Advertisement

ಸಮರ್ಪಕ ನೀರು ಪೂರೈಕೆಗೆ ಸೂಚನೆ

01:02 PM Mar 25, 2017 | Team Udayavani |

ಹುಬ್ಬಳ್ಳಿ: ಬೇಸಿಗೆ ಹಿನ್ನೆಲೆಯಲ್ಲಿ ಜಿಲ್ಲೆಯ ಜನರಿಗೆ ಪೂರಕ ನೀರು ಪೂರೈಸಲು ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಪಿ.ಮಣಿವಣ್ಣನ್‌ ಹೇಳಿದರು. ಅಮರಗೋಳದ ಕೃಷಿ ಉತ್ಪನ್ನ ಮಾರುಕಟ್ಟೆ ಮಂಡಳಿಯ ಮಾರಾಟ ಭವನದಲ್ಲಿ ಆಯೋಜಿಸಿದ್ದ ಜಿಲ್ಲಾ ಬರ ಪರಿಸ್ಥಿತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

Advertisement

ಬೇಸಿಗೆಯಲ್ಲಿ ಜನರಿಗೆ ಹೆಚ್ಚಿನ ಪ್ರಮಾಣದ ನೀರಿನ ಅವಶ್ಯಕತೆ ಇರುತ್ತದೆ. ಟ್ಯಾಂಕರ್‌ಗಳ ಮೂಲಕ ಸಮರ್ಪಕವಾಗಿ ನೀರು ಪೂರೈಸಬೇಕು. ಜನ-ಜಾನುವಾರುಗಳಿಗೆ ನೀರು ಒದಗಿಸಲು ಸರ್ಕಾರ ಅಗತ್ಯ ಅನುದಾನ ಒದಗಿಸಲಿದೆ ಎಂದರು. ಪೊಲೀಸ್‌ ಇಲಾಖೆಯ ನೆರವು ಪಡೆದು ಸಮರ್ಪಕವಾಗಿ ನೀರು ಪೂರೈಸಬೇಕು. ಕೆಲವೆಡೆ ಕಡಿಮೆ ಪ್ರಮಾಣದ ಹಾಗೂ ಕಳಪೆ ಗುಣಮಟ್ಟದ ನೀರು ಪೂರೈಸಲಾಗುತ್ತದೆ ಎಂಬ ಆರೋಪ ಜನರಿಂದ ಕೇಳಿ ಬಂದಿದೆ.

ಉತ್ತಮ ಗುಣಮಟ್ಟದ ನೀರು ಒದಗಿಸಬೇಕು ಎಂದರು. ಗ್ರಾಮೀಣ ಭಾಗಗಳಲ್ಲಿ ಪ್ರತಿಯೊಬ್ಬರಿಗೆ ಪ್ರತಿದಿನ 40 ಲೀಟರ್‌ ನೀರು ಒದಗಿಸುತ್ತಿದ್ದು, ಬಳಕೆಗೆ ಸಾಕಾಗುತ್ತಿಲ್ಲ. ಕನಿಷ್ಟ ಪ್ರತಿಯೊಬ್ಬರಿಗೆ 60 ಲೀಟರ್‌ ನೀರು ಪೂರೈಸಬೇಕು. ಕೊಳವೆ ಬಾವಿ ನೀರು ಬಳಸುತ್ತಿರುವ ಕಡೆ ನೀರಿನಲ್ಲಿನ ಫ್ಲೊರೈಡ್‌ ಅಂಶದ  ಪರೀಕ್ಷೆ ನಡೆಸಬೇಕು ಎಂದರು. 

ನೀರಿನ ಗುಣಮಟ್ಟ ಪರೀಕ್ಷೆ ಮಾಡಿಸಿ: ವಾರಕ್ಕೊಮ್ಮೆ ನೀರಿನ ಪರೀಕ್ಷೆ ಮಾಡಿಸಬೇಕು. ಜಲಮಂಡಳಿಯಿಂದ ನೀರಿನ ಪರೀಕ್ಷೆ ಮಾಡಿಸದೇ ವಿಶ್ವವಿದ್ಯಾಲಯ ಅಥವಾ ಯಾವುದಾದರೂ ಕಾಲೇಜಿನಿಂದ ನೀರಿನ ಪರೀಕ್ಷೆ ಮಾಡಿಸಬೇಕು. ವಾರಕ್ಕೊಮ್ಮೆ ನೀರಿನ ತಪಾಸಣೆ ಮಾಡಿಸಿದ ಬಗ್ಗೆ ನನಗೆ ಮಾಹಿತಿ ನೀಡಬೇಕು ಎಂದು ಸೂಚಿಸಿದರು. 

ಕ್ರಮಕ್ಕೆ ಸೂಚನೆ: ನಗರ ಹಾಗೂ ಪಟ್ಟಣಗಳಲ್ಲಿ ಅಕ್ರಮವಾಗಿ ನೀರು ಪಡೆಯತ್ತಿರುವವರ ಮೇಲೆ ಅಗತ್ಯ ಕ್ರಮ ಕೈಗೊಳ್ಳಬೇಕು. ವಾಲ್ವಮನ್‌ಗಳಿಗೆ ಎಲ್ಲವೂ ಗೊತ್ತಿದೆ. ಆದರೆ ಅವರು ಹಣ ಪಡೆದು ಸುಮ್ಮನಿರುತ್ತಾರೆ. ಅಕ್ರಮ ಸಂಪರ್ಕ ಕಡಿತಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ವಾಲ್ವಮನ್‌ಗಳ ಮೇಲೆ ಕ್ರಮ ಕೈಗೊಳ್ಳಬೇಕು. ಸಮರ್ಪಕವಾಗಿ ಕಾರ್ಯ ನಿರ್ವಹಿಸದ ವಾಲ್ವಮನ್‌ಗಳನ್ನು ಕೆಲಸದಿಂದ ಕಿತ್ತು ಹಾಕಬೇಕು ಎಂದರು. 

Advertisement

ಜಿಲ್ಲಾ ಆರೋಗ್ಯಾಧಿಕಾರಿ ತರಾಟೆ: ಬೇಸಿಗೆಯಲ್ಲಿ ಬರುವ ರೋಗಗಳ ಕುರಿತು ಜನರಿಗೆ ಜಾಗೃತಿ ಮೂಡಿಸಲು ಯಾವ ಕ್ರಮ ಕೈಗೊಂಡಿದ್ದೀರಿ ಎಂದು ಮಣಿವಣ್ಣನ್‌ ಜಿಲ್ಲಾ ಆರೋಗ್ಯಾಧಿಕಾರಿ ಡಾ| ದೊಡ್ಡಮನಿ ಅವರನ್ನು ಪ್ರಶ್ನಿಸಿದರು. ಬೇಸಿಗೆಯಲ್ಲಿ ಬರುವ ರೋಗಗಳ ಕುರಿತು ಕರಪತ್ರ ಮಾಡಿಸಿಲ್ಲ ಎಂದು ಅವರು ಹೇಳುತ್ತಿದ್ದಂತೆಯೇ ಆಕ್ರೋಶಗೊಂಡ ಮಣಿವಣ್ಣನ್‌, ಜನರ ಆರೋಗ್ಯದೊಂದಿಗೆ ಚೆಲ್ಲಾಟ ಆಡಬೇಡಿ. 

ಬೇಸಿಗೆಯಲ್ಲಿ ಆರೋಗ್ಯ ರಕ್ಷಣೆ ಕುರಿತು ಸೂಕ್ತ ಮಾಹಿತಿಯುಳ್ಳ ಕರಪತ್ರ ವಿತರಿಸಿ ಎಂದರು. ಜಿಲ್ಲೆಯಲ್ಲಿ ಮೇವಿನ ಕೊರತೆಯಾಗದಂತೆ ಕ್ರಮ ಕೈಗೊಳ್ಳಬೇಕು. ಜಿಲ್ಲೆಯಲ್ಲಿ ಮೇವು ಸಿಗದಿದ್ದರೆ ಬೇರೆ ಕಡೆಗಳಿಂದ ಮೇವು ತರಿಸಿಕೊಳ್ಳಬೇಕು. ಗುಣಮಟ್ಟದ ಮೇವು ನೀಡಬೇಕು ಎಂದರು.  

ವಾರದಲ್ಲಿ ನರೇಗಾ ವೇತನ: ನರೇಗಾ ಯೋಜನೆಯಡಿ ಕಾರ್ಯ ನಿರ್ವಹಿಸಿದವರಿಗೆ 1 ವಾರದಲ್ಲಿ ವೇತನ ಪಾವತಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಯಾವುದೇ ಕಾರಣಕ್ಕೂ ವೇತನ ಪಾವತಿಸುವಲ್ಲಿ ವಿಳಂಬವಾಗಬಾರದು. ಜಿಪಂ ಸಿಇಒ ಇದರ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದರು. ಜಿಲ್ಲಾಧಿಕಾರಿ ಎಸ್‌.ಬಿ. ಬೊಮ್ಮನಹಳ್ಳಿ, ಜಿಪಂ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಸ್ನೇಹಲ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಧರ್ಮೇಂದ್ರಕುಮಾರ ಮೀನಾ, ಮಹೇಶ ಕರ್ಜಗಿ, ಇಬ್ರಾಹಿಂ ಮೈಗೂರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next