ಬೆಂಗಳೂರು: ಕಸದ ರಾಶಿಯಲ್ಲಿ ಬಿಸಾಡಿದ್ದ ಗ್ರಾನೈಟ್ ಕಾಮಗಾರಿ ಹಾಗೂ ಸ್ವಚ್ಚಗೊಳಿಸಲು ಬಳಸುವ ರಾಸಾಯನಿಕ ತುಂಬಿದ್ದ ಡಬ್ಬಿ ಸ್ಫೋಟಗೊಂಡು ವೃದ್ಧರೊಬ್ಬರ ಕಾಲಿನ ಪಾದ ತುಂಡಾಗಿರುವ ಘಟನೆ ಆಡುಗೋಡಿ ಠಾಣೆ ವ್ಯಾಪ್ತಿಯ ರಂಗದಾಸಪ್ಪ ಬಡವಾಣೆಯಲ್ಲಿ ಭಾನುವಾರ ಸಂಜೆ ನಡೆದಿದ್ದು, ಸ್ಥಳದಲ್ಲಿ ಆಂತಕದ ವಾತಾವರಣ ನಿರ್ಮಾವಾಗಿತ್ತು.
ಚಂದ್ರಪ್ಪ ಲೇಔಟ್‌ನ ನಿವಾಸಿ ನರಸಿಂಹಯ್ಯ(65) ಗಾಯಗೊಂಡವರು. ಅವರ ಎಡಗಾಲಿನ ಪಾದ ತುಂಡಾ ಗಿದ್ದು, ತುರ್ತುನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾ ಗಿದ್ದಾರೆ. ರಂಗದಾಸಪ್ಪ ಲೇಔಟ್ ಬಳಿ ಮೆಟ್ರೋ ಕಾಮಗಾರಿ ನಡೆಯುತ್ತಿದೆ. ಅದರ ಕೂಗಳತೆ ದೂರದಲ್ಲಿ ಬಲಮುರಿ ಗಣಪತಿ ದೇವಸ್ಥಾನ ಇದ್ದು, ಖಾಲಿ ನಿವೇಶನ ಇದೆ. ಅದರಲ್ಲಿ ಕಸ ಸುರಿಯಲಾಗಿದೆ.
ಹಾಸ್ಟೆಲ್‌ವೊಂದರಲ್ಲಿ ಕೆಲಸ ಮಾಡುವ ನರ ಸಿಂಹಯ್ಯ ಸಂಜೆ 4 ಗಂಟೆ ಸುಮಾರಿಗೆ ಮದ್ಯ ಸೇವಿಸಿದ್ದು, ಅಮಲಿನಲ್ಲಿ ಕಸದ ರಾಶಿಯ ಮೇಲೆ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದರು ಎಂದು ಹೇಳಲಾಗಿದೆ. ಈ ವೇಳೆ ಅಲ್ಲೇ ಬಿದ್ದಿದ್ದ ರಾಸಾಯನಿಕ ತುಂಬಿದ್ದ ಡಬ್ಬಿ ಮೇಲೆ ಕಾಲಿಟ್ಟಿದ್ದಾರೆ. ಪರಿಣಾಮ ಸ್ಫೋಟದೊಂಡು ಎಡಗಾಲಿನ ಪಾದ ತುಂಡಾಗಿ ಅಸ್ವಸ್ಥಗೊಂಡು ಬಿದ್ದಿದ್ದರು. ಕೂಡಲೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಗ್ರಾನೈಟ್ ಅಂಗಡಿಗಳು: ರಂಗದಾಸಪ್ಪ ಬಡಾವಣೆಯ ರಸ್ತೆಯುದ್ದಕ್ಕೂ ಗ್ರಾನೈಟ್ ಅಂಗಡಿಗಳಿವೆ. ಗ್ರಾನೈಟ್‌ಗಳನ್ನು ಕತ್ತರಿಸಲು ಕೆಲವೊಂದು ರಸಾಯನಿಕಗಳನ್ನು ಬಳಸುತ್ತಾರೆ. ಆ ರಸಾಯನಿಕಕ್ಕೆ ಸ್ಫೋಟಕ ಗುಣ ಇರುತ್ತದೆ. ಕೆಲಸಕ್ಕೆ ಬಳಸಿದ ಬಳಿಕ ಸ್ವಲ್ಪ ಪ್ರಮಾಣದ ಕೆಮಿಕಲ್ ಉಳಿದಿದ್ದ ಡಬ್ಬಿಯನ್ನು ಯಾರೋ ಕೆಲಸಗಾರರೇ ಕಸದ ರಾಶಿಯಲ್ಲಿ ಬಿಸಾಡಿದ್ದರು. ಜತೆಗೆ ರಂಗದಾಸಪ್ಪ ಬಡಾವಣೆಯಲ್ಲಿ ಮೆಟ್ರೋ ಕಾಮಗಾರಿ ಕೂಡ ನಡೆಯುತ್ತಿದ್ದರಿಂದ ಈ ಕಾಮಗಾರಿಗಾಗಿ ಕೆಲವೊಂದು ಕಟ್ಟಡಗಳನ್ನು ನೆಲಸಮಗೊಳಿಸಲಾಗಿತ್ತು. ಅಲ್ಲದೆ, ಕಟ್ಟಡದ ಅವಶೇಷಗಳನ್ನು ಕಸದ ರಾಶಿಯಲ್ಲೇ ತಂದು ಸುರಿದಿದ್ದರು.
ಬಿಸಿಲ ತಾಪಕ್ಕೆ ಡಬ್ಬಿಯಲ್ಲಿ ಕಾವು ಹೆಚ್ಚಾಗಿ ಸ್ಫೋಟಿಸಿರಬಹುದು ಎಂದು ಹೇಳಲಾಗಿದೆ. ಸ್ಫೋಟಗೊಂಡ ರಾಸಾಯನಿಕ ವಸ್ತು ಯಾವುದು ಎಂಬುದು ಗೊತ್ತಾಗಿಲ್ಲ. ಸ್ಯಾಂಪಲ್ ಮಾದರಿ ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿದೆ. ವರದಿ ಬಂದ ಬಳಿಕ ನಿಖರ ಮಾಹಿತಿ ಸಿಗಲಿದೆ. ಪ್ರತ್ಯಕ್ಷದರ್ಶಿ ಕೃಷ್ಣ ಎಂಬವರ ಹೇಳಿಕೆ ಆಧರಿಸಿ ಆಡುಗೋಡಿ ಠಾಣೆಯಲ್ಲಿ ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ರಾಸಾಯನಿಕ ವಸ್ತು ಎಸೆದವರ ಪತ್ತೆಗೆ ಸಿಸಿ ಕ್ಯಾಮೆರಾ ಪರಿಶೀಲಿಸಲಾಗುತ್ತಿದೆ ಎಂದು ಆಗ್ನೇಯ ವಿಭಾಗದ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದರು.
ಆತಂಕಗೊಂಡ ಸಾರ್ವಜನಿಕರು: ಭಾರೀ ಪ್ರಮಾಣ ದಲ್ಲಿ ರಾಸಾಯನಿಕ ಡಬ್ಬಿ ಸ್ಫೋಟಗೊಂಡಿದರಿಂದ ಸ್ಥಳೀಯರಲ್ಲಿ ಆತಂಕ ಮನೆ ಮಾಡಿತ್ತು. ಕೂಡಲೇ ಸ್ಥಳಕ್ಕೆ ಧಾವಿಸಿದ ಆಗ್ನೇಯ ವಿಭಾಗದ ಡಿಸಿಪಿ ಶ್ರೀನಾಥ್ ಮಹದೇವ್ ಜೋಷಿ, ಆಂತರಿಕ ಭದ್ರತಾ ಪಡೆ, ಎಫ್‌ಎಸ್‌ಎಲ್, ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನ ದಳದ ಸಿಬ್ಬಂದಿ ಸ್ಥಳ ಪರಿಶೀಲನೆ ಮಾಹಿತಿ ಸಂಗ್ರಹಿಸಿದ್ದಾರೆ. ಪೊಲೀಸರು ಸ್ಥಳೀಯರಿಗೆ ಯಾರು ಆತಂಕ ಪಡುವ ಅಗತ್ಯವಿಲ್ಲ ಎಂದು ಧೈರ್ಯ ತುಂಬಿದರು.
ಪೊಲೀಸ್ ಆಯುಕ್ತ ಭಾಸ್ಕರ್‌ರಾವ್ ಟ್ವೀಟ್: ಸ್ಫೋಟದ ಸುದ್ದಿ ವೈರಲ್ ಆಗುತ್ತಿದ್ದಂತೆ ನಗರ ಪೊಲೀಸ್ ಆಯುಕ್ತ ಭಾಸ್ಕರ್‌ರಾವ್ ತಕ್ಷಣ ಟ್ವೀಟ್ ಮಾಡಿ, ಗ್ರಾನೈಟ್‌ಗೆ ಬಳಸುವ ರಾಸಾಯನಿಕ ವಸ್ತು ಸಣ್ಣ ಪ್ರಮಾಣದಲ್ಲಿ ಸ್ಫೋಟಗೊಂಡಿದರಿಂದ ಒಬ್ಬರ ಕಾಲಿಗೆ ಗಂಭೀರವಾದ ಗಾಯವಾಗಿದೆ. ಸಾರ್ವಜನಿಕರು ಭಯ ಪಡುವ ಅಗತ್ಯವಿಲ್ಲ. ಯಾವುದೇ ವದಂತಿಗಳಿಗೆ ಕಿವಿಗೊಡಬೇಡಿ ಎಂದು ಮನವಿ ಮಾಡಿದ್ದರು.
ರಾಸಾಯನಿಕ ತುಂಬಿದ್ದ ಡಬ್ಬಿ ಸ್ಫೋಟಗೊಂಡು ಘಟನೆ ನಡೆದಿದ್ದು, ನರಸಿಂಹಯ್ಯ ಎಂಬವರ ಕಾಲಿಗೆ ಗಂಭೀರ ಗಾಯವಾಗಿದೆ. ಈ ಸಂಬಂಧ ಆಡುಗೋಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿಸಲಾಗಿದೆ.
-ಶ್ರೀನಾಥ್ ಮಹದೇವ್ ಜೋಷಿ, ಆಗ್ನೇಯ ವಿಭಾಗದ ಡಿಸಿಪಿ