ಗಂಗಾವತಿ: ತಾವು ಕಲಿತ ಶಾಲೆ ಮತ್ತು ಗುರುಗಳನ್ನು ಮರೆತು ನಗರ ಸೇರುವ ಅನೇಕರ ಮಧ್ಯೆ ತಾಲೂಕಿನ ಹೊಸ ಅಯೋಧ್ಯ ಗ್ರಾಮದ ಟಿ.ವೆಂಕಟಪ್ರಸಾದ್ ಎಂಬ ಢಣಾಪೂರ ಸರಕಾರಿ ಶಾಲೆಯ ಹಳೆಯ ವಿದ್ಯಾರ್ಥಿ ತಾನು ಕಲಿತ ಶಾಲೆ ಮತ್ತು ಗುರುಗಳನ್ನು ಗೆಳೆಯರನ್ನು ಸ್ಮರಣೆ ಮಾಡುವ ಜತೆಗೆ ತನ್ನ ಆದಾಯದ 6 ಲಕ್ಷ ರೂ.ಗಳಲ್ಲಿ ಕಲಿಕಾ ಸಾಮಾಗ್ರಿ ಹಾಗೂ ವಿದ್ಯಾರ್ಥಿಗಳು ಕುಳಿತುಕೊಳ್ಳಲು ಅನುಕೂಲಕ್ಕಾಗಿ ಬೆಂಚ್‌ಗಳನ್ನು ದೇಣಿಗೆ ನೀಡುವ ಮೂಲಕ ಇತರೆ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾರೆ.
ತಾಲೂಕಿನ ಹೊಸ ಅಯೋಧ್ಯೆ ಗ್ರಾಮದ ಟಿ.ವೆಂಕಟ ಪ್ರಸಾದ್ ಎಂಬುವರು ಢಣಾಪೂರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1970-71ನೇ ಸಾಲಿನ ವಿದ್ಯಾರ್ಥಿಯಾಗಿ 7 ನೇ ತರಗತಿಯ ವರೆಗೆ ವಿದ್ಯಾಭ್ಯಾಸ ಮಾಡಿ ಇದೀಗ ಬೆಂಗಳೂರು ವಿಶ್ವ ವಿದ್ಯಾಲಯದಲ್ಲಿ ಉನ್ನತ ಹುದ್ದೆಯಲ್ಲಿದ್ದು ಕಲಿತ ಶಾಲೆ ಮತ್ತು ಗುರುಗಳನ್ನು ಗೆಳೆಯರನ್ನು ನೆನೆದು ಕಲಿತ ಶಾಲೆಗೆ ಏನಾದರೂ ಮಾಡಬೇಕೆಂಬ ಹಂಬಲದಿಂದ ಸುಮಾರು 6 ಲಕ್ಷ ರೂಪಾಯಿ ಮೌಲ್ಯದ ಕಲಿಕಾ ಸಾಮಗ್ರಿಗಳನ್ನು 65 ಕಂಪ್ಯೂಟರ್ ಸಹಿತ ಟೇಬಲ್ 19 ನಲಿ ಕಲಿ ಟೇಬಲ್ 90 ಬೆಂಚ್‌ಗಳನ್ನು ವಿತರಿಸಿದ್ದಾರೆ.
ಈ ಸಂದರ್ಭದಲ್ಲಿ ಟಿ ವೆಂಕಟ ಪ್ರಸಾದ್ ಅವರ ಸಹೋದರ ಟಿ. ವಿಶ್ವನಾಥ ಮಾತನಾಡಿ, ತಮ್ಮ ಸಹೋದರ ಢಣಾಪೂರದ ಸರಕಾರಿ ಶಾಲೆಯಲ್ಲಿ 7 ನೇ ತರಗತಿ ವರೆಗೆ ವಿದ್ಯಾಭ್ಯಾಸ ಮಾಡಿ ನಂತರ ವಿವಿಧ ನಗರಗಳಲ್ಲಿ ಉನ್ನತ ಶಿಕ್ಷಣ ಪಡೆದು ಇದೀಗ ಬೆಂಗಳೂರು ವಿವಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ಸ್ವ ಗ್ರಾಮ ಹೊಸ ಅಯೋಧ್ಯೆಗೆ ಆಗಮಿಸಿದಾಗೆಲ್ಲ ಢಣಾಪೂರ ಶಾಲೆಗೆ ಭೇಟಿ ನೀಡಿ ಹಳೆಯ ನೆನಪುಗಳನ್ನು ಮೆಲುಕು ಹಾಕಿಕೊಂಡು ಹಳೆಯ ಸ್ನೇಹಿತರ ಜತೆಗೆ ಮಾತನಾಡುವುದು ವಾಡಿಕೆಯಾಗಿದೆ. ಈ ಭಾರಿ ಶಾಲೆಯಲ್ಲಿ ಮೂಲ ಸೌಕರ್ಯಗಳನ್ನು ಕಲ್ಪಿಸಲು 6 ಲಕ್ಷ ರೂ.ಗಳಲ್ಲಿ ಬೆಂಚ್ ಮ ಕಂಪ್ಯೂಟರ್ ಸೇರಿ ಕಲಿಕಾ ಸಾಮಾಗ್ರಿ ವಿತರಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಸರಕಾರಿ ಶಾಲೆಗಳಲ್ಲಿ ಗುಣಮಟ್ಟದ ಶ್ರೇಷ್ಠ ಶಿಕ್ಷಣ ಸಿಗುತ್ತದೆ. ಪ್ರತಿಯೊಬ್ಬರೂ ಸರಕಾರಿ ಶಾಲೆಗೆ ತಮ್ಮ ಮಕ್ಕಳನ್ನು ಸೇರಿಸಿ ಪ್ರತಿಭಾವಂತರನ್ನಾಗಿ ಮಾಡಬೇಕು.ಕಲಿತ ಶಾಲೆ ಗುರುಗಳನ್ನು ಸದಾ ಸ್ಮರಿಸಬೇಕೆಂದರು.
ಶಾಲಾ ಮುಖ್ಯೋಪಾಧ್ಯಾಯ ಲಕ್ಷ್ಮಣ ತಾ.ಪಂ. ಮಾಜಿ ಸದಸ್ಯ ಫಕೀರಯ್ಯ ಗ್ರಾಮದ ಮುಖಂಡರಾದ ಚಿದಾನಂದಪ್ಪ, ಹೊನ್ನೂರಪ್ಪ, ಎಸ್‌ಡಿಎಂಸಿ ಅಧ್ಯಕ್ಷ ಹನುಮೇಶ, ಸತೀಶ್ ಪ್ರೌಢಶಾಲಾ ಮುಖ್ಯ ಗುರು ಹನುಮಂತಪ್ಪ ಸಹ ಶಿಕ್ಷಕರಾದ ಶರಣಪ್ಪ, ಫಕೀರ್ ಸಾಬ್,ನಿಂಗಪ್ಪ, ಜ್ಯೋತಿ, ಪ್ರೀತಿ ಇದ್ದರು.