Advertisement

Kamalashile ದೇಗುಲದಿಂದ ಗೋ ಕಳವು ಯತ್ನ ವಿಫಲ

11:15 PM Jun 16, 2024 | Team Udayavani |

ಕುಂದಾಪುರ/ಸಿದ್ದಾಪುರ: ಕಮಲಶಿಲೆ ದೇವಸ್ಥಾನದಲ್ಲಿ ಶನಿವಾರ ತಡರಾತ್ರಿ ಗೋ ಕಳ್ಳತನಕ್ಕೆ ಯತ್ನಿಸಿದ್ದನ್ನು ಸೈನ್‌ ಇನ್‌ ಸಿಸಿಟಿವಿ ತಂಡ ಸಕಾಲದಲ್ಲಿ ಎಚ್ಚರಿಸಿ ಸಂಭಾವ್ಯ ಕಳ್ಳತನವನ್ನು ವಿಫಲಗೊಳಿಸಿದೆ.

Advertisement

ಕಮಲಶಿಲೆ ದೇವಸ್ಥಾನದ ಗೋಶಾಲೆಯಲ್ಲಿ ರಾತ್ರಿ 2.46ರ ವೇಳೆಗೆ ಇಬ್ಬರು ವ್ಯಕ್ತಿಗಳು ಎದುರಿನ ಬಾಗಿಲಿನ ಬೀಗ ಮುರಿದು ಬದಿಯ ಬಾಗಿಲ ಮೂಲಕ ನುಗ್ಗಿ ಮೂರು ಹಸುಗಳ ಹಗ್ಗವನ್ನು ಕತ್ತಿಯಿಂದ ಕಡಿದು ಸಾಗಾಟಕ್ಕೆ ಯತ್ನಿಸಿದ್ದರು. ದೇವಸ್ಥಾನದ ವತಿಯಿಂದ ಸೈನ್‌ ಇನ್‌ ಸೆಕ್ಯುರಿಟೀಸ್‌ ಸಂಸ್ಥೆಯ ಲೈವ್‌ ಮಾನಿಟರಿಂಗ್‌ ಸಿಸಿಟಿವಿ ಹಾಕಿಸಲಾಗಿದ್ದು ಈ ಸಂಸ್ಥೆ 24 ತಾಸು ಸಿಸಿಟಿವಿ ಮೇಲೆ ನೇರ ನಿಗಾ ಇಟ್ಟು ಪೊಲೀಸ್‌ ಇಲಾಖೆಗೆ ಇಂತಹ ಕಳ್ಳತನ, ಅನುಮಾನಾಸ್ಪದ ವ್ಯಕ್ತಿಗಳ ಓಡಾಟ, ಸಂಶಯಾಸ್ಪದ ಚಟುವಟಿಕೆಗಳ ಮಾಹಿತಿಯನ್ನು ತತ್‌ಕ್ಷಣ ನೀಡುತ್ತದೆ.

ಪೊಲೀಸರಿಗೆ ಮಾಹಿತಿ
ಕುಂದಾಪುರದ ಅಂಕದಕಟ್ಟೆಯಲ್ಲಿರುವ ಮಾನಿಟರಿಂಗ್‌ ಸೆಂಟರ್‌ನ ಸಿಬಂದಿ ದೇವಸ್ಥಾನದ ಗೋಶಾಲೆಯಲ್ಲಿ ಜಾನುವಾರುಗಳ ಹಗ್ಗ ಕಡಿಯುತ್ತಿರುವುದನ್ನು ಕಂಡು ಬೀಟ್‌ ಪೊಲೀಸ್‌, ಎಸ್‌ಐ, ದೇವಾಲಯದ ಭದ್ರತಾ ವಿಭಾಗದವರಿಗೆ ಮಾಹಿತಿ ನೀಡಿದ್ದಾರೆ. ಭದ್ರತಾ ವಿಭಾಗ ದವರು ಕೂಡಲೇ ಗೋಶಾಲೆಗೆ ಹೋದಾಗ ಶಂಕಿತರು ಸ್ಥಳದಿಂದ ಪರಾರಿಯಾಗಿದ್ದಾರೆ.

ನಾಪತ್ತೆ ಯಾಗಿದ್ದ ಒಂದು ದನ ಸಮೀಪದಲ್ಲಿ ಹೊರಗಿದ್ದು ಉಳಿದ ಎಲ್ಲ ದನಗಳೂ ಅಲ್ಲಿಯೇ ಸುರಕ್ಷಿತವಾಗಿದ್ದವು. ಎಸ್‌ಐ ಹಾಗೂ ಕುಂದಾಪುರ ಡಿವೈಎಸ್‌ಪಿ ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿದ್ದು ಕಾರಿನ ಮೂಲಕ ಬಂದವರ ಮಾಹಿತಿ ಕಲೆ ಹಾಕಿದ್ದಾರೆ. ಖಚಿತ ಮಾಹಿತಿ ದೊರೆತಿದ್ದು ಶಂಕಿತರ ಪತ್ತೆಗೆ ಕಾರ್ಯಾಚರಣೆ ನಡೆಯುತ್ತಿದೆ ಎಂದು ಡಿವೈಎಸ್‌ಪಿ ಕೆ.ಯು. ಬೆಳ್ಳಿಯಪ್ಪ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next