತೆಗುಂಡಿ, ಆಸ್ತಿ ತೆರಿಗೆ ಗೊಂದಲ, ನಿಯಮ ಬಾಹಿರ ಕಟ್ಟಡ ನಿರ್ಮಾಣ ಸೇರಿದಂತೆ ಹತ್ತಾರು ವಿಚಾರಗಳಿಗೆ ಸಂಬಂಧಿಸಿದ ದೂರುಗಳು ಸಾರ್ವಜನಿಕರಿಂದ ಬರುತ್ತಿವೆ. ಆದರೆ, ಪಾಲಿಕೆಯಿಂದ ಅವುಗಳ ಪರಿಹಾರ ಮಾಡುವ ಕೆಲಸ ಆಗುತ್ತಿಲ್ಲ.
ಕಳೆದ ಒಂಬತ್ತು ವರ್ಷಗಳಲ್ಲಿ ಜಿಪಿಎಂಎಸ್ ತಂತ್ರಾಂಶಕ್ಕೆ 24 ಸಾವಿರಕ್ಕೂ ಹೆಚ್ಚಿನ ದೂರುಗಳು ಬಂದಿದ್ದು, ಈವರೆಗೆ ಕೇವಲ 31 ದೂರುಗಳಿಗೆ ಮಾತ್ರ ಸ್ಪಂದನೆ ಸಿಕ್ಕಿದೆ. ಉಳಿದ ದೂರುಗಳ ಪೈಕಿ ಹೆಚ್ಚಿನ ದೂರುಗಳು ಪ್ರಗತಿಯಲ್ಲಿದ್ದರೆ, 8 ಸಾವಿರಕ್ಕೂ ಹೆಚ್ಚಿನ ದೂರುಗಳಿಗೆ ಪರಿಹಾರ ನೀಡುವಲ್ಲಿ ಪಾಲಿಕೆ ಅಧಿಕಾರಿಗಳು ವಿಫಲರಾಗಿದ್ದಾರೆ.
ಜಿಪಿಎಂಎಸ್‌ಗೆ ಬಂದ ದೂರುಗಳ ವಿವರ
-ದಾಖಲಾದ ಒಟ್ಟು ದೂರುಗಳು 24,911
-ಪರಿಹಾರ ನೀಡುರುವುದು 31
-ಪ್ರಗತಿಯಲ್ಲಿರುವ ದೂರುಗಳು 16,659
-ಪರಿಹಾರ ದೊರೆಯುವುದು 8,221
-ಪ್ರತಿಕ್ರಿಯಿಸದ ದೂರುಗಳು 01
-ಬೇರೆ ಇಲಾಖೆಗಳಿಗೆ ವರ್ಗಾಹಿಸಿದ ದೂರುಗಳು 07