ಧಾರವಾಡ: ಇಲ್ಲಿಯ ವಾಲ್ಮಿ ಸಂಸ್ಥೆಯಲ್ಲಿ ಬೆಳಗಾವಿ ಜಿಲ್ಲೆಯ ರಾಮೇಶ್ವರ ಏತ ನೀರಾವರಿ ಯೋಜನೆಯ ನೀರು ಬಳಕೆದಾರರ ಸಹಕಾರ ಸಂಘಗಳ ಪದಾಧಿಕಾರಿಗಳಿಗೆ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ತರಬೇತಿ ಸಮಾರೋಪದಲ್ಲಿ ರೈತ ತರಬೇತುದಾರರಿಗೆ ಪ್ರಮಾಣಪತ್ರ ವಿತರಿಸಿದ ನೀರಾವರಿ ತಜ್ಞ ಡಾ| ಕೃಷ್ಣಾ ಮುಂಬಾರೆಡ್ಡಿ ಮಾತನಾಡಿ, ನೀರಿನ ಬಳಕೆ ಸಾಮರ್ಥ್ಯ ಹೆಚ್ಚಿಸಬೇಕೆಂದರೆ ನೀರಿನ ನಿರ್ವಹಣಾ ತಂತ್ರಜ್ಞಾನ ಹಾಗೂ ರೈತ ಸಮುದಾಯ ಒಂದುಗೂಡಬೇಕು. ಆಗ ಮಾತ್ರ ನೀರಾವರಿ ಯಶಸ್ವಿಯಾಗುತ್ತದೆ ಎಂದರು.
ಅತೀ ನೀರನ್ನು ಕಬಳಿಸುವ ಭತ್ತ ಹಾಗೂ ಕಬ್ಬಿನಂತಹ ಬೆಳೆಗಳ ಬದಲಿಗೆ ಸರ್ಕಾರ ಪರ್ಯಾಯ ಬೆಳೆಗಳ ಉತ್ಪನ್ನಗಳಿಗೆ ಲಾಭದಾಯಕ ಬೆಲೆಗಳನ್ನು ಒದಗಿಸಬೇಕು. ಪರ್ಯಾಯ ಬೆಳೆಗಳನ್ನು ಬೆಳೆಸಲು ಪ್ರೋತ್ಸಾಹ ನೀಡಬೇಕು. ಕೃಷಿ ವಿಜ್ಞಾನ ಸಂಸ್ಥೆಗಳು ರೈತರಿಗೆ ಅವಶ್ಯವಿರುವ ಪ್ರಾಯೋಗಿಕ ಸಂಶೋಧನೆಗಳನ್ನು ಕೈಗೊಳ್ಳಬೇಕು. ವಿಶ್ವ ವಿದ್ಯಾಲಯದಿಂದ ಹೊರಹೊಮ್ಮುವ ಸಂಶೋಧನಾ ಫಲಿತಾಂಶಗಳು ರೈತರು ಉತ್ಸಾಹದಿಂದ ಅಳವಡಿಸಿಕೊಳ್ಳುವಂತಾಗಬೇಕು. ರೈತರಿಗೆ ಬೇಕಾಗುವ ಉತ್ಕೃಷ್ಟ ಮಟ್ಟದ ಬೀಜಗಳನ್ನು ಒದಗಿಸುವ ವ್ಯವಸ್ಥೆಯಾಗಬೇಕು ಎಂದು ಹೇಳಿದರು.
ಕೃಷಿ ವಿವಿ ಸಂಶೋಧನಾ ನಿರ್ದೇಶಕ ಡಾ| ಪಿ.ಎಲ್. ಪಾಟೀಲ ಮಾತನಾಡಿ, ನೀರಾವರಿ ಪ್ರದೇಶಗಳಲ್ಲಿ ಭೂಮಿಯನ್ನು ಸಮರ್ಪಕವಾಗಿ ಬಳಸದಿದ್ದರೆ ಹಾಳಾಗುವ ಸಾಧ್ಯತೆಗಳಿವೆ. ಕೃಷಿ ವಿವಿಯಿಂದ ಹೊರಹೊಮ್ಮುವ ವೈಜ್ಞಾನಿಕ ಶಿಫಾರಸುಗಳ ಅನ್ವಯ ರೈತರು ನೀರಾವರಿ ಕೈಕೊಳ್ಳಬೇಕು. ನೀರಿನ ಉಳಿತಾಯಕ್ಕಾಗಿ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಳ್ಳಬೇಕು ಎಂದರು.
ರಾಮೇಶ್ವರ ಏತ ನೀರಾವರಿ ಯೋಜನೆ ಕಾರ್ಯಪಾಲಕ ಅಭಿಯಂತ ಎಸ್.ವಿ. ಮೂಡಲಗಿ ರೈತರೊಂದಿಗೆ ಸಂವಾದ ನಡೆಸಿದರು. ವಾಲ್ಮಿ ನಿರ್ದೇಶಕ ಡಾ| ರಾಜೇಂದ್ರ ಪೋದ್ದಾರ ಅಧ್ಯಕ್ಷತೆ ವಹಿಸಿದ್ದರು. ಶೈಲಜಾ ಹೊಸಮಠ ಸಂಯೋಜಿಸಿದರು. ನಾಗರತ್ನಾ ನಿರೂಪಿಸಿದರು.