Advertisement

ಕಾಂಗ್ರೆಸ್‌ ಹೈಕಮಾಂಡ್‌ನಿಂದ ಕುರುಬ ಸಮಾಜಕ್ಕೆ ಅನ್ಯಾಯ

12:10 PM Jun 09, 2018 | |

ದಾವಣಗೆರೆ: ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಸರ್ಕಾರದಲ್ಲಿ ಕುರುಬ ಸಮಾಜದವರಿಗೆ ಪ್ರಾತಿನಿಧ್ಯ ನೀಡದೇ ಕಾಂಗ್ರೆಸ್‌ ಹೈಕಮಾಂಡ್‌ ಅನ್ಯಾಯ ಮಾಡಿದೆ ಎಂದು ಆರೋಪಿಸಿ ಹಾಲುಮತ ಮಹಾಸಭಾ ಮುಖಂಡರು, ಪದಾಧಿಕಾರಿಗಳು
ಶುಕ್ರವಾರ ಮಹಾತ್ಮಗಾಂಧಿ ವೃತ್ತದಲ್ಲಿ ಟೈರ್‌ ಸುಟ್ಟು ಪ್ರತಿಭಟಿಸಿದ್ದಾರೆ. ಈಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಆಯ್ಕೆಯಾಗಿರುವ 78 ಶಾಸಕರಲ್ಲಿ 8 ಮಂದಿ ಕುರುಬ ಸಮಾಜದವರಿದ್ದಾರೆ.

Advertisement

ಜೆಡಿಎಸ್‌- ಕಾಂಗ್ರೆಸ್‌ ಮೈತ್ರಿ ಸರ್ಕಾರದಲ್ಲಿ ಕಾಂಗ್ರೆಸ್‌ನಿಂದ ಆಯ್ಕೆಯಾದ ಕುರುಬ ಸಮಾಜದ ಒಬ್ಬ ಶಾಸಕಗೂ ಸಚಿವ ಸ್ಥಾನ ನೀಡದೇ ಇರುವುದು ಅತ್ಯಂತ ಖಂಡನೀಯ. ರಾಜ್ಯದಲ್ಲಿ ಅತಿ ಹೆಚ್ಚಿನ ಜನಸಂಖ್ಯೆ ಹೊಂದಿರುವ ಮೂರನೇ ಸಮುದಾಯವಾಗಿರುವ ಕುರುಬ ಸಮಾಜಕ್ಕೆ ಪ್ರಾತಿನಿಧ್ಯವನ್ನೇ ನೀಡದೇ ಇರುವುದು ಇಡೀ ಸಮಾಜಕ್ಕೆ ಮಾಡಿರುವ ಘೋರ ಅಪಮಾನ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಶೇ. 12ರಷ್ಟು ಜನಸಂಖ್ಯೆ ಹೊಂದಿರುವ ರಾಜ್ಯದ 30 ಜಿಲ್ಲೆಗಳಲ್ಲೂ ವಿಸ್ತಾರವಾಗಿ ಹರಡಿಕೊಂಡಿರುವ ಕುರುಬ ಸಮಾಜಕ್ಕೆ 2018ರ ವಿಧಾನಸಭಾ ಚುನಾವಣೆಯಲ್ಲಿ ಸಾಮಾಜಿಕ ನ್ಯಾಯದಡಿಯಲ್ಲಿ ಟಿಕೆಟ್‌ ನೀಡುವಲ್ಲಿಯೂ ಅನ್ಯಾಯ ಮಾಡಲಾಗಿತ್ತು. ಆದರೂ ಸಹ ಕಾಂಗ್ರೆನಿಂದ 8 ಜನ ಶಾಸಕರು ಆಯ್ಕೆಯಾಗಿದ್ದಾರೆ. ಇಷ್ಟಾದರೂ ಕುರುಬ ಸಮಾಜವನ್ನು ಕಡೆಗಣಿಸಲಾಗಿದೆ. 

ಮೈತ್ರಿ ಸರ್ಕಾರದಲ್ಲಿ ಕಾಂಗ್ರೆಸ್‌ಗೆ 22 ಸಚಿವ ಸ್ಥಾನ ಅವಕಾಶವಿದೆ. ಆದರೂ, ಎಲ್ಲಾ ಚುನಾವಣೆಗಳಲ್ಲೂ ಕಾಂಗ್ರೆಸ್‌ ಬೆಂಬಲಿಸುತ್ತಾ ಬಂದಿರುವ ಕುರುಬರಿಗೆ ಸಚಿವ ಸ್ಥಾನ ನೀಡದೇ ಅನ್ಯಾಯ ಮಾಡಲಾಗುತ್ತಿದೆ ಎಂದು ದೂರಿದರು.
 
ಈ ಹಿಂದೆ ಆಡಳಿತ ನಡೆಸಿದ್ದ ಸರ್ಕಾರಗಳಲ್ಲಿ ಮುಖ್ಯಮಂತ್ರಿ ಪದವಿಯ ಜೊತೆಗೆ ಅದೇ ಸಮುದಾಯದ 10 ಕ್ಕೂ ಹೆಚ್ಚು ಜನರಿಗೆ ಸಚಿವ ಸ್ಥಾನ ನೀಡಲಾಗುತ್ತಿತ್ತು. ಮೈತ್ರಿ ಸರ್ಕಾರದ ಸಂಪುಟದಲ್ಲಿ ಮುಖ್ಯಮಂತ್ರಿಗಳ ಸಮುದಾಯದ 11 ಜನರಿಗೆ ಸಚಿವ ಸ್ಥಾನ ಕಲ್ಪಿಸಲಾಗಿದೆ. 2013ರಲ್ಲಿ ಮುಖ್ಯಮಂತ್ರಿಯಾದ ಸಿದ್ದರಾಮಯ್ಯ ಆಡಳಿತ ನಡೆಸುವಾಗ ಒಬ್ಬ ಕುರುಬ ಸಚಿವರಿಗೂ ಸ್ಥಾನ ನೀಡದೇ ಎರಡು ವರ್ಷಗಳ ಕಾಲದ ನಂತರ ಒಬ್ಬರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗಿತ್ತು. ಆಗಲೂ ಕುರುಬ ಸಮಾಜ ಸಹಿಸಿಕೊಂಡಿತ್ತು. ಆದರೆ, ಈಗ ಒಂದೇ ಒಂದು ಸಚಿವ ಸ್ಥಾನ ನೀಡದೇ ವಂಚಿಸಿದೆ. ಕುರುಬರ ಸಮುದಾಯವನ್ನು ನಿರ್ಲಕ್ಷ್ಯ ಮಾಡಿದರೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ನ್ನು ಸಂಪೂರ್ಣವಾಗಿ ಬಹಿಷ್ಕರಿಸ ಬೇಕಾಗುತ್ತದೆ ಎಂದು ಎಚ್ಚರಿಸಿದರು.

ಕೊಪ್ಪಳದ ರಾಘವೇಂದ್ರ ಹಿಟ್ನಾಳ್‌, ಕುಂದಗೋಳದ ಸಿ.ಎಸ್‌. ಶಿವಳ್ಳಿ, ಹರಿಹರದ ಎಸ್‌. ರಾಮಪ್ಪ, ಹೆಬ್ಟಾಳದ ಭೈರತಿ ಸುರೇಶ್‌, ಕೆ.ಆರ್‌. ಪುರನ ಭೈರತಿ ಬಸವರಾಜ್‌, ಹೊಸಕೋಟೆಯ ಎಂ.ಟಿ.ಬಿ. ನಾಗರಾಜ್‌, ವರುಣಾದ ಡಾ|
ಯತೀಂದ್ರ , ವಿಧಾನಪರಿಷತ್‌ ಸದಸ್ಯರಾದ ಎಚ್‌. ಎಂ. ರೇವಣ್ಣ, ವಿವೇಕರಾವ್‌ ಪಾಟೀಲ್‌, ಪ್ರಸನ್ನಕುಮಾರ್‌ ಇವರಲ್ಲಿ ಉತ್ತರ, ಮಧ್ಯ, ದಕ್ಷಿಣ ಕರ್ನಾಟಕದ ಪ್ರತಿನಿಧಿಯಾಗಿ ಕನಿಷ್ಟ ಮೂವರಿಗೆ ಸಂಪುಟ ದರ್ಜೆ ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದರು.

Advertisement

ಜಿಲ್ಲಾ ಅಧ್ಯಕ್ಷ ಹಾಲೇಕಲ್‌ ವೀರಣ್ಣ, ಚಂದ್ರು ದೀಟೂರು, ಸಿದ್ದಲಿಂಗಪ್ಪ, ಪ್ರಸನ್ನ ಬೆಳಕೇರಿ, ಬೀರೇಶ್‌ ಬಣಕಾರ್‌, ಸಲ್ಲಳ್ಳಿ ಹನುಮಂತಪ್ಪ, ಎಸ್‌.ಆರ್‌. ಹನುಮಂತಪ್ಪ, ಕಾಂತೇಶ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next