ಗ್ರೂಪ್ ಹೆಸರು: ಪುಳ್ಚಾರ್
ಅಡ್ಮಿನ್‌ಗಳು: ಸುಹಾಸ್ ಭಟ್, ಆದಿತ್ಯ ಕೆ.ಬಿ., ಪ್ರತಾಪ್ ರಾವ್, ಚಿಂತನ್ ರಾಘವ, ಇತರರು.
ವರ್ಷಾನುಗಟ್ಟಲೆ ಯುದ್ಧ ನಡೆದಿದ್ದರ ಬಗ್ಗೆ ಇತಿಹಾಸದ ಪಠ್ಯಗಳಲ್ಲಿ ಓದಿದ್ದೆ. ಅಂತಿಮವಾಗಿ ಒಬ್ಬರು ಸೋಲುವುದು, ಮತ್ತೂಬ್ಬರು ಗೆಲ್ಲುವುದು ಇಲ್ಲವೇ ಯುದ್ಧವಿರಾಮ ಘೋಷಣೆಯಾಗಿ ಆ ಯುದ್ಧಗಳು ಮುಗಿಯುತ್ತಿದ್ದವು ಎಂಬುದನ್ನೂ ಕೇಳಿದ್ದೆ. ಆದರೆ, ನಮ್ಮ ವಾಟ್ಸಾéಪ್ ಗ್ರೂಪ್‌ನಲ್ಲಿ ನಡೆಯುತ್ತಿರುವ “ಮೊದಲ ಆಮ್ಲೆಟ್ ಮಹಾಯುದ್ಧ’ ಇವತ್ತಿನ ವರೆಗೂ ನಿಂತೇ ಇಲ್ಲ. ಸುಮಾರು ಎರಡು ವರ್ಷದಿಂದ ನಡೆಯುತ್ತಲೇ ಇದೆ. ಅವತ್ತೂಂದು ದಿನ, ನಮ್ಮ ಗ್ರೂಪ್‌ನಲ್ಲಿದ್ದ ಸಸ್ಯಾಹಾರಿ ಸುಹಾಸ್, ಫುಟ್‌ಪಾತ್‌ನ ಗಾಡಿಯೊಂದರಲ್ಲಿ ಆಮ್ಲೆಟ್ ತಿಂದ ದೃಶ್ಯದ ಫೋಟೋವೊಂದು ಬಹಳ ಸುದ್ದಿ ಮಾಡಿತು.
ಹಾಗೆ ನೋಡಿದರೆ, ನಮ್ಮ ಹಾಸ್ಟೆಲ್‌ನ “ಪುಳ್ಚಾರ್ ಗ್ರೂಪ್’ನಲ್ಲಿ ಯಾರೂ ನಾನ್‌ವೆಜ್ ತಿನ್ನುವವರಿಲ್ಲ. ಸುಹಾಸ್ ಕೂಡ ಅಂಥ ಸಾಹಸಕ್ಕೆ ಇಳಿದವನಲ್ಲ ಎನ್ನುವ ನಂಬಿಕೆ ಅಡ್ಮಿನ್ ಆದ ನನಗೆ ಖಂಡಿತಾ ಇದೆ. ನಾನೂ ಆ ಫೋಟೋವನ್ನು ಸಾಕಷ್ಟು ಸಲ ಝೂಮ್ ಮಾಡಿ ನೋಡಿದ್ದೇನೆ. ಅದು ಒಮ್ಮೆ ದೋಸೆಯಂತೆಯೂ, ಮತ್ತೂಮ್ಮೆ ಆಮ್ಲೆಟ್‌ನಂತೆಯೂ ಕಾಣಿಸುವುದರಿಂದ ನನ್ನ ತಲೆಗೂ ಹುಳು ಸೇರಿಬಿಟ್ಟಿದೆ. ಆ ಫೋಟೋವನ್ನು ತೆಗೆದವರು ಯಾರು ಎಂಬುದರ ಬಗ್ಗೆ ಇವತ್ತಿನವರೆಗೂ ಸುಳಿವು ಸಿಕ್ಕಿಲ್ಲ. ಪುಳ್ಚಾರ್ ಗ್ರೂಪ್ ಅನ್ನು ತಮಾಷೆಗಾಗಿ ತಾನೇ ಸೃಷ್ಟಿಸಿರುವ ಸುಹಾಸ್‌ಗೆ, ಅದೇ ಖೆಡ್ಡಾವಾಗಿ ಹೋಗಿದೆ. ಎಲ್ಲವನ್ನೂ ತಮಾಷೆಯಾಗಿ ಸ್ವೀಕರಿಸುವ ಸುಹಾಸ್, ಕೆಲವೊಮ್ಮೆ ರೇಗಾಡುತ್ತಾನಾದರೂ, ಮತ್ತೆ ಏನಾದರೂ ಟಾಂಗ್ ಕೊಟ್ಟು ಎಲ್ಲರ ಬಾಯಿ ಮುಚ್ಚಿಸುತ್ತಾನೆ.
ಈಗಲೂ ನಮ್ಮ ಗ್ರೂಪ್‌ನಲ್ಲಿ “ಆಮ್ಲೆಟ್ ಸ್ಟಾರ್’ ಎನ್ನುವ ಪದ ನಿತ್ಯವೂ, ಒಬ್ಬರಲ್ಲಾ ಒಬ್ಬರು ಬಳಕೆ ಮಾಡಿ, ಚಾಟಿಂಗ್ ಯುದ್ಧವನ್ನು ಮುಂದುವರಿಸುತ್ತಿದ್ದಾರೆ. ವಿಶ್ವಸಂಸ್ಥೆ ಮಧ್ಯಪ್ರವೇಶಿಸಿ, ಯುದ್ಧ ವಿರಾಮ ಘೋಷಿಸಬೇಕು. ಇಲ್ಲವೇ, ಅದು ಆಮ್ಲೆಟ್ ಹೌದೋ/ ಅಲ್ಲವೋ ಎಂಬುದನ್ನು ತೀರ್ಮಾನಿಸಬೇಕು. ಅದೂ ಸಾಧ್ಯವಾಗದಿದ್ದರೆ, ಆ ಫೋಟೋ ತೆಗೆದ ಭೂಪನನ್ನು ಹುಡುಕಿಕೊಟ್ಟರೆ, ಮುಂದಿನ ಕೆಲಸವನ್ನು ನಾವು ಐವರು ಅಡ್ಮಿನ್‌ಗಳು ಮಾಡುತ್ತೇವೆ.
– ಚಿರಂಜೀವಿ ಐತಾಳ್, ಶಿವಮೊಗ್ಗ