Advertisement

ಇಂದಿನಿಂದ ಅನಿರ್ದಿಷ್ಟಾವಧಿ ಲಾರಿ ಮುಷ್ಕರ

06:30 AM Jun 18, 2018 | Team Udayavani |

ಬೆಂಗಳೂರು: ಪೆಟ್ರೋಲ್-ಡೀಸೆಲ್‌ ಬೆಲೆ ಮತ್ತು ಥರ್ಡ್‌ಪಾರ್ಟಿ ಪ್ರೀಮಿಯಂ ದರವನ್ನು ಅವೈಜ್ಞಾನಿಕವಾಗಿ ಹೆಚ್ಚಿಸಿರುವುದನ್ನು ಖಂಡಿಸಿ ಅಖೀಲ ಭಾರತ ಲಾರಿ ಮಾಲಿಕರ ಮಹಾಒಕ್ಕೂಟ ಸೋಮವಾರದಿಂದ ದೇಶಾದ್ಯಂತ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದು, ರಾಜ್ಯಕ್ಕೂ ಇದರ ಬಿಸಿ ತಟ್ಟುವ ಸಾಧ್ಯತೆ ಇದೆ.

Advertisement

ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಬೆಳಿಗ್ಗೆ 6ರಿಂದ ಎಲ್ಲ ಪ್ರಕಾರದ ಲಾರಿಗಳ ಸಂಚಾರ ಸ್ಥಗಿತಗೊಳ್ಳಲಿದೆ. ಅಗತ್ಯವಸ್ತುಗಳನ್ನು ಪೂರೈಸುವ ಲಾರಿಗಳಿಗೆ ಮಾತ್ರ ಇದರಿಂದ ತಾತ್ಕಾಲಿಕವಾಗಿ ವಿನಾಯ್ತಿ ನೀಡಲಾಗಿದೆ ಎಂದು ಮಹಾಒಕ್ಕೂಟದ ಕಾರ್ಯದರ್ಶಿ ಗೋಪಾಲಸ್ವಾಮಿ ತಿಳಿಸಿದ್ದಾರೆ.

ಮುಷ್ಕರಕ್ಕೆ ಬೆಂಬಲ ಇಲ್ಲ
ಆದರೆ, ಈ ಮುಷ್ಕರಕ್ಕೆ ಕರ್ನಾಟಕ ಲಾರಿ ಮಾಲಿಕರು ಮತ್ತು ಏಜೆಂಟರುಗಳ ಒಕ್ಕೂಟದ ಬೆಂಬಲ ಇರುವುದಿಲ್ಲ. ಜುಲೈ 20ರಿಂದ ಮುಷ್ಕರಕ್ಕೆ ಕರೆ ನೀಡಲಾಗಿದೆ. ಹಾಗಾಗಿ, ಲಾರಿಗಳ ಸಂಚಾರ ಸೋಮವಾರ ಎಂದಿನಂತೆ ಇರಲಿದೆ ಎಂದು ಒಕ್ಕೂಟದ ಅಧ್ಯಕ್ಷ ಜಿ.ಆರ್‌. ಷಣ್ಮುಗಪ್ಪ ಸ್ಪಷ್ಟಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಗೊಂದಲಗಳು ಇರುವುದರಿಂದ ಮುಷ್ಕರ ಪರಿಣಾಮಕಾರಿ ಆಗುವುದು ಅನುಮಾನವಾಗಿದೆ.

9.30 ಲಕ್ಷ ಲಾರಿಗಳು
ಬೆಳಗ್ಗೆ 6ರಿಂದ ಎಲ್ಲ ಲಾರಿಗಳು ಆಯಾ ಜಾಗದಲ್ಲೇ ಸ್ಥಗಿತಗೊಳ್ಳಲಿವೆ. ರಾಜ್ಯದಲ್ಲಿ ಸುಮಾರು 9.30 ಲಕ್ಷ ಲಾರಿಗಳಿದ್ದು, ಈ ಪೈಕಿ ಬೆಂಗಳೂರಿನಲ್ಲೇ 3 ಲಕ್ಷ ಇವೆ. ಇವೆಲ್ಲವುಗಳೂ ಮುಷ್ಕರದ ಹಿನ್ನೆಲೆಯಲ್ಲಿ ಸ್ತಬ್ದಗೊಳ್ಳಲಿವೆ. ಇದರಿಂದ ಕೈಗಾರಿಕೆ, ಆಹಾರಧಾನ್ಯ, ಗೂಡ್‌ಶೆಡ್‌ ಸೇರಿದಂತೆ ವಿವಿಧ ವಸ್ತುಗಳ ಪೂರೈಕೆಯಲ್ಲಿ ವ್ಯತ್ಯಯ ಆಗಲಿದೆ. ಒಂದು ವೇಳೆ ಮುಷ್ಕರ ತೀವ್ರಗೊಂಡರೆ, ರಾಜ್ಯದಲ್ಲಿ ತರಕಾರಿ ಸೇರಿದಂತೆ ಅಗತ್ಯವಸ್ತುಗಳ ಪೂರೈಕೆಗೂ ಇದರ ಬಿಸಿ ತಟ್ಟಲಿದೆ ಗೋಪಾಲಸ್ವಾಮಿ ತಿಳಿಸಿದರು.

ನಿತ್ಯ ಬೆಂಗಳೂರಿಗೆ 10 ಸಾವಿರ ಲಾರಿಗಳು ಪ್ರವೇಶಿಸುತ್ತವೆ. ಮುಷ್ಕರದಂದು ಲಾರಿಗಳು ಒಳ ಪ್ರವೇಶಿಸಲು ಅವಕಾಶ ನೀಡಲಾಗುವುದು. ತದನಂತರದಲ್ಲಿ ನಿರ್ಗಮಿಸಲು ಅವಕಾಶ ಇಲ್ಲ ಎಂದೂ ಅವರು ಸ್ಪಷ್ಟಪಡಿಸಿದರು.

Advertisement

ಪದೇ ಪದೇ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಹೆಚ್ಚಳ ಆಗುತ್ತಿದೆ. ಮತ್ತೂಂದೆಡೆ ಅವೈಜ್ಞಾನಿಕ ರೀತಿಯಲ್ಲಿ ಮೂರನೇ ಪಾರ್ಟಿ ಇನ್ಷೊರೆಸ್‌ಪ್ರೀಮಿಯಂ ದರ ಕೂಡ ಅತ್ಯಧಿಕ ಪ್ರಮಾಣದಲ್ಲಿ ಏರಿಕೆ ಮಾಡಲಾಗಿದೆ. ಇದರಿಂದ ಲಾರಿ ಮಾಲೀಕರ ಮೇಲೆ ಹೊರೆಯಾಗಿದೆ. ಈ ಬಗ್ಗೆ ಹಲವು ಬಾರಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದರೂ ಪ್ರಯೋಜನ ಆಗಿಲ್ಲ. ಈ ಹಿನ್ನೆಲೆಯಲ್ಲಿ ಮುಷ್ಕರಕ್ಕೆ ಅಖೀಲ ಭಾರತ ಲಾರಿ ಮಾಲಿಕರ ಮಹಾಒಕ್ಕೂಟ ಕರೆ ನೀಡಿದ್ದು, ಇದಕ್ಕೆ ರಾಜ್ಯದ ಲಾರಿ ಮಾಲಿಕರ ಸಂಘ ಕೈಜೋಡಿಸಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next