ಶೃಂಗೇರಿ: ಕೃಷಿಯ ಅವಿಭಾಜ್ಯ ಅಂಗವಾದ ಪಶುಸಂಗೋಪನೆ ಭೂಮಿಯ ಫಲವತ್ತತೆ ಕಾಪಾಡುತ್ತದೆ ಎಂದು ಪಶುವೈದ್ಯ ಇಲಾಖೆಯ ಸಹಾಯಕ ನಿರ್ದೇಶಕ ಡಾ| ಪ್ರದೀಪ್ ಹೇಳಿದರು.
ಆದರ್ಶ ರೈತ ಮಿತ್ರ ಕೂಟ ಮತ್ತು ಮಲೆನಾಡು ಯುವ ಹೆಬ್ಟಾರ ಬ್ರಾಹ್ಮಣ ಘಟಕ ಜಂಟಿಯಾಗಿ ಬುಧವಾರ ಕೆರೆಮನೆ ಭಾಸ್ಕರರಾವ್ ಮನೆಯಲ್ಲಿ ಏರ್ಪಡಿಸಿದ್ದ ಹೈನುಗಾರಿಕೆ ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೃಷಿ ಮತ್ತು ಹೈನುಗಾರಿಕೆ ಪರಸ್ಪರ ಸಂಬಂಧವಿದ್ದು, ಇದರಲ್ಲಿ ಲಾಭ,ನಷ್ಟ ಎಂಬ ಲೆಕ್ಕಾಚಾರ ಹಾಕದೇ ಪ್ರತಿಯೊಬ್ಬ ರೈತರು ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳಬೇಕು. ಹೈನುಗಾರಿಕೆ ಮಾಡುವುದು ನಷ್ಟ ಎಂಬುದು ಈಗ ಸಾಮಾನ್ಯವಾಗಿ ಕೇಳಿ ಬರುತ್ತಿರುವ ಅಭಿಪ್ರಾಯವಾಗಿದೆ. ಮುಂದಿನ ಪೀಳಿಗೆಗೆ ಮಣ್ಣಿನ ರಕ್ಷಣೆ ಅಗತ್ಯವಾಗಿದ್ದು,ಇದಕ್ಕಾಗಿ ಹೈನುಗಾರಿಕೆ ಅಗತ್ಯವಾಗಿದೆ. ಇತ್ತೀಚಿನ ದಿನದಲ್ಲಿ ರಾಸಾಯನಿಕ ಗೊಬ್ಬರ ಬಳಕೆ ಹೆಚ್ಚಾಗುತ್ತಿದ್ದು, ಸಾವಯವ ಗೊಬ್ಬರ ಬಳಕೆ ಕಡಿಮೆಯಾಗುತ್ತಿದೆ. ಕುಟುಂಬಕ್ಕೆ ಅಗತ್ಯವಿರುವಷ್ಟು ಹಸು ಸಾಕಣೆ ಮಾಡುವುದು ಅಗತ್ಯವಾಗಿದೆ. ಹಸುಗಳು ಹಾಲು ನೀಡುವಾಗ ಹಿಂಡಿ ನೀಡುವಂತೆ ಉಳಿದ ಸಮಯದಲ್ಲೂ ನಿಗದಿತವಾದ ಹಿಂಡಿ,ಆಹಾರ ನೀಡಬೇಕು ಎಂದರು.
ಕಾಲು ಬಾಯಿ ಜ್ವರದ ಬಗ್ಗೆ ಮಾತನಾಡಿದ ಡಾ| ವೆಂಕಟೇಶ್, ವೈರಸ್‌ನಿಂದ ಬರುವ ಕಾಲು ಬಾಯಿ ಜ್ವರ ಪಶುಗಳಿಗೆ ಮಾರಕವಾಗಿದೆ. ಕಾಲು ಬಾಯಿ ಜ್ವರ ಬರದಂತೆ ಅಗತ್ಯ ಮುಂಜಾಗೃತ ಕ್ರಮವಾಗಿ ಲಸಿಕೆ ಹಾಕಿಸಬೇಕು. ಸರಕಾರ ಉಚಿತವಾಗಿ ಈ ಲಸಿಕೆಯನ್ನು ವರ್ಷಕ್ಕೆ ಎರಡು ಬಾರಿ ಹಾಕಲಾಗುತ್ತಿದೆ. ರೇಬಿಸ್ ರೋಗವು ವೈರಸ್ ಮೂಲಕ ಹರಡುವ ರೋಗವಾಗಿದ್ದು, ಪ್ರಾಣಿಯಿಂದ ಮನುಷ್ಯರಿಗೆ ಹರಡುವ ಕಾಯಿಲೆಯಾಗಿದೆ. ನಾಯಿ, ಬೆಕ್ಕು ಮುಂತಾದ ಪ್ರಾಣಿಗಳಿಗೆ ಬಂದಾಗ ಅದು ಮನುಷ್ಯರಿಗೆ ಹರಡುವ ಸಾಧ್ಯತೆ ಇದೆ. ರೋಗದ ಮುಂಜಾಗೃತ ಕ್ರಮವಾಗಿ ರೇಬಿಸ್ ನಿರೋಧಕ ಲಸಿಕೆಯನ್ನು ಸಾಕು ಪ್ರಾಣಿಗೆ ಹಾಕಿಸಬಹುದಾಗಿದೆ ಎಂದರು.
ಎ.ಎಂ.ಶ್ರೀಧರ ರಾವ್ ಮಾತನಾಡಿ, ಹೈನುಗಾರಿಕೆ ರೈತರಿಗೆ ದುಬಾರಿಯಾಗುತ್ತಿದ್ದು,ಇದಕ್ಕೆ ಪರಿಹಾರವಾಗಿ ತಾಲೂಕಿಗೆ ಮಿಲ್ಕ್ ರೂಟ್ ಅಗತ್ಯವಿದೆ ಎಂದರು.
ಆದರ್ಶ ರೈತ ಮಿತ್ರ ಕೂಟದ ಪ್ರತಿನಿಧಿ ಎಸ್.ಸೂರ್ಯನಾರಾಯಣ ರಾವ್ ಅಧ್ಯಕ್ಷತೆ ವಹಿಸಿದ್ದರು. ಯುವ ಹೆಬ್ಟಾರ್ ಘಟಕದ ಭರತ್‌ರಾಜ್ ಉಪಸ್ಥಿತರಿದ್ದರು.