Advertisement

ಚೇತರಿಕೆ ಪ್ರಮಾಣ ಇನ್ನೂ ಹೆಚ್ಚಳ

12:43 AM Oct 13, 2020 | mahesh |

ಹೊಸದಿಲ್ಲಿ: ದೇಶದಲ್ಲಿ ಕೋವಿಡ್ ಕೇಸುಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿರುವ ನಡುವೆಯೇ ಸಮಾಧಾನಕರ ಸುದ್ದಿಯೊಂದು ಹೊರಬಿದ್ದಿದೆ.
ಸದ್ಯ ದೇಶದಲ್ಲಿ ಒಟ್ಟಾರೆ 71 ಲಕ್ಷ ಕೇಸುಗಳಿದ್ದರೂ, ಇದರಲ್ಲಿ 61 ಲಕ್ಷ ಮಂದಿ ಚೇತರಿಸಿಕೊಂಡಿದ್ದಾರೆ. ಕೇಂದ್ರ ಆರೋಗ್ಯ ಇಲಾಖೆ ಪ್ರಕಾರ, ಸದ್ಯ ಕೇವಲ 9 ಲಕ್ಷ ಸಕ್ರಿಯ ಪ್ರಕರಣಗಳಿವೆ.

Advertisement

ಸೋಮವಾರ ಬೆಳಗಿನ ವರದಿ ಪ್ರಕಾರ, ದೇಶದಲ್ಲೀಗ 71,20 ಸಾವಿರ ಕೊರೊನಾ ಪ್ರಕರಣಗಳು ದಾಖಲಾಗಿವೆ. ರವಿವಾರ ಬೆಳಗ್ಗೆಯಿಂದ ಸೋಮವಾರ ಬೆಳಗ್ಗೆವರೆಗೆ 66,732 ಹೊಸ ಪ್ರಕರಣಗಳು ಪತ್ತೆಯಾಗಿವೆ. ಸದ್ಯ 61 ಲಕ್ಷ ಮಂದಿ ಚೇತರಿಸಿಕೊಂಡಿದ್ದು, ಈ ಪ್ರಮಾಣ ಶೇ.86.36ರಷ್ಟಿದೆ. ಹೀಗಾಗಿ ದೇಶದಲ್ಲಿ ಚೇತರಿಕೆಯಾಗುತ್ತಿರವವರ ಸಂಖ್ಯೆ ಹೆಚ್ಚಾಗುತ್ತಿದೆ.

ಸಾವಿನ ದರವೂ ಇಳಿಮುಖ: ದೇಶದ ಕೊರೊನಾ ಚೇತರಿಕೆ ಸಂಖ್ಯೆ ಇಳಿಮುಖವಾಗಿರುವುದಷ್ಟೇ ಅಲ್ಲ, ಸಾವಿನ ಪ್ರಮಾಣವೂ ಕಡಿಮೆಯಾಗುತ್ತಿದೆ. ಸತತ ಎಂಟನೇ ದಿನವೂ ಸಾವಿನ ಸಂಖ್ಯೆ ಒಂದು ಸಾವಿರಕ್ಕಿಂತ ಕಡಿಮೆಯಾಗಿದೆ. ಸೋಮವಾರವೂ 816 ಸಾವಿನ ಪ್ರಕರಣಗಳು ದಾಖಲಾಗಿವೆ.

ಸ್ಮಾರ್ಟ್‌ಫೋನ್‌ಗಳ ಮೇಲೆ 28 ದಿನ ವೈರಸ್‌: ನೀವು ಬಳಕೆ ಮಾಡುತ್ತಿರುವ ಸ್ಮಾರ್ಟ್‌ ಫೋನ್‌ ಮತ್ತು ಬ್ಯಾಂಕು ನೋಟುಗಳ ಮೇಲೆ 28 ದಿನಗಳ ಕಾಲ ಕೊರೊನಾ ವೈರಸ್‌ ಜೀವಂತವಾಗಿ ಕುಳಿತಿರುತ್ತದೆ! ಹೌದು, ಆತಂಕವೆನಿಸಿದರೂ ಇದು ಸತ್ಯವಾದ ವಿಚಾರ. ಆಸ್ಟ್ರೇಲಿಯಾದ ಸಂಸ್ಥೆಯೊಂದು ನಡೆಸಿದ ಅಧ್ಯಯನದಲ್ಲಿ ಈ ವಿಚಾರ ಬಯಲಾಗಿದೆ. ಸ್ಮಾರ್ಟ್‌ಫೋನ್‌, ನೋಟುಗಳ ಮೇಲೆ ಹೆಚ್ಚು ಕಾಲ ವೈರಸ್‌ ಇರುತ್ತದೆ ಎಂದಿದೆ. ಅಷ್ಟೇ ಅಲ್ಲ, ನೆಲದ ಮೇಲೂ ಕೊರೊನಾ ವೈರಸ್‌ ಹೆಚ್ಚು ದಿನ ಇರುತ್ತದೆ ಎಂದು ಇದೇ ಅಧ್ಯಯನ ಹೇಳಿದೆ.

ಹಿಮಾಚಲ ಸಿಎಂಗೆ ಸೋಂಕು: ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಜೈರಾಮ್‌ ಠಾಕೂರ್‌ ಅವರಿಗೆ ಸೋಂಕು ದೃಢಪಟ್ಟಿದೆ. ಈ ಬಗ್ಗೆ ಅವರೇ ಟ್ವೀಟ್‌ ಮಾಡಿ ಖಚಿತಪಡಿಸಿದ್ದಾರೆ. ಕಳೆದ ಒಂದು ವಾರದಿಂದ ಮನೆಯಲ್ಲಿ ಕ್ವಾರಂಟೈನ್‌ ಆಗಿರುವುದಾಗಿ ಹೇಳಿದ್ದಾರೆ. ಕರ್ನಾಟಕದ ಸಿಎಂ ಯಡಿಯೂರಪ್ಪ, ಹರ್ಯಾಣ ಸಿಎಂ ಎಂ.ಎಲ್‌.ಖಟ್ಟರ್‌, ಅರುಣಾಚಲ ಪ್ರದೇಶ ಸಿಎಂ ಪೆಮಾ ಖಂಡೂ ಅವರಿಗೂ ಸೋಂಕು ದೃಢಪಟ್ಟಿತ್ತು.

Advertisement

ಸೋಂಕು ಜಾಗೃತಿಗೆ ಬಿಗ್‌ ಬಿ: ಕೋವಿಡ್ ಸೋಂಕಿನ ಬಗ್ಗೆ ಜಾಗೃತಿ ಮೂಡಿಸಲು ಕೇಂದ್ರ ಸರಕಾರ ರೂಪಿಸಿದ “ಜನ ಆಂದೋಲನ’ಕ್ಕೆ ರೈಲ್ವೇ ಇಲಾಖೆಯೂ ಸೇರಿಕೊಂಡಿದೆ. ಯಾವ ರೀತಿ ಸೋಂಕು ತಗಲದಂತೆ ಎಚ್ಚರಿಕೆ ವಹಿಸಬೇಕು ಎಂಬ ಬಗ್ಗೆ ಮಾಹಿತಿ ನೀಡಲು ಬಾಲಿವುಡ್‌ ಬಿಗ್‌ ಬಿ ಅಮಿತಾಭ್‌ ಬಚ್ಚನ್‌ ಇಲಾಖೆಯ ರಾಯಭಾರಿಯಾಗಲಿದ್ದಾರೆ. ಕೆಮ್ಮು, ಉಸಿರಾಟದ ತೊಂದರೆ ಇದ್ದರೆ ಸಹಾಯವಾಣಿ ಸಂಖ್ಯೆ 1075ಕ್ಕೆ ಕರೆ ಮಾಡಲೂ ಮನವಿ ಮಾಡಿದ್ದಾರೆ.

ಬೆಟ್ಟದಷ್ಟಿದೆ ಕೊರೊನಾ ತ್ಯಾಜ್ಯ
ಕೊರೊನಾದಿಂದ ಉಂಟಾಗಿರುವ ತ್ಯಾಜ್ಯವೂ ಬಹುವಾಗಿ ಕಾಡುತ್ತಿದೆ. ಕಳೆದ ನಾಲ್ಕು ತಿಂಗಳಿನಿಂದ ದೇಶದಲ್ಲಿ ಒಟ್ಟಾರೆ 18 ಸಾವಿರ ಟನ್‌ನಷ್ಟು ಕೊರೊನಾ ತ್ಯಾಜ್ಯ ಉತ್ಪತ್ತಿಯಾಗಿದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ(ಸಿಪಿಸಿಬಿ) ದಾಖಲೆಗಳ ಪ್ರಕಾರ, ಕಳೆದ ನಾಲ್ಕು ತಿಂಗಳಲ್ಲಿ 18004 ಟನ್‌ ಕೊರೊನಾ ತ್ಯಾಜ್ಯ ಉತ್ಪತ್ತಿಯಾಗಿದೆ. ಇದರಲ್ಲಿ ಮಹಾರಾಷ್ಟ್ರದ್ದೇ ಸಿಂಹಪಾಲು. ಇಲ್ಲಿ 3,587 ಟನ್‌ನಷ್ಟು ತ್ಯಾಜ್ಯ ಸಂಗ್ರಹವಾಗಿದೆ. ಸೆಪ್ಟೆಂಬರ್‌ ತಿಂಗಳೊಂದರಲ್ಲೇ ದೇಶದಲ್ಲಿ 5,500 ಟನ್‌ ತ್ಯಾಜ್ಯ ಉತ್ಪತ್ತಿಯಾಗಿದೆ ಎಂದು ಸಿಪಿಸಿಬಿ ಹೇಳುತ್ತಿದೆ.

ಜೂನ್‌ನಿಂದ ಆರಂಭಗೊಂಡು, ಇಲ್ಲಿವರೆಗೆ ಉತ್ಪತ್ತಿಯಾಗಿರುವ 18 ಸಾವಿರ ಟನ್‌ ತ್ಯಾಜ್ಯವನ್ನು ದೇಶದಲ್ಲಿರುವ 198 ಬಯೋಮೆಡಿಕಲ್‌ ವೇಸ್ಟ್‌ ಟ್ರೀಟ್‌ಮೆಂಟ್‌ ಫೆಸಿಲಿಟಿಗಳಲ್ಲಿ ನಾಶ ಮಾಡಲಾಗಿದೆ. ಏನಿದು ಬಯೋಮೆಡಿಕಲ್‌ ತ್ಯಾಜ್ಯ? ವೈದ್ಯರು, ನರ್ಸ್‌ಗಳು ಬಳಸಿ ಬಿಸಾಕಿರುವ ಪಿಪಿಇ ಕಿಟ್‌ಗಳು, ಮಾಸ್ಕ್ಗಳು, ಶೂ ಕವರ್‌ಗಳು, ಗ್ಲೋವ್ಸ್‌, ಮಾನವ ಅಂಗಾಂಶಗಳು, ರಕ್ತ ಅಂಟಿರುವ ವಸ್ತುಗಳು, ಬ್ಯಾಂಡೇಜ್‌ಗಳು, ಪ್ಲಾಸ್ಟರ್‌ ಕಾಸ್ಟ್ಸ್, ಕಾಟನ್‌ ಸ್ವಾಬ್ಸ್, ದೇಶದ ಕಲ್ಮಷ, ರಕ್ತದ ಚೀಲಗಳು, ನೀಡಲ್ಸ್‌, ಸಿರೀಂಜ್‌ ಇತ್ಯಾದಿ.

ಶಾಲೆ ಮುಚ್ಚಿದ್ದಕ್ಕೆ 29.34 ಲಕ್ಷ ಕೋ. ರೂ. ನಷ್ಟ
ಕೋವಿಡ್ ಹಿನ್ನೆಲೆಯಲ್ಲಿ ಭಾರತದಲ್ಲಿ ಶಾಲಾ-ಕಾಲೇಜುಗಳನ್ನು ಮುಚ್ಚಲಾಗಿದ್ದು, ಇದರಿಂದ 29.34 ಲಕ್ಷ ಕೋಟಿ ರೂ. ನಷ್ಟ ಸಂಭವಿಸಲಿದೆ ಎಂದು ವಿಶ್ವ ಬ್ಯಾಂಕ್‌ ಹೇಳಿದೆ. ಇದು ಕೇವಲ ಕಲಿಕೆಯ ನಷ್ಟನಷ್ಟೇ ಅಲ್ಲ, ಆದಾಯದ ಮೇಲೂ ದುಷ್ಪರಿಣಾಮ ಬೀರಿದೆ ಎಂದು ಹೇಳಿದೆ.

ನಾವು ಹೊರಗೆ ಹೋಗ್ತೀವೆ…
ದೇಶಾದ್ಯಂತ ಕೊರೊನಾ ಸೋಂಕು ಹೆಚ್ಚುತ್ತಲೇ ಇದ್ದು, ಮುಂಬರುವ ಹಬ್ಬ, ಹರಿದಿನಗಳಲ್ಲಿ ಮನೆಯಲ್ಲೇ ಸಂಭ್ರಮಿಸಿ ಎಂಬ ಕೇಂದ್ರ ಆರೋಗ್ಯ ಸಚಿವರ ಮನವಿಗೆ ದೇಶದ ಜನ ಕ್ಯಾರೆ ಎಂದಿಲ್ಲ. ಲೋಕಲ್‌ ಸರ್ಕಲ್‌ ಎಂಬ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಶೇ.36 ಮಂದಿ ನಾವು ಸಾಮಾಜಿಕವಾಗಿ ಎಲ್ಲರೊಂದಿಗೆ ಬೆರೆಯುತ್ತೇವೆ ಎಂಬ ಉತ್ತರ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next