ಚಿತ್ರದುರ್ಗ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಚಿತ್ರದುರ್ಗ ವಿಭಾಗಿಯ ಗ್ರಾಮೀಣ ಅಂಚೆ ನೌಕರರು ನಡೆಸುತ್ತಿರುವ ಅನಿರ್ದಿಷ್ಟ ಮುಷ್ಕರ ಶನಿವಾರ ಐದು ದಿನ ಪೂರೈಸಿತು.
ಅಖೀಲ ಭಾರತ ಗ್ರಾಮೀಣ ಅಂಚೆ ನೌಕರರ ಸಂಘ ಹಾಗೂ ರಾಷ್ಟ್ರೀಯ ಅಂಚೆ ನೌಕರರ ಸಂಘ ಜಂಟಿಯಾಗಿ ಮುಷ್ಕರ
ನಡೆಸುತ್ತಿವೆ. ಅಂಚೆ ನೌಕರರ ಮುಷ್ಕರ ದೇಶದ್ಯಾಂತ ನಡೆಯುತ್ತಿದ್ದರೂ ಕೇಂದ್ರ ಸರ್ಕಾರ ಹಾಗೂ ಅಂಚೆ ಇಲಾಖೆಯ ಉನ್ನತ ಅಧಿಕಾರಿಗಳು ಮುಷ್ಕರ ಹಿಂಪಡೆಯಿರಿ, ನಂತರ ಮಾತುಕತೆ ನಡೆಸುತ್ತೇವೆ ಎಂದು ಕೇಂದ್ರ ಸಂಘಟನೆಯ ನಾಯಕರಿಗೆ ಉಡಾಫೆ ಉತ್ತರ ನೀಡುತ್ತಿದ್ದಾರೆ.
ಇದು ಖಂಡನೀಯ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರದ ಧೋರಣೆ ಎಲ್ಲ ಗ್ರಾಮೀಣ ಅಂಚೆ ನೌಕರರಿಗೆ ಬೇಸರ ತಂದಿದೆ ಎಂದು ಸಂಘದ ಚಿತ್ರದುರ್ಗ ವಿಭಾಗಿಯ ಸಹಕಾರ್ಯದರ್ಶಿ ಕೆ.ಎಂ. ಪ್ರವೀಣ್‌ಕುಮಾರ್ ಬೇಸರ ವ್ಯಕ್ತ ಪಡಿಸಿದರು.ಅಂಚೆ ನೌಕರರ ಬೇಡಿಕೆ ಈಡೇರುವವರೆಗೂ ಯಾವುದೇ ಕಾರಣಕ್ಕೂ ಮುಷ್ಕರ ಹಿಂಪಡೆಯುವುದಿಲ್ಲ ಎಂದು ಗುಡುಗಿದರು. ಅಂಚೆ ಅಧೀಕ್ಷಕರು ಮುಷ್ಕರ ನಿರತರನ್ನು ಭೇಟಿ ಮಾಡಿ ಚರ್ಚಿಸಿದರು. ವಿಭಾಗಿಯ ಕಾರ್ಯದರ್ಶಿ ದಾದಾಪೀರ್, ಜಿಲ್ಲಾಧ್ಯಕ್ಷ ಡಿ. ಲೋಕೇಶ್ವರಪ್ಪ, ಸಹಕಾರ್ಯದರ್ಶಿ ಪ್ರವೀಣ್‌ಕುಮಾರ್, ಖಜಾಂಜಿ ಎಚ್.ಬಿ. ವಿಜಯಕುಮಾರ್, ಮಾದಪ್ಪ, ತಿಪ್ಪೇಸ್ವಾಮಿ, ಚಂದ್ರ ಆಚಾರಿ, ಶ್ರೀಧರ್ ಮತ್ತಿತರರು ಇದ್ದರು.