ಚಿತ್ತಾಪುರ: ಶಾಸಕರಿಗೆ ಗ್ರಾಮದ ಸಮಸ್ಯೆ ತಿಳಿಸಿದ್ದಕ್ಕಾಗಿ ಜಿಪಂ ಮಾಜಿ ಸದಸ್ಯರೊಬ್ಬರ ಬೆಂಬಲಿಗರು ಎನ್ನಲಾದ ಕೆಲವರು ದೂರು ನೀಡಿದ ಮಹಿಳೆಯರ ಮನೆಗೆ ನುಗ್ಗಿ ಹಲ್ಲೆ ಮಾಡಿದ ಘಟನೆ ಕಳೆದ ಶನಿವಾರ ದಿಗ್ಗಾಂವ ಗ್ರಾಮದಲ್ಲಿ ನಡೆದಿದ್ದು, ಸೋಮವಾರ ದೂರು-ಪ್ರತಿದೂರು ದಾಖಲಾಗಿವೆ.
ಗ್ರಾಮದ ತುಕಾರಾಮ ಮರೆಪ್ಪ, ರಂಜಿತಾ ತುಕಾರಾಮ, ಮಲ್ಲಿಕಾರ್ಜುನ ಮರೆಪ್ಪ, ಅಂಬಿಕಾ ಮಲ್ಲಪ್ಪ, ಚೆನ್ನಪ್ಪ ಮಲ್ಲಪ್ಪ, ಗುಂಡಮ್ಮ ಚನ್ನಪ್ಪ, ಶರಣಮ್ಮ ನಿಂಗಮ್ಮ, ಸುನೀಲ ಹಾಗೂ ಇನ್ನಿತರರು ಮನೆಗೆ ನುಗ್ಗಿ ಹಲ್ಲೆ ನಡೆಸಿದ್ದಾರೆಂದು ಹಲ್ಲೆಗೊಳಗಾದ ಕವಿತಾ ಶಿವಲಿಂಗಪ್ಪ, ಗಂಗಮ್ಮ ಜೈಭೀಮ್, ಸಾಬಮ್ಮ ಶಂಕರ ದೂರಿದ್ದಾರೆ.
ಕ್ಷೇತ್ರದ ಶಾಸಕ ಪ್ರಿಯಾಂಕ್ ಖರ್ಗೆ ತಾಲೂಕಿನ ದಿಗ್ಗಾಂವ ಗ್ರಾಮಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಗ್ರಾಮದ ಮಹಿಳೆಯರು ನಮ್ಮ ಏರಿಯಾಕ್ಕೆ ಇಲ್ಲಿಯವರೆಗೆ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಮಾಡಿಲ್ಲ ಎಂದು ದೂರಿದ್ದರು. ಅಲ್ಲಿಂದ ಶಾಸಕರು ತೆರಳಿದ ನಂತರ ಈ ಘಟನೆ ನಡೆದಿದೆ.
ಹಲ್ಲೆ ಮಾಡಿದವರ ವಿರುದ್ಧ ಚಿತ್ತಾಪುರ ಪೊಲೀಸ್ ಠಾಣೆಗೆ ದೂರು ನೀಡಲು ಹೋದರೆ ಪಿಎಸ್‌ಐ ದೂರು ದಾಖಲಿಸಿಕೊಂಡಿರಲಿಲ್ಲ. ಹೀಗಾಗಿ ಕಲಬುರಗಿ ಜಿಮ್ಸ್ ಆಸ್ಪತ್ರೆಗೆ ದಾಖಲಾಗಿ ಕಾನೂನಿಗೊಳಪಟ್ಟ ಪ್ರಕರಣ (ಎಂಎಲ್‌ಸಿ) ಮಾಡಿಸಲಾಗಿತ್ತು. ಅಲ್ಲದೇ ಈ ಕುರಿತು ಶಾಸಕ ಪ್ರಿಯಾಂಕ್ ಖರ್ಗೆ ಅವರಿಗೆ ದೂರವಾಣಿ ಮೂಲಕ ಗಮನಕ್ಕೆ ತರಲಾಗಿದೆ ಎಂದು ಗಾಯಗೊಂಡ ಮಹಿಳೆಯೊಬ್ಬರ ಸಹೋದರ ಶರಣಪ್ಪ ದಿಗ್ಗಾಂವ ತಿಳಿಸಿದ್ದಾರೆ. ಸೋಮವಾರ ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ಪರ-ವಿರೋಧ ಪ್ರಕರಣಗಳು ದಾಖಲಾಗಿವೆ.
ಬಿಜೆಪಿ ಮುಖಂಡರಾದ ಅಶ್ವತ್ಥ್ ರಾಠೊಡ, ಮನೋಜ ರಾಠೊಡ, ಮಲ್ಲಿಕಾರ್ಜುನರೆಡ್ಡಿ ಇಜಾರ್, ಪ್ರಭು ಗಂಗಾಣಿ, ಶ್ರೀಕಾಂತ ಸುಲೇಗಾಂವ, ಗುಂಡು ಮತ್ತಿಮಡು, ಮಹೇಶ ಗೌಳಿ, ಆನಂದ ಇಂಗಳಗಿ, ಆಕಾಶ ಚವ್ಹಾಣ ಇತರರು ಜಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು.
ದಿಗ್ಗಾಂವ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಹೇಳಿದ ಮಹಿಳೆಯರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಜಿಪಂ ಮಾಜಿ ಸದಸ್ಯರ ಹಿಂಬಾಲಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ದೂರು ದಾಖಲಿಸಿಕೊಳ್ಳಲು ಹಿಂದೇಟು ಹಾಕಿದ ಪಿಎಸ್‌ಐ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು.
-ಮಣಿಕಂಠ ರಾಠೊಡ, ಸಮಾಜ ಸೇವಕ
ದಿಗ್ಗಾಂವ ಗ್ರಾಮದಲ್ಲಿ ಮಹಿಳೆಯರ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಹಲ್ಲೆಗೊಳಗಾದವರಿಗೆ ನ್ಯಾಯ ದೊರಕಿಸಿಕೊಡಬೇಕು. ಇಲ್ಲದಿದ್ದರೆ ಹೋರಾಟ ಮಾಡಲಾಗುವುದು.
-ವಿಜಯಕುಮಾರ ಗುಂಡಗುರ್ತಿ, ಬಿಜೆಪಿ ಮುಖಂಡ
ದಿಗ್ಗಾಂವ ಗ್ರಾಮದಲ್ಲಿ ನಡೆದ ಘಟನೆಗೂ ನನಗೂ ಯಾವುದೇ ರೀತಿಯ ಸಂಬಂಧವಿಲ್ಲ. ಉದ್ದೇಶಪೂರ್ವಕವಾಗಿ ನನ್ನ ಹೆಸರು ಬಳಕೆ ಮಾಡಲಾಗುತ್ತಿದೆ. ನಾನು ಶಾಸಕ ಪ್ರಿಯಾಂಕ್ ಅವರ ಜತೆಯಲ್ಲೇ ಇದ್ದೇ.
-ಶಿವರುದ್ರ ಭೀಣಿ, ಜಿಪಂ ಮಾಜಿ ಸದಸ್ಯ