Advertisement
ಷೇರು ಪೇಟೆ ಪಾಲಿಗೆ ಸೋಮವಾರ ಕರಾಳ ದಿನ. ನಾಲ್ಕು ವರ್ಷಗಳ ಬಳಿಕ ಬಾಂಬೆ ಷೇರು ಮಾರುಕಟ್ಟೆ ದಾಖಲೆ ಕುಸಿತ ಕಂಡು, ಹೂಡಿಕೆದಾರರು ಸುಮಾರು 6 ಲಕ್ಷ ಕೋ. ರೂ. ಕಳೆದುಕೊಂಡಿದ್ದಾರೆ. ಇಂಥ ಮಹಾ ಕುಸಿತವನ್ನು ರಕ್ತದೋಕುಳಿ, ರಕ್ತಪಾತ ಎಂಬಿತ್ಯಾದಿಯಾಗಿ ವರ್ಣಿಸುವುದುಂಟು. ಷೇರು ವಹಿವಾಟಿನಲ್ಲಿ ಏರುಪೇರು ಇರುವುದು ಸಾಮಾನ್ಯವಾದರೂ ಈ ಮಾದರಿಯ ಕುಸಿತ ಮಾತ್ರ ಇಡೀ ಮಾರುಕಟ್ಟೆಯನ್ನು ಅಲ್ಲೋಲಕಲ್ಲೋಲ ಮಾಡಿ ಬಿಡುತ್ತದೆ. ಹಾಗೆಂದು ಈ ಮಹಾಕುಸಿತ ಭಾರತಕ್ಕೆ ಮಾತ್ರ ಸೀಮಿತವಲ್ಲ. ಬಹುತೇಕ ದೇಶಗಳು ಈ ಕುಸಿತವನ್ನು ಅನುಭವಿಸಿವೆ.ಕುಸಿತಕ್ಕೆ ಮುಖ್ಯ ಕಾರಣ ಜಗತ್ತನ್ನು ಹೈರಾಣಾಗಿಸಿರುವ ಕೊರೊನಾ ವೈರಸ್ ಕಾಟ. ಜಾಗತಿಕವಾಗಿ 1 ಲಕ್ಷಕ್ಕೂ ಅಧಿಕ ಮಂದಿ ಕೊರೊನಾ ವೈರಸ್ ಬಾಧಿತರಾಗಿರುವುದು ದೃಢಪಟ್ಟಿದೆ ಹಾಗೂ ಸಾವಿನ ಸಂಖ್ಯೆ 4000 ಸಮೀಪಿಸಿದೆ. ಭಾರತದಲ್ಲೂ 40ಕ್ಕೂ ಹೆಚ್ಚು ಮಂದಿಗೆ ಕೊರೊನಾ ವೈರಸ್ ಸೋಂಕು ತಟ್ಟಿರುವುದು ದೃಢಪಟ್ಟಿದೆ. ಕೊರೊನಾದಿಂದಾಗಿ ಪ್ರವಾಸೋದ್ಯಮ, ವಾಣಿಜ್ಯ, ರಫ್ತು ಮತ್ತು ವಾಯುಯಾನ ಕ್ಷೇತ್ರಗಳು ಇನ್ನಿಲ್ಲದ ರೀತಿಯಲ್ಲಿ ಬಾಧಿತವಾಗಿವೆ. ಇದು ಜಾಗತಿಕ ಆರ್ಥಿಕತೆಯ ಮೇಲೆ ಭಾರೀ ಪ್ರತಿಕೂಲ ಪರಿಣಾಮಗಳನ್ನು ಬೀರಿದೆ. ಕೆಲವು ಅಭಿವೃದ್ಧಿ ಹೊಂದಿದ ದೇಶಗಳು ಪರಿಸ್ಥಿತಿ ಕೈಮೀರುವ ಮೊದಲೇ ಎಚ್ಚೆತ್ತುಕೊಂಡ ಕಾರಣ ತುಸು ನೆಮ್ಮದಿಯಿಂದಿವೆ. ಆದರೆ ಭಾರತದಂಥ ಅಭಿವೃದ್ಧಿ ಹೊಂದುತ್ತಿರುವ ದೇಶಗಳು ಮಾತ್ರ ಆರ್ಥಿಕ ಕ್ಷೇತ್ರವನ್ನು ನಿಯಂತ್ರಣಕ್ಕೆ ತರಲು ಪರದಾಡುತ್ತಿವೆ.
ಇದರ ಜೊತೆಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ದಿಢೀರ್ ಎಂದು ಕುಸಿದಿರುವದು ಕೂಡ ಷೇರುಗಳ ಮೇಲೆ ಪರಿಣಾಮ ಬೀರಿದೆ. ಸೌದಿ ಅರೇಬಿಯ ಮತ್ತು ರಷ್ಯಾ ನಡುವಿನ ತೈಲದರ ಸಮರದ ಪರಿಣಾಮವಾಗಿ ಕಚ್ಚಾತೈಲ ಬೆಲೆ 1991ರ ಮಟ್ಟಕ್ಕೆ ತಲುಪಿದೆ. ಶೇ.85ರಷ್ಟು ತೈಲವನ್ನು ಆಮದುಗೊಳಿಸುತ್ತಿರುವ ನಮಗೆ ಇದು ಶುಭ ಸುದ್ದಿಯೇ ಆಗಿದ್ದರೂ ಅದರ ಜಾಗತಿಕ ಪರಿಣಾಮವನ್ನು ನಾವೂ ಅನುಭವಿಸಬೇಕಾಗಿದೆ. ದೀರ್ಘಾವಧಿಗೆ ಕಚ್ಚಾತೈಲ ಬೆಲೆ ಕುಸಿದರೆ ತೈಲ ಆಮದು ಮಾಡಿಕೊಳ್ಳುವ ದೇಶಗಳು ಅದರ ಭರಪೂರ ಲಾಭ ಎತ್ತಿಕೊಳ್ಳುತ್ತವೆ. ಧಾರಾಳ ತೈಲ ಆಮದು ಮಾಡಿಕೊಂಡು ದಾಸ್ತಾನು ಇಡಲು ಉತ್ತಮ ಅವಕಾಶ. ಆದರೆ ಇದೇ ವೇಳೆ ತೈಲ ಕಂಪೆನಿಗಳು ಬೆಲೆ ಕುಸಿತದ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸುವ ಕೆಲಸವನ್ನೂ ಮಾಡಬೇಕು.