Advertisement

ಡೆತ್‌ನೋಟ್‌ ಬರೆದಿಟ್ಟು ವೃದ್ಧ ದಂಪತಿ ಆತ್ಮಹತ್ಯೆಗೆ ಶರಣು

12:37 AM Aug 25, 2019 | Team Udayavani |

ಬೆಂಗಳೂರು: ಪುತ್ರ ಹಾಗೂ ಸೊಸೆ ತಮ್ಮನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂದು ಬೇಸರಗೊಂಡ ವೃದ್ಧ ದಂಪತಿ, ಡೆತ್‌ನೋಟ್‌ ಬರೆದಿಟ್ಟು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಗಿರಿನಗರದಲ್ಲಿ ಶನಿವಾರ ರಾತ್ರಿ ನಡೆದಿದೆ. ಗಿರಿನಗರ ನಿವಾಸಿ ಬಿಇಎಲ್‌ನ ನಿವೃತ್ತ ಅಧಿಕಾರಿ ಕೃಷ್ಣಮೂರ್ತಿ(70) ಅವರ ಪತ್ನಿ ಸ್ವರ್ಣಮೂರ್ತಿ (68) ಮೃತರು.

Advertisement

ಸಾಫ್ಟ್ವೇರ್‌ ಎಂಜಿನಿಯರ್‌ ಆಗಿರುವ ಪುತ್ರ ಮಂಜುನಾಥ್‌ ಮತ್ತು ಸೊಸೆ ಸ್ನೇಹಾ ತಮ್ಮನ್ನು ಸರಿಯಾಗಿ ನೋಡಿಕೊಳ್ಳುತ್ತಿರಲ್ಲ ಎಂದು ಆರೋಪಿಸಿ ಡೆತ್‌ನೋಟ್‌ ಬೆರದಿಟ್ಟು, ಶನಿವಾರ ಮಧ್ಯಾಹ್ನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾತ್ರಿ 9 ಗಂಟೆ ಸುಮಾರಿಗೆ ದಂಪತಿ ಕೆಲಸದಿಂದ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.

ಕೃಷ್ಣಮೂರ್ತಿ ದಂಪತಿ ಗಿರಿನಗರದ ನಾಲ್ಕನೇ ಹಂತದಲ್ಲಿ ಪುತ್ರ ಮಂಜುನಾಥ್‌, ಸೊಸೆ ಸ್ನೇಹ ಹಾಗೂ ಐದು ವರ್ಷದ ಮೊಮ್ಮಗನ ಜತೆ ವಾಸವಾಗಿದ್ದರು. ಮಗ ಮತ್ತು ಸೊಸೆ ಸಾಫ್ಟ್ವೇರ್‌ ಎಂಜಿನಿಯರ್‌ ಆಗಿದ್ದು, ಬೆಳಗ್ಗೆ ಎಂಟು ಗಂಟೆಗೆ ಕೆಲಸಕ್ಕೆ ಹೋದರೆ, ರಾತ್ರಿ 9 ಗಂಟೆಗೆ ಬರುತ್ತಿದ್ದರು. ಸ್ನೇಹ ತಮ್ಮ ಪುತ್ರನನ್ನು ಮನೆ ಸಮೀಪದಲ್ಲಿರುವ ತವರು ಮನೆಯಲ್ಲಿ ಬಿಟ್ಟು ಕೆಲಸಕ್ಕೆ ಹೋಗುತ್ತಿದ್ದರು.

ಈ ಹಿನ್ನೆಲೆಯಲ್ಲಿ ವೃದ್ಧ ದಂಪತಿಯನ್ನು ಸರಿಯಾಗಿ ನೋಡಿಕೊಳ್ಳುತ್ತಿರಲಿಲ್ಲ. ಈ ಮಧ್ಯೆ ಒಂದೂವರೆ ವರ್ಷಗಳಿಂದ ಸ್ವರ್ಣ ಅವರು ಅನಾರೋಗ್ಯಕ್ಕೆ ತುತ್ತಾಗಿದ್ದು, ಹಾಸಿಗೆ ಹಿಡಿದಿದ್ದರು. ಹೀಗಾಗಿ ಕೃಷ್ಣಮೂರ್ತಿ ಅವರೇ ಪತ್ನಿಯನ್ನು ಆರೈಕೆ ಮಾಡುತ್ತಿದ್ದರು. ಇದರಿಂದ ಬೇಸತ್ತ ಕೃಷ್ಣಮೂರ್ತಿ ಪುತ್ರ ಮಂಜುನಾಥ್‌ ಜತೆ ವಾಗ್ವಾದ ಕೂಡ ನಡೆಸಿದ್ದರು.

ಈ ಹಿನ್ನೆಲೆಯಲ್ಲಿ ಮಂಜುನಾಥ್‌ ಒಂದೂವರೆ ತಿಂಗಳ ಹಿಂದೆ ಒಬ್ಬ ಮಹಿಳಾ ಸೇವಕಿಯನ್ನು ನೇಮಿಸಿದ್ದರು. ಆದರೆ, ಆಕೆ ಸರಿಯಾಗಿ ಆರೈಕೆ ಮಾಡುತ್ತಿರಲಿಲ್ಲ ಎಂದು ಆರೋಪಿಸಲಾಗಿದೆ. ಇದರಿಂದ ಬೇಸತ್ತು ಶನಿವಾರ ಬೆಳಗ್ಗೆ ಎಂಟು ಗಂಟೆ ಸುಮಾರಿಗೆ ಪುತ್ರ ಮತ್ತು ಸೊಸೆ ಕೆಲಸಕ್ಕೆ ಹೋಗುತ್ತಿದ್ದಂತೆ ಕೃಷ್ಣಮೂರ್ತಿ ವಿಷವನ್ನು ಪತ್ನಿ ಸ್ವರ್ಣ ಅವರಿಗೆ ಕುಡಿಸಿ, ಬಳಿಕ ತಾವು ಕುಡಿದು ಕೊಣೆಯೊಂದರಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Advertisement

ರಾತ್ರಿ 9 ಗಂಟೆ ಸುಮಾರಿಗೆ ಮಂಜುನಾಥ್‌ ದಂಪತಿ ಬಂದಾಗ ಬಾಗಿಲು ಬಡಿದರೂ ತೆರೆದಿಲ್ಲ. ನಂತರ ಕಿಟಕಿಯಲ್ಲಿ ಇಣುಕಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಪೊಲೀಸರು ಕೃಷ್ಣಮೂರ್ತಿ ಅವರ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

ಮತ್ತೂಂದೆಡೆ ಉಸಿರಾಡುತ್ತಿದ್ದ ಸ್ವರ್ಣ ಅವರನ್ನು ಗಮನಿಸಿ ಕೂಡಲೇ ಆಸ್ಪತ್ರೆಗೆ ಕೊಂಡೊಯ್ದರಾದರೂ ಚಿಕಿತ್ಸೆ ಫ‌ಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ಹೇಳಿದರು. ಡೆತ್‌ನೋಟ್‌ ಸಂಬಂಧ ಮಂಜುನಾಥ್‌ ಮತ್ತು ಅವರ ಪತ್ನಿ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಮುಂದಿನ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಪೊಲೀಸರು ಹೇಳಿದರು. ಪ್ರಕರಣ ಗಿರಿನಗರ ಠಾಣೆಯಲ್ಲಿ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next