ಚಳ್ಳಕೆರೆ: ಕಳೆದ ಹತ್ತು ವರ್ಷಗಳಿಂದ ಶಿಕ್ಷಕರ ಬಗ್ಗೆ ಮುತುವರ್ಜಿ ವಹಿಸಿ ಕೆಲಸ ಮಾಡಿದ್ದೇನೆ. ಮತ್ತೂಮ್ಮೆ ಶಿಕ್ಷಕರ ಕೆಲಸ ಕಾರ್ಯಗಳನ್ನು ಮಾಡಿಕೊಡುವ ಪುಣ್ಯದ ಕೆಲಸ ನನ್ನ ಪಾಲಿಗೆ ಒದಗಿದೆ. ವಿಧಾನ ಪರಿಷತ್ ಆಗ್ನೇಯ ಶಿಕ್ಷಕರ ಕ್ಷೇತ್ರದಿಂದ ಮೂರನೇ ಬಾರಿಗೆ ಸ್ಪರ್ಧಿಸುತ್ತಿದ್ದು, ಜೂನ್ 8ರಂದು ನಡೆಯುವ ಚುನಾವಣೆಯಲ್ಲಿ ಮತ ನೀಡಿ ಬೆಂಬಲಿಸಬೇಕು ಎಂದು ಆಗ್ನೇಯ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವೈ.ಎ. ನಾರಾಯಣಸ್ವಾಮಿ ಮನವಿ ಮಾಡಿದರು. ಶುಕ್ರವಾರ ಇಲ್ಲಿನ ರೋಟರಿ ಬಾಲಭವನದಲ್ಲಿ ತಾಲೂಕು ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ಪ್ರಚಾರ ಸಭೆಯಲ್ಲಿ ಮತಯಾಚನೆ ಮಾಡಿ ಅವರು ಮಾತನಾಡಿದರು.
ಕಳೆದ ಎರಡು ವರ್ಷಗಳ ಹಿಂದೆ ಹೆಬ್ಟಾಳ ಕ್ಷೇತ್ರದ ಶಾಸಕನಾಗಿ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿದ್ದೇನೆ. ಪಕ್ಷದ ಸೂಚನೆ ಮೇರೆಗೆ ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸಿದ್ದೇನೆ. ಎರಡು ಸಲ ಶಿಕ್ಷಕರು ಪ್ರೀತಿ-ವಿಶ್ವಾಸ ಹಾಗೂ ಅಭಿಮಾನದಿಂದ ನನ್ನನ್ನು ವಿಧಾನ ಪರಿಷತ್‌ಗೆ ಆಯ್ಕೆ ಮಾಡಿದ್ದರು. ಈ ಭಾಗದ ಬಹುತೇಕ ಶಿಕ್ಷಕರ ಸಮಸ್ಯೆಯನ್ನು ಬಗೆಹರಿಸುವಲ್ಲಿ ನಿಮ್ಮೆಲ್ಲರ ಸಹಕಾರದಿಂದ ಯಶಸ್ವಿಯಾಗಿದ್ದೇನೆ ಎಂದರು.
ಇಂದಿಗೂ ನನ್ನ ಬಗ್ಗೆ ಅಪಾರವಾದ ಅಭಿಮಾನವನ್ನು ಶಿಕ್ಷಕ ವೃಂದ ಹೊಂದಿದೆ. ನಾನು ತಾಲೂಕಿನ ಶಿಕ್ಷಕರ ಸಮಸ್ಯೆಗಳ ಪರಿಹಾರದ ಬಗ್ಗೆ ವಿಧಾನ ಪರಿಷತ್‌ನಲ್ಲಿ ಸರ್ಕಾರದ ಮಟ್ಟದಲ್ಲಿ ಹೋರಾಟ ನಡೆಸಿದ್ದೇನೆ. ಆದ್ದರಿಂದ ಈ ಬಾರಿಯೂ ನನ್ನನ್ನು ಬೆಂಬಲಿಸಿ ಗೆಲ್ಲಿಸಬೇಕು ಎದು ಕೋರಿದರು. ವಿ. ದೊಡ್ಡಯ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ವೈ.ಎ. ನಾರಾಯಣಸ್ವಾಮಿ ಶಿಕ್ಷಕರ ಕ್ಷೇತ್ರದಿಂದ ಎರಡು ಬಾರಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದರು.
ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ಶಕ್ತಿ ಮೀರಿ ಶ್ರಮಿಸಿದ್ದಾರೆ. ಇಂದಿಗೂ ತಾಲೂಕಿನ ಯಾವುದೇ ಶಿಕ್ಷಕರು ಸಮಸ್ಯೆ ಉಂಟಾದಲ್ಲಿ ಮೊದಲು ನೆನಪಿಸಿಕೊಳ್ಳುವುದು ನಾರಾಯಣಸ್ವಾಮಿ ಅವರನ್ನು. ಶಿಕ್ಷಕರನ್ನು ಅತಿ ಹೆಚ್ಚು ಗೌರವದಿಂದ ಕಾಣುವ ನಾರಾಯಣಸ್ವಾಮಿ ಮತ್ತೂಮ್ಮೆ ಈ ಕ್ಷೇತ್ರದಿಂದ ಆಯ್ಕೆಯಾಗಲು ಶಿಕ್ಷಕರು ಸಹಕಾರ ನೀಡಬೇಕೆಂದರು.
ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ಮಂಡಲಾಧ್ಯಕ್ಷ ಬಿ.ವಿ. ಸಿರಿಯಣ್ಣ ಮಾತನಾಡಿ, ಈ ತಿಂಗಳ 12ರಂದು ನಡೆದ ಚುನಾವಣೆಯಲ್ಲಿ ಚಳ್ಳಕೆರೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸೋಲು ಕಂಡಿದ್ದಾರೆ. ಆ ಸೋಲಿನ ಕಹಿಯನ್ನು ಮರೆಯಲು ಪಕ್ಷದ ಎಲ್ಲಾ ಮುಖಂಡರು ಹಾಗೂ ಕಾರ್ಯಕರ್ತರು ವೈ.ಎ. ನಾರಾಯಣಸ್ವಾಮಿಯವರ ಗೆಲುವಿಗೆ ಶ್ರಮಿಸಬೇಕು. ನಿಮ್ಮ ವ್ಯಾಪ್ತಿಯಲ್ಲಿರುವ ಶಿಕ್ಷಕರನ್ನು ವಿನಂತಿಸಿ ನಾರಾಯಣಸ್ವಾಮಿಯವರಿಗೆ ಮತ ನೀಡುವಂತೆ ಮನವಿ ಮಾಡಬೇಕು.
ಅವರ ಗೆಲುವು ಪಕ್ಷದ ಕಾರ್ಯಕರ್ತರ ಮೇಲೆ ಅವಲಂಬಿಸಿದೆ. ಆದ್ದರಿಂದ ಎಲ್ಲಾ ಕಾರ್ಯಕರ್ತರು ಹಾಗೂ ಮುಖಂಡರು ಈ ನಿಟ್ಟಿನಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವಂತೆ ಮನವಿ ಮಾಡಿದರು. ಜಿಲ್ಲಾ ಉಪಾಧ್ಯಕ್ಷ ಬಿ.ಎಸ್. ಶಿವಪುತ್ರಪ್ಪ, ಸಿ.ಬಿ. ಬಾಲರಾಜು, ಜಿ.ಕೆ.ವೀರಣ್ಣ, ದೇವೀರಪ್ಪ, ವೆಂಕಟೇಶ್, ಭೀಮಪ್ಪ, ಈಶ್ವರಪ್ಪ, ಯಾದವ ರೆಡ್ಡಿ ಭಾಗವಹಿಸಿದ್ದರು.
ನನ್ನ ಅವಧಿಯಲ್ಲಿ ಚಳ್ಳಕೆರೆ ತಾಲೂಕಿನ 34 ಶಾಲೆಗಳಿಗೆ 80 ಲಕ್ಷ ರೂ. ಅನುದಾನ ನೀಡಿದ್ದೇನೆ. ಹತ್ತು ವರ್ಷಗಳ ಅವಧಿಯಲ್ಲಿ ಶಿಕ್ಷಣ ಇಲಾಖೆಯ ಅಭಿವೃದ್ಧಿಗಾಗಿ 15 ಕೋಟಿ ರೂ. ಅನುದಾನ ಒದಗಿಸಿದ್ದೇನೆ. ಕಳೆದ ಎರಡೂ ಅವಧಿಯಲ್ಲೂ ಕ್ಷೇತ್ರದ ಶಿಕ್ಷಕ ಮತದಾರರು ಅತಿ ಹೆಚ್ಚು ಮತಗಳನ್ನು ನೀಡಿ ಗೆಲ್ಲಿಸಿದ್ದಾರೆ. ಹಾಗಾಗಿ ಈ ಬಾರಿಯೂ ಗೆಲುವಿನ ವಿಶ್ವಾಸವಿದೆ. ವೈ.ಎ. ನಾರಾಯಣಸ್ವಾಮಿ, ವಿ.ಪ. ಆಗ್ನೇಯ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ.