ನವದೆಹಲಿ: ಆನ್ ಲೈನ್ ಗೇಮ್ (Online Gaming) App ವಿರುದ್ಧದ ಜಾರಿ ನಿರ್ದೇಶನಾಲಯದ ತನಿಖೆಯಲ್ಲಿ ಚೀನಾ ಪ್ರಜೆಗಳು 400 ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಶಾಮೀಲಾಗಿರುವುದು ಪತ್ತೆಯಾಗಿರುವುದಾಗಿ ವರದಿ ತಿಳಿಸಿದೆ.
ಆನ್ ಲೈನ್ ಗೇಮಿಂಗ್ App ಫೈವಿನ್ ಗೆ ಲಿಂಕ್ ಮಾಡಲಾದ ಕೆಲವು ಚೀನಾ ಪ್ರಜೆಗಳ ಖಾತೆಗಳನ್ನು ಜಾರಿ ನಿರ್ದೇಶನಾಲಯ ಈಗ ಸ್ಥಗಿತಗೊಳಿಸಿರುವುದಾಗಿ ವರದಿ ವಿವರಿಸಿದೆ. ಅಂದಾಜು 25 ಕೋಟಿ ರೂಪಾಯಿ ಹಣವನ್ನು ಇ.ಡಿ ಜಪ್ತಿ ಮಾಡಿದೆ.
ಈಗಾಗಲೇ App ವಂಚನೆ ಪ್ರಕರಣದಲ್ಲಿ ಚೀನಾ ಪ್ರಜೆಗಳನ್ನು ಬೆಂಬಲಿಸಿದ್ದ ನಾಲ್ವರು ಭಾರತೀಯರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಕೋಲ್ಕತಾದಲ್ಲಿ ಬಂಧಿಸಿದ್ದರು.
ಮಿನಿ ಗೇಮ್ಸ್ ಗಳನ್ನು ಆಡುವ ಮೂಲಕ ಸುಲಭವಾಗಿ ಹಣಗಳಿಸಬಹುದು ಎಂಬ ಆಮಿಷದೊಂದಿಗೆ ಫೈವಿನ್ App ಬಳಕೆದಾರರನ್ನು ಸೆಳೆದು ವಂಚಿಸುತ್ತಿತ್ತು ಎಂದು Binance ಪ್ರಕಟನೆ ತಿಳಿಸಿದೆ.
ಸುಲಭವಾಗಿ ಹಣ ಗಳಿಸಬಹುದು ಎಂಬ ಆಮಿಷದಿಂದ ಹೊಸ ಬಳಕೆದಾರರು Appನಲ್ಲಿ ಖಾತೆ ತೆರೆದು ವಿವಿಧ ಪೇಮೆಂಟ್ ಮಾರ್ಗದ ಮೂಲಕ ಗೇಮ್ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಬಳಕೆದಾರರು Appನಲ್ಲಿ ಗಣನೀಯ ಪ್ರಮಾಣದಲ್ಲಿ ಹಣವನ್ನು ತೊಡಗಿಸಿದ ನಂತರ ಹಣವನ್ನು ಹಿಂಪಡೆಯುವ ಅವಕಾಶವನ್ನು App ಬ್ಲಾಕ್ ಮಾಡುವ ಮೂಲಕ ಬಳಕೆದಾರರು ವಂಚನೆಗೊಳಗಾಗುತ್ತಿದ್ದರು ಎಂದು ಪ್ರಕಟನೆ ವಿವರಿಸಿದೆ.
ಗೇಮ್ ಚಟುವಟಿಕೆಯ ಆಮಿಷದ ಯೋಜನೆಯಲ್ಲಿ ಸುಮಾರು 400 ಕೋಟಿ ರೂಪಾಯಿ ವಂಚಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದು, ಈ ಹಣವನ್ನು ವಿವಿಧ ಕ್ರಿಪ್ಟೋಕರೆನ್ಸಿಗೆ ವರ್ಗಾಯಿಸಿರುವುದಾಗಿ ವರದಿ ತಿಳಿಸಿದೆ.
ಈ ಆನ್ ಲೈನ್ ಗೇಮಿಂಗ್ Appಗೆ ಹೆಚ್ಚು, ಹೆಚ್ಚು ಜನರು ವಂಚನೆಗೊಳಗಾಗುತ್ತಿರುವ ಬಗ್ಗೆ ಸ್ಥಳೀಯ ಪೊಲೀಸರು ದೂರುಗಳನ್ನು ಸ್ವೀಕರಿಸತೊಡಗಿದ್ದರು. ನಂತರ ದೂರುಗಳ ಸಂಖ್ಯೆ ಹೆಚ್ಚಾದ ಮೇಲೆ ಪ್ರಕರಣವನ್ನು ಜಾರಿ ನಿರ್ದೇಶನಾಲಯಕ್ಕೆ ವರ್ಗಾಯಿಸಲಾಗಿತ್ತು. ಆ ಬಳಿಕ ಕೆಲವು ಭಾರತೀಯರ ನೆರವಿನೊಂದಿಗೆ ಚೀನಾ ಪ್ರಜೆಗಳು ಈ ವಂಚನೆ ಎಸಗಿರುವುದು ತನಿಖೆಯಲ್ಲಿ ಪತ್ತೆಯಾಗಿತ್ತು.