ಪಾರವ್ವ ಹಳ್ಳಿಯೊಂದರಲ್ಲಿ ಕೂಲಿ ಕೆಲಸ ಮಾಡಿಕೊಂಡು ಬದುಕು ಸಾಗಿಸುತ್ತಿರುವ ಬಡ ಮಹಿಳೆ. ತಾನಿದ್ದ ಹಳೇ ಮನೆಯನ್ನು ಕೆಡವಿ ಅಲ್ಲೊಂದು ಹೊಸ ಮನೆಯನ್ನು ಕಟ್ಟಬೇಕು. ಪ್ರಾಯಕ್ಕೆ ಬಂದ ತನ್ನ ಮಗ ಮತ್ತು ಮಗಳಿಗೆ ಒಂದೊಳ್ಳೆ ಸಂಬಂಧ ನೋಡಿ ಮದುವೆ ಮಾಡಬೇಕು, ಮದ್ಯವ್ಯಸನಿಯಾದ ತನ್ನ ಗಂಡನ ವ್ಯಸನ ಬಿಡಿಸಬೇಕು. ಊರಿನಲ್ಲಿ ಗೌರವಯುತವಾಗಿ ಬಾಳಬೇಕು. ಕೊನೆಗೆ ತಾನು ಕಟ್ಟಿಸುವ ಮನೆಯಲ್ಲೇ ನೆಮ್ಮದಿಯಾಗಿ ಕೊನೆಯುಸಿರು ಬಿಡಬೇಕು. ಇವಿಷ್ಟು ಪಾರವ್ವನ ಬದುಕಿನ ದೊಡ್ಡ ಕನಸು. ಈ ಕನಸನ್ನು ನನಸು ಮಾಡಿಕೊಳ್ಳಲೆಂದೇ ಪಾರವ್ವ ಹಳ್ಳಿ ಬಿಟ್ಟು ದುಡಿಮೆಗಾಗಿ ಬೆಂಗಳೂರಿಗೆ ಬರುತ್ತಾಳೆ. ಹಾಗಾದರೆ, ಅಂತಿಮವಾಗಿ ಪಾರವ್ವನ ಕನಸು ನನಸಾಗುತ್ತದೆಯಾ? ಇದೇ ಕಥಾಹಂದರವನ್ನು ಇಟ್ಟುಕೊಂಡು ‘ಪಾರವ್ವನ ಕನಸು’ ಎನ್ನುವ ಚಿತ್ರವೊಂದು ತೆರೆಗೆ ಬರುತ್ತಿದೆ.
ಸದ್ಯ ಪೋಸ್ಟ್ ಪ್ರೊಡಕ್ಷನ್ ಅಂತಿಮ ಹಂತದಲ್ಲಿರುವ ‘ಪಾರವ್ವನ ಕನಸು’ ಚಿತ್ರದ ಆಡಿಯೋ ಇತ್ತೀಚೆಗೆ ಬಿಡುಗಡೆಗೊಂಡಿದೆ. ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್, ಮಾಜಿ ಅಧ್ಯಕ್ಷ ಎಸ್.ಎ ಚಿನ್ನೇಗೌಡ, ಕಾರ್ಯದರ್ಶಿ ಎನ್.ಎಂ ಸುರೇಶ್ ಸೇರಿದಂತೆ ಅನೇಕ ಗಣ್ಯರು ಮುಖ್ಯ ಅತಿಥಿಗಳಾಗಿ ಆಗಮಿಸಿ ‘ಪಾರವ್ವನ ಕನಸು’ ಚಿತ್ರದ ಹಾಡುಗಳನ್ನು ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭ ಕೋರಿದರು.
ಹಳ್ಳಿಯ ಬದುಕು ಮತ್ತು ಸೊಗಡು ಎರಡೂ ಚಿತ್ರದಲ್ಲಿದೆ. ಹಳ್ಳಿಯ ಸಾಮಾನ್ಯ ಮಹಿಳೆಯೊಬ್ಬಳು ತನ್ನ ಬದುಕಿನ ಬದಲಾವಣೆಗೆ ಹೇಗೆಲ್ಲ ಕಷ್ಟಪಡುತ್ತಾಳೆ ಎನ್ನುವ ಚಿತ್ರಣ ಚಿತ್ರದಲ್ಲಿದೆ. ಚಿತ್ರದ ಕಥೆ ಮನ ಮುಟ್ಟುವಂತಿದ್ದು, ಪ್ರತಿಯೊಬ್ಬರಿಗೂ ಇಷ್ಟವಾಗುತ್ತದೆ ಎನ್ನುವ ಭರವಸೆಯ ಮಾತುಗಳನ್ನಾಡುತ್ತದೆ ‘ಪಾರವ್ವನ ಕನಸು’ ಚಿತ್ರತಂಡ.
ಆರ್. ಸುರೇಶ್ ಕುಮಾರ್ ‘ಪಾರವ್ವನ ಕನಸು’ ಚಿತ್ರವನ್ನು ನಿರ್ಮಿಸುವುದರ ಜೊತೆಗೆ ನಾಯಕ ನಟನಾಗಿಯೂ ಅಭಿನಯಿಸಿದ್ದಾರೆ. ಸುರೇಶ್ ಕುಮಾರ್‌ಗೆ ನಾಯಕಿಯಾಗಿ ರಶ್ಮಿತಾ ಜೋಡಿಯಾಗಿದ್ದಾರೆ. ತ್ರಕ್ಕೆ ಸಿ. ಮಲ್ಲಿಕಾರ್ಜುನ್ ಕಥೆ, ಚಿತ್ರಕಥೆ, ಸಾಹಿತ್ಯ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಉಳಿದಂತೆ ಅಪೂರ್ವಶ್ರೀ, ಅಂಜನಪ್ಪ, ಶಿವಕುಮಾರ್ ಆರಾಧ್ಯ, ಕಿಲ್ಲರ್ ವೆಂಕಟೇಶ್, ಚಂದ್ರಪ್ರಭ ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.ಚಿತ್ರಕ್ಕೆ ನಾಗಶೆಟ್ಟಿ ಮಳಗಿ ಛಾಯಾಗ್ರಹಣ, ರಾಮ್ ಸೆಟ್ಟಿ ಪವನ್ ಸಂಕಲನ ಕಾರ್ಯವಿದೆ. ಚಿತ್ರದ ಹಾಡುಗಳಿಗೆ ತರುಣ್ ಸೈಮೆಂಡ್ಸ್ ಸಂಗೀತ ಸಂಯೋಜಿಸಿದ್ದಾರೆ. ಚಿಕ್ಕಮಗಳೂರು, ಮಂಗಳೂರು, ಬೆಂಗಳೂರು ಸುತ್ತಮುತ್ತ ‘ಪಾರವ್ವನ ಕನಸು’ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ಶೀಘ್ರದಲ್ಲಿಯೇ ಸೆನ್ಸಾರ್ ಮುಂದೆ ಹೋಗಲಿರುವ ‘ಪಾರವ್ವನ ಕನಸು’ ಎಲ್ಲವೂ ಅಂದುಕೊಂಡಂತೆ ನಡೆದರೆ, ಇದೆ ವರ್ಷಾಂತ್ಯದ ಕೊನೆಗೆ ತೆರೆಗೆ ಬರುವ ಸಾಧ್ಯತೆ ಇದೆ ಎನ್ನುತ್ತದೆ ಚಿತ್ರತಂಡ.