ಪೊಲೀಸ್ ಇಲಾಖೆಯ ಅಂಕಿ- ಅಂಶಗಳ ಪ್ರಕಾರ 2017ರಲ್ಲಿ 49, 2018ರಲ್ಲಿ 106 ಗಾಂಜಾ ಸೇವನೆ ಹಾಗೂ ಮಾರಾಟ ಪ್ರಕರಣಗಳು ದಾಖಲಾಗಿದ್ದವು. 2019ರಲ್ಲಿ ಈಗಾಗಲೇ 299 ಪ್ರಕರಣಗಳು ದಾಖಲಾಗಿದ್ದು, 206 ಮಂದಿಯನ್ನು ಬಂಧಿಸಲಾಗಿದೆ. ಅಕ್ಟೋಬರ್ ತಿಂಗಳಲ್ಲಿ ಗರಿಷ್ಟ 53 ಪ್ರಕರಣ ದಾಖಲಾಗಿದೆ.
Advertisement
ಯುವಕರೇ ಅಧಿಕಗಾಂಜಾ ಸೇವನೆಯ ದಾಸರಾಗುತ್ತಿರುವವರಲ್ಲಿ ಹೊರ ಜಿಲ್ಲೆ/ರಾಜ್ಯದ ಯುವಸಮುದಾಯದವರೇ ಅಧಿಕವಾಗಿದ್ದಾರೆ. ವಿದ್ಯಾರ್ಥಿಗಳನ್ನು ಕೇಂದ್ರೀಕರಿಸಿ ಕಾರ್ಯಾಚರಿಸುತ್ತಿರುವ ಈ ಜಾಲ ಶಿಕ್ಷಣ ಸಂಸ್ಥೆಗಳ ಬಳಿ ಕಾರ್ಯಾಚರಣೆ ನಡೆಸುತ್ತಿವೆ. ಈ ಮೂಲಕ ವಿದ್ಯಾರ್ಥಿಗಳ ಭವಿಷ್ಯ ಹಾಳು ಮಾಡುತ್ತಿದೆ.
ಗಾಂಜಾ ಮಾರಾಟ ಹಾಗೂ ಸೇವನೆ ವಿರುದ್ಧ ಪೊಲೀಸ್ ಇಲಾಖೆ ನಿರಂತರ ಕಾರ್ಯಾಚರಣೆ ನಡೆಸುತ್ತಿದ್ದರೂ ಕಿಡಿಗೇಡಿಗಳು ಗಾಂಜಾ ಪೂರೈಕೆಗೆ ಅನ್ಯಮಾರ್ಗಗಳನ್ನು ಬಳಸುತ್ತಿರುವುದರಿಂದ ಇಲಾ ಖೆಗೆ ತಲೆನೋವಾಗಿದೆ. ಅನುಮಾನ ಬಾರದಂತೆ ರೈಲುಗಳಲ್ಲಿ, ಬಸ್‌ಗಳಲ್ಲಿ ಪಾರ್ಸೆಲ್, ಕೊರಿಯರ್ ಹಾಗೂ ಪರಿಚಯಸ್ಥರ ಮೂಲಕ ಗಾಂಜಾ ಸರಬರಾಜು ನಡೆಯುತ್ತಿದೆ. ಪ್ರತಿದಿನ ಪ್ರಕರಣ
ಗಾಂಜಾ ಸೇವನೆ ಬಗ್ಗೆ ಜಿಲ್ಲೆಯಲ್ಲಿ ಪ್ರತಿದಿನವೂ ಪ್ರಕರಣ ದಾಖಲಾಗುತ್ತಿದೆ. ಮತ್ತಷ್ಟು ಕಟ್ಟೆಚ್ಚರ ವಹಿಸುವ ಸಲುವಾಗಿ ನಗರದಲ್ಲಿರುವ ಪ್ರಮುಖ ಕೊರಿಯರ್ ಕೇಂದ್ರಗಳ ಮೇಲೆ ಕಣ್ಣಿಡಲಾಗಿದ್ದು, ನಿಯಮಿತ ತಪಾಸಣೆ ನಡೆಯುತ್ತಿದೆ. ಅನುಮಾನ ಬಂದರೆ, ಪಾರ್ಸೆಲ್ ವಾರಸುದಾರರನ್ನು ಕರೆಸಿ ವಿಚಾರಿಸಲಾಗುತ್ತಿದೆ. ಅಪರಿಚಿತರಿಂದ ಪಾರ್ಸೆಲ್ ಸ್ವೀಕರಿಸದಂತೆ ಬಸ್ ಚಾಲಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಪೂರೈಕೆಯ ಜಾಲವನ್ನು ಸಂಪೂರ್ಣ ಬಂದ್ ಮಾಡುವ ಕೆಲಸದಲ್ಲಿ ಪೊಲೀಸರು ನಿರತರಾಗಿದ್ದಾರೆ.
Related Articles
ಒಂದೆಡೆ ಮಣಿಪಾಲವನ್ನು ಗುರಿಯಾಗಿಸಿ ಕೊಂಡು ಸೆನ್, ಡಿಸಿಐಬಿ ಸಿಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಮತ್ತೂಂದೆಡೆ ಗೋವಾ, ಮುಂಬಯಿ, ಕೇರಳ, ಶಿವಮೊಗ್ಗ, ಬೆಂಗಳೂರು
ಸೇರಿದಂತೆ ಹಲವಡೆಗಳಿಂದ ಗಾಂಜಾ ಸರಬರಾಜು ಆಗುತ್ತಿರುವುದು ಪೊಲೀಸರ ಗಮನಕ್ಕೆ ಬಂದಿದ್ದು, ಗಾಂಜಾ ಸಾಗಾಟ ಮಾಡುವವರ ಮೇಲೆ ಕಠಿನ ಕ್ರಮ ತೆಗೆದುಕೊಳ್ಳುವ ಭರವಸೆಯನ್ನು ಪೊಲೀಸರು ನೀಡಿದ್ದಾರೆ.
Advertisement
ನಿರಂತರ ಕಾರ್ಯಾಚರಣೆಗಾಂಜಾ ಮಾರಾಟ ಹಾಗೂ ಸೇವನೆ ಮಾಡುವವರ ಪತ್ತೆ ಕಾರ್ಯಾಚರಣೆ ನಡೆಯುತ್ತಿದೆ. ಇದನ್ನು ಪತ್ತೆ ಹಚ್ಚುವ ಸಾಧನಗಳ ಬಗ್ಗೆ ಪೊಲೀಸರಿಗೆ ಕಾರ್ಯಾಗಾರಗಳನ್ನು ನಡೆಸುವ ಮೂಲಕ ತಿಳಿಸಲಾಗಿದೆ. ಪೊಲೀಸರ ಕಾರ್ಯಾಚರಣೆ ನಿರಂತರವಾಗಿ ನಡೆಯಲಿದೆ.
– ನಿಶಾ ಜೇಮ್ಸ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ -ಪುನೀತ್ ಸಾಲ್ಯಾನ್