ಬೀಳಗಿ: ಪಟ್ಟಣದ ಗಾಂಧಿ ವೃತ್ತದ ಬಳಿಯಿರುವ ಜಿಲ್ಲಾ ಕೇಂದ್ರ ಗ್ರಂಥಾಲಯ ಕಟ್ಟಡವು ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿದೆ. ಅತಂತ್ರ ಕಟ್ಟಡದಲ್ಲಿ ಅನಿವಾರ್ಯವಾಗಿ ಕಾರ್ಯನಿರ್ವಹಿಸಿಕೊಂಡು ಬರುತ್ತಿರುವ ಗ್ರಂಥಾಲಯಕ್ಕೆ ಸುಸಜ್ಜಿತ ಕಟ್ಟಡ ನಿರ್ಮಿಸುವುದು ಅಗತ್ಯವಿದೆ.
ಪಟ್ಟಣದ ಕಿಲ್ಲಾ ಗಲ್ಲಿಯಲ್ಲಿ 10-09-1981ರಲ್ಲಿ ಆರಂಭವಾದ ಜಿಲ್ಲಾ ಕೇಂದ್ರ ಗ್ರಂಥಾಲಯಕ್ಕೆ 38 ವರ್ಷಗಳಸು ಧೀರ್ಘ ಇತಿಹಾಸವಿದೆ. ಪಟ್ಟಣದ ಗಾಂಧಿ ವೃತ್ತದ ಬಳಿ ಸ್ವಂತ ಕಟ್ಟಡಕ್ಕೆ ಸ್ಥಳಂತರಗೊಂಡು 20 ವರ್ಷ ಗತಿಸಿದೆ. ಆಗಿನ ಜನಸಂಖ್ಯೆಗೆ ಅನುಗುಣವಾಗಿ ನಿರ್ಮಿಸಲಾದ ಗ್ರಂಥಾಲಯ ಕಟ್ಟಡ, ಪ್ರಸ್ತುತ ಜನಸಂಖ್ಯೆಗೆ ತುಂಬಾ ಚಿಕ್ಕದಾಗಿದೆ.
ಅಲ್ಲದೆ, ಕಟ್ಟಡವೂ ಶಿಥಿಲಾವಸ್ಥೆ ಕಂಡಿದೆ. ಗ್ರಂಥಾಲಯದ ಮೇಲ್ಛಾವಣಿ ಬಿಚ್ಚಿ ಬೀಳುತ್ತಿದೆ. ಮಳೆಗಾಲದಲ್ಲಿ ಸೋರುತ್ತದೆ. ಕಿಟಕಿಗಳ ಗ್ಲಾಸ್ ಒಡೆದು ಹೋಗಿ ಅದೆಷ್ಟೋ ವರ್ಷಗಳು ಗತಿಸಿವೆ. ಗ್ರಂಥಾಲಯದ ಕಟ್ಟಡ ಸುತ್ತ ಮುಳ್ಳುಕಂಟಿ, ಕಸ, ಚರಂಡಿ ನೀರು ತುಂಬಿಕೊಂಡು ಗ್ರಂಥಾಲಯದ ಸುತ್ತಲಿನ ಪರಿಸರ ಅವ್ಯಸ್ಥೆಯ ಆಗರವಾಗಿದೆ. ಪರಿಣಾಮ, ಸೊಳ್ಳೆಗಳ ಕಾಟ ಹಾಗೂ ಪರಿಸರ ಅಶುಚಿತ್ವದಿಂದಾಗಿ ಓದುಗರು ಗ್ರಂಥಾಲಯದಲ್ಲಿ ನೆಮ್ಮದಿಯಿಂದ ಪುಸ್ತಕಗಳ ಪುಟ ತಿರುಗಿಸದ ಸ್ಥಿತಿ ನಿರ್ಮಾಣವಾಗಿದೆ.
ಸ್ಪರ್ಧಾತ್ಮಕ ಪುಸ್ತಕಗಳ ಕೊರತೆ: ಜಿಲ್ಲಾ ಕೇಂದ್ರ ಗ್ರಂಥಾಲಯದಲ್ಲಿ ಸ್ಥಳವಕಾಶವಿಲ್ಲದಂತಾಗಿದೆ. ಇರುವ ಚಿಕ್ಕ ಜಾಗದಲ್ಲಿಯೇ ಪುಸ್ತಕಗಳನ್ನು ಇಡುವುದರ ಜತೆಗೆ ಓದುಗರಿಗೆ ಟೇಬಲ್ ಹಾಗೂ ಆಸನ ವ್ಯವಸ್ಥೆ ಮಾಡಲಾಗಿದೆ. ವಿಶಾಲ ಜಾಗೆಯಿಲ್ಲದ ಪರಿಣಾಮ, ಪುಸ್ತಕಗಳನ್ನು ಪೇರಿಸಿಡಲಾಗದೆ ಸಾವಿರಾರು ಪುಸ್ತಕಗಳನ್ನು ಗಂಟುಕಟ್ಟಿ ಕೊಠಡಿಯೊಂದರಲ್ಲಿ ತುಂಬಲಾಗಿದೆ. ಇದರಿಂದ ಹಲವಾರು ಮಹತ್ವದ ಪುಸ್ತಕಗಳು ಓದುಗರ ಕೈ ಸೇರದಂತಾಗಿವೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಗತ್ಯವಿರುವ ಪುಸ್ತಕಗಳ ಕೊರತೆ ಇಲ್ಲಿ ಎದ್ದು ಕಾಣುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧಾತ್ಮಕ ಪುಸ್ತಕಗಳ ಪೂರೈಕೆ ಆಗಬೇಕಿರುವುದು ಅಗತ್ಯವಿದೆ ಎನ್ನುವುದು ಹಲವಾರು ವಿದ್ಯಾರ್ಥಿಗಳ ಒತ್ತಾಯವಾಗಿದೆ.
ಮೂಲ ಸೌಕರ್ಯವಿಲ್ಲ: ಗ್ರಂಥಾಲಯದಲ್ಲಿ ಸುಮಾರು 20 ಸಾವಿರದಷ್ಟು ಪುಸ್ತಕಗಳಿವೆ. ಹಲವಾರು ಮ್ಯಾಗಝಿನ್ ಮತ್ತು ಎಲ್ಲ ವೃತ್ತ ಪತ್ರಿಕೆಗಳು ಬರುತ್ತವೆ. ಆದರೆ, ಕುಳಿತು ಓದಲು ವಿಫುಲ ಸ್ಥಳಾವಕಾಶವಿಲ್ಲದ ಕಾರಣ, ಗ್ರಂಥಾಲಯದ ಕಡೆಗೆ ಮುಖ ಮಾಡುವವರ ಸಂಖ್ಯೆ ತೀರಾ ಕಡಿಮೆಯಿದೆ. ನಿತ್ಯ, ಸುಮಾರು 20 ಓದುಗರ ಸಂಖ್ಯೆ ದಾಟಲಾರದು. ಬೆಳಗ್ಗೆ 8.30ರಿಂದ 11 ಹಾಗೂ ಸಂಜೆ 4ರಿಂದ ರಾತ್ರಿ 8ರ ವರೆಗೆ ಮಾತ್ರ ಗ್ರಂಥಾಲಯ ತೆರೆದಿರುತ್ತದೆ. ಬೆಳಗ್ಗೆ 8.30ರಿಂದ ಸಂಜೆ 8ರ ವರೆಗೆ ನಿರಂತರ ಗ್ರಂಥಾಲಯ ಕಾರ್ಯನಿರ್ವಹಿಸಬೇಕು. ಅದಕ್ಕೆ ಬೇಕಾದ ಎಲ್ಲ ಮೂಲ ಸೌಕರ್ಯ ಒದಗಿಸಬೇಕೆನ್ನುವುದು ಸ್ಥಳೀಯ ನಾಗರಿಕರ ಒತ್ತಾಯವಾಗಿದೆ. ಅಲ್ಲದೆ, ಇಲ್ಲಿ ಕುಡಿವ ನೀರಿನ ವ್ಯವಸ್ಥೆಯೇ ಇಲ್ಲ. ಶೌಚಾಲಯವಿಲ್ಲ ಹಾಗೂ ಸಿಬ್ಬಂದಿ ಕೊರತೆಯಿದ್ದು, ಈ ಎಲ್ಲ ಸೌಕರ್ಯ ಕಲ್ಪಿಸುವ ಅಗತ್ಯತೆ ಬಹಳಷ್ಟಿದೆ.
ಪಪಂ ಸೆಸ್ ಮರೀಚಿಕೆ: ಪಟ್ಟಣ 17,792 ಜನಸಂಖ್ಯೆ ಹೊಂದಿದೆ. ಜನರಿಂದ ಪಪಂ ತೆರಿಗೆ ರೂಪದಲ್ಲಿ ವಸೂಲಿ ಮಾಡುವ ಹಣದಲ್ಲಿ ಗ್ರಂಥಾಲಯ ಸೆಸ್ ಶೇ.6ರಷ್ಟಿದೆ. ಪ್ರತಿವರ್ಷವೂ ಗ್ರಂಥಾಲಯ ಸೆಸ್ 1.50 ಲಕ್ಷಕ್ಕೂ ಹೆಚ್ಚು ಪಪಂಗೆ ಸಂದಾಯವಾಗುತ್ತದೆ. ಆದರೆ, ಪಪಂನವರು ಗ್ರಂಥಾಲಯಕ್ಕೆ ತಲುಪಿಸಬೇಕಾದ ಸೆಸ್ ಹಣ ಸರಿಯಾಗಿ ತಲುಪಿಸುತ್ತಿಲ್ಲ. ಗ್ರಂಥಾಲಯ ಸೆಸ್ ಹಣ ಪಪಂ ಸಕಾಲಕ್ಕೆ ಸಂದಾಯ ಮಾಡಿದರೆ, ಗ್ರಂಥಾಲಯದ ನಿರೀಕ್ಷಿತ ಅಭಿವೃದ್ಧಿ ಕಾಣಲು ಸಾಧ್ಯವಿದೆ.
ಗ್ರಂಥಾಲಯದಲ್ಲಿ ತುಂಬಾ ಸ್ಥಳ ಅಭಾವವಿದೆ. ಪುಸ್ತಕಗಳನ್ನಿಡಲೂ ಜಾಗವಿಲ್ಲ. ಎಲ್ಲ ಪುಸ್ತಕಗಳನ್ನಿಟ್ಟರೆ ಓದುಗರಿಗೆ ಕೂಡಿಸಲು ಜಾಗ ಸಾಲದು. ಸ್ಪರ್ಧಾತ್ಮಕ ಪುಸ್ತಕ ಕೊರತೆಯಿದೆ. ಸುಸಜ್ಜಿತ ಕಟ್ಟಡ ನಿರ್ಮಾಣ ಶೀಘ್ರವಾಗಬೇಕಿದೆ. ಇ-ಗ್ರಂಥಾಲಯ ಮಾಡಲು ಸಿದ್ಧತೆ ನಡೆದಿದೆ. ಕಾರಣ, ಮೊದಲು ಸುಸಜ್ಜಿತ ಕಟ್ಟಡ ಮಾಡಬೇಕಿರುವುದು ಹಾಗೂ ಸಿಬ್ಬಂದಿ ಒದಗಿಸುವುದು ಅವಶ್ಯವಿದೆ.
–ವೈ.ಎಂ. ತಳವಾರ, ಗ್ರಂಥಪಾಲಕ
-ರವೀಂದ್ರ ಕಣವಿ