Advertisement

ತೆರೆದ ಕೆರೆ ಗೇಟ್; ನಿಟ್ಟುಸಿರು ಬಿಟ್ಟ ಜನ

05:34 PM Aug 11, 2019 | Team Udayavani |

ಅಳ್ನಾವರ: ಪಟ್ಟಣದ ಜನವಸತಿ ಪ್ರದೇಶಕ್ಕೆ ಮುಳುಗಡೆ ಭೀತಿಯನ್ನೊಡ್ಡಿದ್ದ ಹುಲಿಕೇರಿ ಕೆರೆಯ ಎರಡು ಗೇಟ್‌ಗಳನ್ನು ಶನಿವಾರ ತೆರೆದು ನೀರು ಹೊರಬಿಟ್ಟಿದ್ದು, ಜನರು ಕೊಂಚ ನಿರಾಳರಾಗಿದ್ದಾರೆ.

Advertisement

ಕೆರೆ ತುಂಬಿದ ಸಂದರ್ಭದಲ್ಲಿ ಗೇಟ್‌ಗಳನ್ನು ತೆರೆಯುವುದು ವಾಡಿಕೆ. ಆದರೆ ಈ ಕೆರೆಯ ಗೇಟ್‌ಗಳನ್ನು ತೆರೆಯಲು ಸಾಧ್ಯವಾಗದ್ದರಿಂದ ಅಪಾಯ ಎದುರಾಗಿತ್ತು. ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದವರು ಆಗಮಿಸಿ ನೀರಲ್ಲಿ ಮುಳುಗಿ ಕೆರೆಯ ಗೇಟ್‌ಗಳನ್ನು ತೆರೆದ ನಂತರ ಕೈಯಲ್ಲಿ ಜೀವ ಹಿಡಿದುಕೊಂಡಿದ್ದ ಜನರು ನಿಟ್ಟುಸಿರು ಬಿಟ್ಟರು. ನೀರಾವರಿ ಇಲಾಖೆಯ ಅಧಿಕಾರಿ ಸ್ಥಳದಲ್ಲಿಯೇ ಉಳಿದಿದ್ದು, ಪರಿಸ್ಥಿತಿ ಮೇಲೆ ನಿಗಾ ಇಟ್ಟಿದ್ದಾರೆ.

ಏನಾಗಿತ್ತು? ಏನಾಗುತ್ತಿತ್ತು?: ಸತತ ಮಳೆಯಿಂದ ತುಂಬಿ ಹರಿಯುತ್ತಿದ್ದ ಇಂದ್ರಮ್ಮನ ಕೆರೆಯ ನೀರು ಅಳ್ನಾವರ ಪಟ್ಟಣಕ್ಕೆ ನುಗ್ಗಿ ಅಪಾಯದ ಕರೆಗಂಟೆ ಬಾರಿಸಿತ್ತು. ಸಂತ್ರಸ್ತರನ್ನು ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿತ್ತು. ಈ ನಡುವೆ ಕೆರೆ ಕಟ್ಟೆ ಒಡೆಯುವ ಹಂತಕ್ಕೆ ಬಂದು ನಿಂತಿತ್ತು. ಅವಘಡ ಸಂಭವಿಸಿದ್ದರೆ ಖಾನಾಪುರ ತಾಲೂಕಿನ ಮೂರ್‍ನಾಲ್ಕು ಗ್ರಾಮಗಳು, ಅಳ್ನಾವರ ಪಟ್ಟಣವೂ ಸೇರಿದಂತೆ ಹಳಿಯಾಳ ತಾಲೂಕಿನ ಹಳ್ಳಿಗಳಿಗೂ ನೀರು ನುಗ್ಗಿ ಮುಳುಗಡೆಯಾಗುವ ಸಂಭವ ಅಧಿಕವಾಗಿತ್ತು. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಅಳ್ನಾವರ ಪಟ್ಟಣಿಗರನ್ನು ಧಾರವಾಡಕ್ಕೆ ಸ್ಥಳಾಂತರಿಸಲಾಗಿತ್ತು.

ಇದೀಗ ಎರಡು ದಿನಗಳಿಂದ ಮಳೆ ಪ್ರಮಾಣ ಇಳಿಮುಖವಾಗಿದ್ದು ನೀರು ಹರಿಯುವುದು ಕಡಿಮೆಯಾಗಿದೆ. ಕೆರೆ ಗೇಟ್‌ಗಳನ್ನೂ ತೆರೆಯಲಾಗಿದೆ. ಪರಿಸ್ಥಿತಿ ತಹಬದಿಗೆ ಬಂದ ಹಿನ್ನೆಲೆಯಲ್ಲಿ ಧಾರವಾಡದಿಂದ ಸಂತ್ರಸ್ತರು ಅಳ್ನಾವರಕ್ಕೆ ಶನಿವಾರ ಮರಳಿದ್ದಾರೆ. ಆದರೂ ಜನರಲ್ಲಿ ಪ್ರವಾಹದ ಭೀತಿ ಮಾತ್ರ ಮುಂದುವರಿದಿದ್ದು, ನಿದ್ದೆಗೆಟ್ಟು ಕುಳಿತುಕೊಳ್ಳುವಂತಾಗಿದೆ.

ಸತತ ಮಳೆಯಿಂದ ಅಪಾಯದ ಸುಳಿಗೆ ಸಿಲುಕಿರುವ ಹುಲಿಕೇರಿ ಇಂದ್ರಮ್ಮನ ಕೆರೆಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಶನಿವಾರ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು. ಜನರ ಜೀವ ರಕ್ಷಣೆ ಮತ್ತು ಆಸ್ತಿಪಾಸ್ತಿ ರಕ್ಷಣೆಗೆ ಕೈಕೊಂಡಿರುವ ಮುಂಜಾಗ್ರತಾ ಕ್ರಮಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.

Advertisement

ಮಳೆ ಸಂತ್ರಸ್ತರಿಗೆ ಅಗತ್ಯ ನೆರವನ್ನು ಸರ್ಕಾರದಿಂದ ಕೊಡಿಸುವುದಾಗಿ ಭರವಸೆ ನೀಡಿದ ಸಚಿವ ಜೋಶಿ, ಒಡೆಯುವ ಹಂತದಲ್ಲಿರುವ ಒಡ್ಡಿನ ರಕ್ಷಣಾ ಕಾರ್ಯವನ್ನು ತುರ್ತಾಗಿ ಕೈಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕೆರೆಯ ಎರಡು ಗೇಟ್‌ಗಳನ್ನು ತೆರೆದು ನೀರು ಹೊರಗೆ ಬಿಡಲಾಗುತ್ತಿದೆ. ಕೋಡಿಯ ಮೇಲೆ ನೀರು ಹರಿಯುವುದು ಸ್ವಲ್ಪ ಮಟ್ಟಿಗೆ ತಗ್ಗಿದೆ. ಭಯ ಪಡುವ ಅಗತ್ಯವಿಲ್ಲದಿದ್ದರೂ ಜನರು ಜಾಗೃತರಾಗಿರಬೇಕಿದೆ ಎಂದು ಅಧಿಕಾರಿಗಳು ತಿಳಿಸಿದರು.

ಮಳೆ ಇಳಿಮುಖವಾದ ಮೇಲೆ ಪರಿಹಾರ ಕಾರ್ಯ ಕೈಕೊಳ್ಳಲಾಗುತ್ತದೆ. ಅಲ್ಲಿಯವರೆಗೆ ಸಾರ್ವಜನಿಕರು ಸಹಕರಿಸಬೇಕು. ತೊಂದರೆಯಲ್ಲಿರುವವರಿಗೆ ನೀರು, ಊಟ ತಲುಪಿಸಬೇಕು. ದೀಪಕ್ಕಾಗಿ ಸೀಮೆಎಣ್ಣೆಯನ್ನು ಪೂರೈಸುವಂತೆ ಜೋಶಿ ತಿಳಿಸಿದರು. ಮಳೆಯಿಂದ ಹಾನಿಗೊಳಗಾದ ಕುಟುಂಬಗಳಿಗೆ ಪರಿಹಾರ ಹಣದ ಚೆಕ್‌ನ್ನು ಸಚಿವರು ವಿತರಿಸಿದರು.

ಹುಲಿಕೇರಿಗೂ ಊಟ: ಪಟ್ಟಣದಲ್ಲಿ ತೆರೆಯಲಾದ ಪುನರ್ವಸತಿ ಕೇಂದ್ರದಲ್ಲಿ ಊಟ-ವಸತಿ ವ್ಯವಸ್ಥೆ ಮಾಡಲಾಗಿದೆ. ಪ್ರವಾಹ ಪೀಡಿತ ಪ್ರದೇಶ ಹುಲಿಕೇರಿ ಗ್ರಾಮದ ಜನರಿಗೂ ಊಟವನ್ನು ಪೂರೈಸಲಾಗುತ್ತಿದೆ. ಮಳೆಯಿಂದ ಗ್ರಾಮದಲ್ಲಿ ಅನೇಕ ಮನೆಗಳ ಗೋಡೆಗಳು ಬೀಳುವ ಹಂತದಲ್ಲಿದ್ದು, ಅದರಲ್ಲಿ ವಾಸಿಸುವುದು ಅಪಾಯಕಾರಿಯಾಗಿದೆ. ನಿರಾಶ್ರಿತರಾದ ಕುಟುಂಬಗಳಿಗೆ ಮಳೆಯಿಂದ ರಕ್ಷಿಸಿಕೊಳ್ಳಲು ತಾಡಪತ್ರಿ ಪೂರೈಸುವಂತೆ ಸಚಿವರಿಗೆ ಹುಲಿಕೇರಿ ಗ್ರಾಮಸ್ಥರು ಮನವಿ ಮಾಡಿದರು.

ಹುಲಿಕೇರಿ ಕೆರೆಗೆ ಜೋಶಿ ಭೇಟಿ; ನೆರವಿನ ಭರವಸೆ

ಶಾಶ್ವತ ನಿವಾರಣೆ ಕ್ರಮ:

ಹುಲಿಕೇರಿಯ ಇಂದ್ರಮ್ಮನ ಕೆರೆಯಿಂದ ಶಾಶ್ವತವಾಗಿ ಅನಾಹುತ ಸಂಭವಿಸದಿರಲು ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಚಿಂತಿಸಲಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು. ಕೆರೆ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಕುರಿತು ಜಿಲ್ಲಾಧಿಕಾರಿಗೆ ಸೂಚನೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಸೂಕ್ತ ಪರಿಹಾರ ಕಂಡುಕೊಳ್ಳಲಾಗುವುದು ಎಂದು ತಿಳಿಸಿದರು. ಕಂಬಾರಗಣವಿ ರಸ್ತೆ ಸಮಸ್ಯೆ ಕುರಿತು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳೊಂದಿಗೆ ಮಾತನಾಡಿದ್ದು, ಶಾಶ್ವತ ಪರಿಹಾರಕ್ಕಾಗಿ ಸೂಕ್ತ ಯೋಜನೆ ರೂಪಿಸಿ ಮೇಲಾಧಿಕಾರಿಗಳಿಗೆ ಹಾಗೂ ತಮಗೆ ನೀಡುವಂತೆ ಹೇಳಿದ್ದೇನೆ. ಆ ಗ್ರಾಮಕ್ಕೆ ರಸ್ತೆ ಸಂಪರ್ಕ ಕಡಿತಗೊಂಡ ಹಿನ್ನೆಲೆಯಲ್ಲಿ ರೈಲ್ವೆ ಮೂಲಕ ಆಹಾರ, ನೀರು ಹಾಗೂ ಅಗತ್ಯ ವಸ್ತುಗಳನ್ನು ಕಳುಹಿಸುವಂತೆ ರೈಲ್ವೆ ಜಿಎಂಗೆ ಸೂಚಿಸಲಾಗಿದೆ ಎಂದರು. ಮಳೆಯಿಂದ ಹದಗೆಟ್ಟ ಮೂಲಸೌಕರ್ಯಗಳ ದುರಸ್ತಿ ಕಾರ್ಯವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸೇರಿ ನಡೆಸಲಿವೆ. ಈಗಾಗಲೇ ಸೇತುವೆ ನಿರ್ಮಾಣಗಳ ಕುರಿತು ಪ್ರಸ್ತಾವ ಸಲ್ಲಿಸುವಂತೆ ಶಾಸಕರಿಗೆ ತಿಳಿಸಲಾಗಿದೆ. ಇದಲ್ಲದೇ ಸ್ಮಾರ್ಟ್‌ಸಿಟಿ ಯೋಜನೆ ಅನುದಾನವನ್ನು ವಿಶೇಷವಾಗಿ ಹಳೇ ಬಸ್‌ನಿಲ್ದಾಣ ಸೇರಿದಂತೆ ಇತರ ಕಡೆಗಳಲ್ಲಿ ಬಳಸಲು ಪ್ರಸ್ತಾವನೆಗಳನ್ನು ಸಲ್ಲಿಸಿದ್ದಾರೆ. ಈ ಕುರಿತು ಪರಿಶೀಲಿಸಿ, ಚರ್ಚೆ ನಡೆಸಿ ಮುಂದಿನ ದಿನಗಳಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಕೇಂದ್ರ-ರಾಜ್ಯ ಸಮನ್ವಯದಿಂದ ನೆರೆ ನಿರ್ವಹಣೆ:

ಮಳೆಯಿಂದ ಹದಗೆಟ್ಟಿರುವ ರಸ್ತೆ, ಸೇತುವೆ ಮೊದಲಾದ ಮೂಲ ಸೌಕರ್ಯಗಳ ದುರಸ್ತಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಪರಸ್ಪರ ಸಹಕಾರದಿಂದ ಕಾರ್ಯ ನಿರ್ವಹಿಸಲಿವೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅತಿವೃಷ್ಟಿಯಿಂದ ಬೆಳೆಹಾನಿಯಾಗಿರುವ, ಭಾಗಶಃ ಮನೆ ಹಾನಿಯಾಗಿರುವ ಕುಟುಂಬಗಳಿಗೆ ಹೆಚ್ಚಿನ ಸಹಾಯ ಮಾಡುವ ನಿಟ್ಟಿನಲ್ಲಿ ಕ್ರಮ ಜರುಗಿಸಲು ಜಿಲ್ಲಾಧಿಕಾರಿಗಳಿಗೆ ತಿಳಿಸಲಾಗಿದೆ ಎಂದರು.

ಧಾರವಾಡ ತಾಲೂಕಿನ ಮಂಡ್ಯಾಳ, ರಾಮಾಪುರ, ವೀರಾಪುರ ಕಲ್ಲಾಪುರ, ಪ್ರಭು ಹೊನ್ನಾಪುರ ಮತ್ತಿತರ ಸ್ಥಳಗಳಿಗೆ ಭೇಟಿ ನೀಡಿ, ಸ್ಥಳೀಯರ ಅಹವಾಲು ಆಲಿಸಿ, ಮಳೆಯಿಂದ ಉಂಟಾಗಿರುವ ನಷ್ಟ ಹಾಗೂ ತೊಂದರೆಯನ್ನು ಕೇಂದ್ರ ಸಚಿವರು ಪರಿಶೀಲಿಸಿದರು. ಈ ಮಧ್ಯೆ ಕಲ್ಲಾಪುರ-ವೀರಾಪುರ ಹಳ್ಳದ ಮಧ್ಯೆ ಕಳೆದ ಮೂರು ದಿನಗಳಿಂದ ಕಣ್ಮರೆಯಾಗಿರುವ ಬಸಪ್ಪ ಜ್ಯೋತೆಪ್ಪ ಪಾಟೀಲ( 54) ಅವರ ಮನೆಗೆ ಭೇಟಿ ನೀಡಿದ ಸಚಿವರು, ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next