Advertisement
ಹಾಗಾಗಿ ಒಸಿಡಿ ಎಂಬುದು ಒಂದು ದೀರ್ಘಕಾಲಿಕ ಮನೋರೋಗ. ಅದು ಆಲೋಚನೆಯ ವಿಧಾನವನ್ನು ಬಾಧಿಸುತ್ತದೆ ಮತ್ತು ಇದರಿಂದಾಗಿ ಈ ಬಾಧೆಗೊಳಗಾದ ಜನರಲ್ಲಿ ಋಣಾತ್ಮಕ ಆಲೋಚನೆಗಳು ಹುಟ್ಟಿ ಅವರು ಅಸಹಜವಾಗಿ ನಡೆದುಕೊಳ್ಳಲಾರಂಭಿಸುತ್ತಾರೆ. ಇದು ಎಲ್ಲ ವರ್ಗದ, ಯಾವುದೇ ವಯಸ್ಸಿನ ಜನರನ್ನೂ ಬಾಧಿಸಬಹುದು. ಒತ್ತಡಗಳು ಮತ್ತು ಗೀಳು ಇದರ ಲಕ್ಷಣಗಳು. “ಗೀಳು’ ಅಥವಾ “ಒಬ್ಸೆಶನ್’ ಎಂದರೆ ಗಮನಾರ್ಹ ಯಾತನೆಗೆ ಕಾರಣವಾಗುವ ಒತ್ತಾಯಪೂರ್ವಕ ಅತಾರ್ಕಿಕ ಆಲೋಚನೆಗಳು ಅಥವಾ ಒತ್ತಾಯಗಳು ಎಂದು ವ್ಯಾಖ್ಯಾನಿಸಬಹುದು. ರೋಗಿಯು ಈ ಯಾತನೆಯನ್ನು ಕಡಿಮೆ ಮಾಡಿಕೊಳ್ಳಲು ಆಲೋಚನೆಗಳನ್ನು ಬೇರೆಡೆಗೆ ಹರಿಸಲು ಅಥವಾ ಕ್ರಿಯೆಗಳನ್ನು ನಡೆಸಲು ಮುಂದಾಗುತ್ತಾನೆ. “ಒತ್ತಾಯಗಳು’ ಎಂದರೆ ರೋಗಿಯಲ್ಲಿ ಗೀಳಿನಿಂದ ಉಂಟಾಗುವ ಆತಂಕ/ಯಾತನೆಗೆ ಪ್ರತಿಕ್ರಿಯೆಯಾಗಿ ಅಥವಾ ಅದರಿಂದ ಅಸಹಜ ಸ್ಥಿತಿ ಉಂಟಾಗದಿರಲಿ ಎಂದು ಯಾವುದೋ ಕ್ರಿಯೆಯನ್ನು ನಡೆಸಲು ಉಂಟಾಗುವ ಒತ್ತಡ. ಈ ಒತ್ತಾಯಗಳು ಅತಾರ್ಕಿಕವಾಗಿರಬಹುದು ಅಥವಾ ಅತಿಯಾಗಿರಬಹುದು.
Related Articles
Advertisement
ಮೇಲೆ ಹೇಳಲಾಗಿರುವುದನ್ನು ಕೆಲವು ಉದಾಹರಣೆಗಳ ಮೂಲಕ ವಿವರಿಸುವುದಾದರೆ,ಕೆಲವು ಸಾಮಾನ್ಯ ಗೀಳುಗಳು ಎಂದರೆ: – ಕೊಳಕಾಗುವುದು, ಕೊಳಚೆ, ಕೀಟಾಣುಗಳ ಭಯ
– ಯಾವುದೋ ಒಂದನ್ನು ಮರೆತುಬಿಡುವ ಭಯ (ಗ್ಯಾಸ್ ಸ್ಟವ್ ಬಂದ್ ಮಾಡುವುದು ಇತ್ಯಾದಿ)
– ಸ್ವಯಂ ಅಥವಾ ಇತರರನ್ನು ಗಾಯಗೊಳಿಸುವ ಭಯ
– ಆಕ್ರಣಮಣಶೀಲತೆಯ ಅಥವಾ ಲೈಂಗಿಕ ನಡವಳಿಕೆ ಬೇಡದ ಆಲೋಚನೆಗಳು
– ಪರಿಪೂರ್ಣವಾಗಿರುವ ಅಥವಾ ಅಚ್ಚುಕಟ್ಟಾಗಿರುವುದರ ಪ್ರಾಮುಖ್ಯದ ಬಗ್ಗೆ ಅತಿಯಾದ ನಂಬಿಕೆ
– ನೈತಿಕತೆ ಅಥವಾ ಧರ್ಮದ ಬಗ್ಗೆ ಅತಿಯಾದ ನಂಬಿಕೆ
– ಅತಿಯಾದ ಮೂಢನಂಬಿಕೆಗಳು (ಪಾದಚಾರಿ ಮಾರ್ಗದ ಬಿರುಕಿನ ಮೇಲೆ ಕಾಲಿರಿಸಿದರೆ ಮಗುವಿಗೆ ಹಾನಿಯಾಗುತ್ತದೆ ಎಂಬ ನಂಬಿಕೆಯಂಥವು)
ಹೀಗೆಯೇ ಅಂತರ್ಗತ ಗೀಳುಗಳನ್ನು ಆಧರಿಸಿ ಒತ್ತಾಯಗಳು ವೈವಿಧ್ಯಮಯವಾಗಿ ಪ್ರಕಟಗೊಳ್ಳಬಹುದು. ಉದಾಹರಣೆಗೆ, ಕೀಟಾಣುಗಳ ಭಯದ ಗೀಳು ಒತ್ತಾಯಪೂರ್ವಕವಾದ, ಪದೇಪದೆ ನಡೆಯುವ ಕೈ ತೊಳೆದು ಕೊಳ್ಳುವ ಕ್ರಿಯೆಯಾಗಿ ಪ್ರಕಟವಾಗಬಹುದು. ತಲೆಯಲ್ಲಿ ಒಂದು ಪದವನ್ನು ಹತ್ತು ಬಾರಿ ಪುನರಾವರ್ತಿಸುವಂತಹ ಮಾನಸಿಕ ನಡವಳಿಕೆ ಅಥವಾ ಮೇಜನ್ನು ಹತ್ತು ಬಾರಿ ಬಡಿಯುವಂತಹ ದೈಹಿಕ ನಡವಳಿಕೆಗಳನ್ನು ಒತ್ತಾಯಗಳು ಒಳಗೊಳ್ಳಬಹುದು. ಕೆಲವು ಸಾಮಾನ್ಯ ಒತ್ತಾಯಗಳು ಎಂದರೆ:
– ಎಣಿಕೆ ಮಾಡುವುದು, ಪದಗಳನ್ನು ಅಥವಾ ಬಡಿಯುವುದನ್ನು ಪುನರಾವರ್ತಿಸುವುದು
– ಸ್ಟವ್ ಸ್ವಿಚ್, ಬಾಗಿಲಿನ ಬೀಗ, ದೀಪದ ಸ್ವಿಚ್‌ಗಳನ್ನು ಪದೇಪದೆ ಪರಿಶೀಲಿಸುವುದು
– ಅತಿಯಾಗಿ ಶುಚಿಗೊಳಿಸುವುದು, ತೊಳೆಯುವುದು
– ಆರೋಗ್ಯ ಮತ್ತು ಕ್ಷೇಮವನ್ನು ಖಾತರಿಪಡಿಸಿಕೊಳ್ಳುವುದಕ್ಕಾಗಿ ಕುಟುಂಬಸ್ಥರು ಮತ್ತು ಗೆಳೆಯರನ್ನು ಪದೇಪದೆ ಸಂಪರ್ಕಿಸುವುದು
– ವಸ್ತುಗಳನ್ನು ನಿರ್ದಿಷ್ಟ ಮಾದರಿಯಲ್ಲಿ ಇರಿಸುವುದು ಅಥವಾ ಒಂದೇ ಮಾದರಿಯಲ್ಲಿ ವ್ಯವಸ್ಥೆಗೊಳಿಸುವುದು
– ನಿರ್ದಿಷ್ಟ ರೂಢಿ ಅಥವಾ ಕ್ರಿಯೆಯನ್ನು ಅನುಸರಿಸುವುದು
– ಹಳೆಯ ರದ್ದಿ ದಿನಪತ್ರಿಕೆಗಳು ಅಥವಾ ಹಾಲಿನ ಖಾಲಿ ತೊಟ್ಟೆಗಳಂತಹ ಎಸೆಯಬೇಕಾದ ವಸ್ತುಗಳನ್ನುಸಂಗ್ರಹಿಸಿ ಇರಿಸಿಕೊಳ್ಳುವುದು ಇದು ಒಸಿಡಿಯ ಸಂಪೂರ್ಣ ಯಾದಿ ಅಲ್ಲವೇ ಅಲ್ಲ; ಇಲ್ಲಿ ಹೇಳದಂತಹ ಅದೆಷ್ಟೋ ಬಗೆಯ ಒಸಿಡಿಗಳು ಇರಬಹುದು. ಇಲ್ಲಿ ಹೇಳಿರುವುದಕ್ಕಿಂತ ಬೇರೆಯಾದ ಯಾವುದಾದರೂ ಕಿರಿಕಿರಿದಾಯಕ ಅಥವಾ ಬೇಡದ ಗೀಳುಗಳು ಯಾರಿಗಾದರೂ ಇದ್ದಲ್ಲಿ ಅದು ಒಸಿಡಿ ಅಲ್ಲ ಎಂದರ್ಥವಲ್ಲ. ಅದರಿಂದ ಯಾರಿಗಾದರೂ ದೈನಿಕ ಕಾರ್ಯಚಟುವಟಿಕೆಗಳಿಗೆ ಗಮನಾರ್ಹ ತೊಂದರೆ ಉಂಟಾಗುತ್ತಿದ್ದಲ್ಲಿ, ದಿನದ ಬಹುಭಾಗ ವನ್ನು ಇದುವೇ ಆಕ್ರಮಿಸಿಕೊಳ್ಳುತ್ತಿದ್ದಲ್ಲಿ, ಕೆಲಸ, ಶಾಲಾ ಚಟುವಟಿಕೆಗಳನ್ನು ಬಾಧಿಸುತ್ತಿದ್ದಲ್ಲಿ ಅದು ಒಸಿಡಿಯ ವೈದ್ಯಕೀಯ ರೋಗಪತ್ತೆಯ ಭಾಗವಾಗಬಹುದಾಗಿದೆ. ಆದ್ದರಿಂದ ಅಂಥವರು ಸರಿಯಾದ ವೈದ್ಯಕೀಯ ರೋಗ ಪತ್ತೆಗಾಗಿ ಸರಿಯಾದ ವೈದ್ಯರನ್ನು ಕಾಣುವುದು ಸೂಕ್ತವಾಗಿದೆ. -ಡಾ| ಕೃತಿಶ್ರೀ ಸೋಮಣ್ಣ
ಕನ್ಸಲ್ಟಂಟ್ ಸೈಕಿಯಾಟ್ರಿಸ್ಟ್,
ಕೆಎಂಸಿ ಆಸ್ಪತ್ರೆ, ಮಂಗಳೂರು