ಹುಬ್ಬಳ್ಳಿ: ಹೇಳಿಕೊಳ್ಳುವುದಕ್ಕೆ ವಾಣಿಜ್ಯ ನಗರಿ. ಆದರೆ ನೋಡುವುದಕ್ಕೂ ಒಂದು ದೊಡ್ಡ ಉದ್ಯಮವಿಲ್ಲ. ಉದ್ಯಮ ಆಕರ್ಷಣೆಗೆ ಪೂರಕ ವಾತಾವರಣ ಅದೆಷ್ಟೋ ಮೈಲುಗಳ ದೂರದಲ್ಲಿದೆ. ಇದ್ದ ಕೈಗಾರಿಕಾ ಪ್ರದೇಶಗಳು ಕೊಳಗೇರಿಗಳಿಗೂ ಸವಾಲೊಡ್ಡುವ ಸ್ಥಿತಿಯಲ್ಲಿವೆ. ಇರುವ ಕೆಲ ಉದ್ಯಮಿಗಳು ಬೇರೆ ಕಡೆ ಅವಕಾಶ ಸಿಕ್ಕರೆ ಹೋಗುವುದೇ ಸೂಕ್ತ ಎನ್ನುವ ಮನೋಸ್ಥಿತಿಯಲ್ಲಿದ್ದಾರೆ…
ಹು-ಧಾ ಅಭಿವೃದ್ಧಿ ವೇದಿಕೆ: ಹು-ಧಾದಲ್ಲಿ ಕೈಗಾರಿಕಾ ಸ್ನೇಹಿ ವಾತಾವರಣಕ್ಕೆ ‘ಹುಬ್ಬಳ್ಳಿ-ಧಾರವಾಡ ಅಭಿವೃದ್ಧಿ ವೇದಿಕೆ'(ಎಚ್‌ಡಿಡಿಎಫ್) ಅಸ್ತಿತ್ವಕ್ಕೆ ಬಂದಿದೆ. ವಿಆರ್‌ಎಲ್ ಸಮೂಹ ಸಂಸ್ಥೆ ಚೇರ್ಮನ್ ಡಾ| ವಿಜಯ ಸಂಕೇಶ್ವರ ಅವರು ವೇದಿಕೆ ಚೇರ್ಮನ್‌ರಾಗಿದ್ದು, ಕೆಎಲ್ಇ ತಾಂತ್ರಿಕ ವಿವಿ ಕುಲಪತಿ ಡಾ| ಅಶೋಶ ಶೆಟ್ಟರ ಉಪ ಚೇರ್ಮನ್‌ರಾಗಿದ್ದಾರೆ. ಅನೇಕ ಉದ್ಯಮಿಗಳು ಪದಾಧಿಕಾರಿಗಳಾಗಿದ್ದಾರೆ.
ಉದ್ಯಮಸ್ನೇಹಿ ವಾತಾವರಣ ನಿರ್ಮಾಣ ನಿಟ್ಟಿನಲ್ಲಿ ಸಾರ್ವಜನಿಕರ ಇನ್ನಿತರರ ಅಭಿಪ್ರಾಯ ಸಂಗ್ರಹ, ಉದ್ಯಮ ವಾತಾವರಣ ಬಲವರ್ಧನೆಗೆ ವಿವಿಧ ಸಲಹೆ-ಶಿಫಾರಸು, ಉದ್ಯಮ ಬೆಳವಣಿಗೆ ನಿಟ್ಟಿನಲ್ಲಿ ಜಾಗೃತಿ ಮೂಡಿಸುವುದು, ಚರ್ಚೆ, ಸಂವಾದ, ಗೋಷ್ಠಿಗಳ ಆಯೋಜನೆ ಇನ್ನಿತರ ಕಾರ್ಯಗಳೊಂದಿಗೆ ವೇದಿಕೆ ಹು-ಧಾ, ಉತ್ತರ ಕರ್ನಾಟಕದಲ್ಲಿ ಉದ್ಯಮ ವೇಗೋತ್ಕರ್ಷಕ್ಕೆ ಮಹತ್ವದ ಕೊಡುಗೆ ನೀಡಲು ಮುಂದಾಗಿದೆ.
ಅವಳಿ ನಗರದಲ್ಲಿ ಕೈಗಾರಿಕಾ ಸ್ನೇಹಿ ವಾತಾವರಣ ನಿರ್ಮಾಣ, ಬೃಹತ್ ಕೈಗಾರಿಕೆಗಳ ಆಕರ್ಷಣೆಗೆ ವೇದಿಕೆ ಒದಗಿಸಲು ಮುಂದಾಗಿದೆ. ಸಾರ್ವಜನಿಕ ವಲಯ ಹಾಗೂ ಖಾಸಗಿ ವಲಯ ಬಂಡವಾಳ ಹೂಡಿಕೆದಾರರನ್ನು ಆಕರ್ಷಿಸುವ ಮೂಲಕ ಉದ್ಯಮ ಬೆಳವಣಿಗೆ ಕಾಣಬೇಕು, ಸ್ಥಳೀಯ ಉದ್ಯಮಿಗಳು ಇನ್ನಷ್ಟು ಸಾಧನೆ ಮಾಡುವಂತಾಗಬೇಕೆಂಬುದು ವೇದಿಕೆ ಮಹದಾಸೆ.
Advertisement
-ಇದು ಹು.ಧಾ. ಕೈಗಾರಿಕಾ ವಲಯ ಚಿತ್ರಣ. ಕೈಗಾರಿಕಾ ವಲಯ ನೆಗೆತ, ಉದ್ಯಮಿಗಳಿಗೆ ಉತ್ತೇಜನ, ಹೊರಗಿನ ಉದ್ಯಮಿಗಳ ಆಕರ್ಷಣೆ ನಿಟ್ಟಿನಲ್ಲಿ ದೊಡ್ಡ ಹೆಜ್ಜೆ ಇರಿಸುವ ಯತ್ನವೊಂದು ರೂಪುಗೊಂಡಿದೆ. ಸಾರ್ವಜನಿಕರು, ಉದ್ಯಮಿಗಳ ಪಾಲ್ಗೊಳ್ಳುವಿಕೆ ಜತೆಗೆ ರಾಜ್ಯ ಹಾಗೂ ಕೇಂದ್ರ ಸರಕಾರಗಳ ನೆರವು-ಪ್ರೋತ್ಸಾಹದಿಂದ ಹುಬ್ಬಳ್ಳಿ-ಧಾರವಾಡವನ್ನು ಉದ್ಯಮಸ್ನೇಹಿಯಾಗಿಸುವ ಮಹತ್ವದ ಕಾರ್ಯಕ್ಕೆ ಅನೇಕ ಸಮಾನ ಮನಸ್ಸುಗಳು ಒಗ್ಗೂಡಿವೆ. ತಮ್ಮದೇ ಚಿಂತನೆ, ಅನುಭವಗಳೊಂದಿಗೆ ಸರಕಾರಗಳ ಮೇಲೆ ಪ್ರಭಾವ ಬೀರುವ, ಉದ್ಯಮಕ್ಕೆ ಚೇತರಿಕೆಯ ಸಾರ್ಥಕ ಹೆಜ್ಜೆ ಇರಿಸಲು ಮುಂದಾಗಿವೆ.
Related Articles
Advertisement
ಗಂಭೀರ ಚಿಂತನೆ ಅಗತ್ಯ: ಹು-ಧಾ ಕೈಗಾರಿಕಾ ಬೆಳವಣಿಗೆ ದರ ಋಣಾತ್ಮಕ ಸ್ಥಿತಿಯಲ್ಲಿದೆ. ಅವಳಿ ನಗರದ ರಸ್ತೆಗಳು ಮಳೆ ಬಂದರೆ ಕೆಸರುಗದ್ದೆ, ಮಳೆ ನಿಂತರೆ ಧೂಳುಮಯ ಸ್ಥಿತಿ. ಸ್ವಚ್ಛತೆ ಕೊರತೆ, ನೀರಿನ ಸಮಸ್ಯೆ ಒಂದು ಕಡೆಯಾದರೆ, ಇಲ್ಲಿನ ತಾರಿಹಾಳ, ಗೋಕುಲ, ಗಾಮನಗಟ್ಟಿ, ಲಕಮನಹಳ್ಳಿ ಇನ್ನಿತರ ಕೈಗಾರಿಕಾ ಪ್ರದೇಶಗಳು ಕೊಳಗೇರಿಗಳಿಗೂ ಸವಾಲೊಡ್ಡುವ ಸ್ಥಿತಿಯಲ್ಲಿವೆ. ಹೊರಗಿನ ಹೂಡಿಕೆದಾರರು ಯಾರಾದರೂ ಇಲ್ಲಿ ಉದ್ಯಮ ಆರಂಭಕ್ಕೆ ಮುಂದಾದರೆ, ಅವಳಿ ನಗರ ಅವಸ್ಥೆ, ಕೈಗಾರಿಕಾ ವಲಯಗಳ ದುಸ್ಥಿತಿ ಕಂಡು ಹೂಡಿಕೆ ನಿರ್ಧಾರ ಕೈಬಿಡುವ ಸಾಧ್ಯತೆ ಇಲ್ಲದಿಲ್ಲ. ಇಂತಹ ಸ್ಥಿತಿಯಲ್ಲಿ ಹೂಡಿಕೆದಾರರ ಆಕರ್ಷಣೆ ಹೇಗೆ ಸಾಧ್ಯ ಎಂಬ ಗಂಭೀರ ಚಿಂತನೆ ನಡೆಯಬೇಕಾಗಿದೆ.
ದೊಡ್ಡ ಕೈಗಾರಿಕೆಗಳ ಆರಂಭಕ್ಕೆ ಭೂ ಬ್ಯಾಂಕ್ ಸೌಲಭ್ಯದ ಅವಶ್ಯಕತೆ ಇದೆ. ಇನ್ನೊಂದು ಕಡೆ ಐಟಿ ಉದ್ಯಮಕ್ಕೆ ನಿಗದಿ ಪಡಿಸಿದ ಭೂಮಿ ಇದ್ದರೂ ಇಂದಿಗೂ ಸಮರ್ಪಕ ರೀತಿಯಲ್ಲಿ ಹಂಚಿಕೆಯಾಗಿಲ್ಲ. ಕೈಗಾರಿಕಾ ವಲಯಗಳಲ್ಲಿ ಕನಿಷ್ಠ ರಸ್ತೆ, ಚರಂಡಿ, ನೀರಿನ ವ್ಯವಸ್ಥೆ ಇಲ್ಲವಾಗಿದೆ.
ಎಚ್‌ಡಿಡಿಎಫ್‌ಗೆ ಲೋಪ-ಕೊರತೆ ಮೀರಿ ಸಾಗುವ ಸವಾಲು:
ಅವಳಿ ನಗರ ಸುಧಾರಣೆ ನಿಟ್ಟಿನಲ್ಲಿ ಈ ಹಿಂದೆ ಪಾಲಿಕೆಯಿಂದ ಸಿಟಿಜನ್ ಫೋರಂ ರೂಪಿಸಲಾಗಿತ್ತು. ಅನೇಕ ತಜ್ಞರು, ಅನುಭವಿಗಳು, ಚಿಂತಕರಿಂದ ನಾಗರಿಕ ಸನ್ನದು ರೂಪುಗೊಂಡಿತ್ತು. ಸ್ಥಳೀಯ ಆಡಳಿತ, ಸ್ವಚ್ಛತೆಯಲ್ಲಿ ಸಾರ್ವಜನಿಕರ ಪಾಲುದಾರಿಕೆ ಮಹತ್ವದ ಮನವರಿಕೆ ಯತ್ನಗಳು ನಡೆದಿದ್ದವು. ದಿನಗಳೆದಂತೆ ಅದು ತೆರೆಗೆ ಸರಿದಿತ್ತು. ವಾರ್ಡ್ ಸಭೆಗಳು ಅರ್ಥ ಕಳೆದುಕೊಂಡಿವೆ, ಉದ್ಯಮಿಗಳ ಬಗೆಗಿನ ಸಾರ್ವಜನಿಕರ ಭಾವನೆಗಳು ಬದಲಾಗಬೇಕಾಗಿದೆ. ಅವಳಿ ನಗರದ ಎಲ್ಲ ಕೊರತೆ, ಲೋಪಗಳನ್ನು ಮೆಟ್ಟಿ ನಿಂತು ಉದ್ಯಮ ಬೆಳವಣಿಗೆಯ ನಗೆ ಬೀರಬೇಕಾಗಿದೆ. ಅಂತಹ ಯತ್ನದತ್ತ ವೇದಿಕೆ ಸಾಗುವಂತಾಗಬೇಕಾಗಿದೆ. ಇದೆಲ್ಲದಕ್ಕಿಂತ ಮುಖ್ಯವಾಗಿ ಹು-ಧಾ ಅಭಿವೃದ್ಧಿ ವೇದಿಕೆ ತಾನು ರಾಜಕೀಯೇತರ ಸಂಸ್ಥೆ ಎಂಬುದನ್ನು ಮನದಟ್ಟು ಮಾಡಬೇಕಾಗುತ್ತದೆ.