Advertisement

Hirekerur; ಸೀತಿಕೊಂಡ ಗ್ರಾಮದಲ್ಲಿ 11ನೇ ಶತಮಾನದ ಶಿಲಾ ಶಾಸನ ಪತ್ತೆ

05:18 PM Sep 08, 2023 | Team Udayavani |

ಹಿರೇಕೆರೂರ: ತಾಲೂಕಿನ ಸೀತಿಕೊಂಡ ಗ್ರಾಮದಲ್ಲಿ 11ನೇ ಶತಮಾನದ ಕಲ್ಯಾಣ ಚಾಲುಕ್ಯರ ಎರಡನೇ ಜಗದೇಕಮಲ್ಲನ
ಕಾಲದ 23 ಸಾಲುಗಳುಳ್ಳ ಶಾಸನ ಪತ್ತೆಯಾಗಿದೆ. ಸೀತಿಕೊಂಡ ಗ್ರಾಮದಲ್ಲಿ ರಿ.ಸ.ನಂ 118ರ ಕಟ್ಟೆಪ್ಪ ದೇವರಹಳ್ಳಿಯವರ ಹೊಲದ ಬದುವಿನಲ್ಲಿ ಕಲ್ಯಾಣ ಚಾಲುಕ್ಯರ ಎರಡನೇ ಜಗದೇಕಮಲ್ಲನ ಕಾಲದ 23 ಸಾಲುಗಳುಳ್ಳ ಶಾಸನ ಪತ್ತೆಯಾಗಿದ್ದು, ಸಂಶೋಧಕರಾದ ಡಾ|ಚಾಮರಾಜ ಕಮ್ಮಾರ ಮತ್ತು ಡಾ|ಎಸ್‌.ಬಿ.ಚನ್ನಗೌಡ್ರ ಪತ್ತೆ ಮಾಡಿದ್ದಾರೆ.

Advertisement

ಈ ಶಾಸನದ ಮೇಲ್ಭಾಗದಲ್ಲಿ ಸೂರ್ಯ-ಚಂದ್ರ ಮತ್ತು ಹಸು ಕರುವಿಗೆ ಹಾಲುಣಿಸುವ ಶಿಲ್ಪವಿದೆ. ಮೇಲ್ಭಾಗದ ಶಿಲ್ಪದ ಜೊತೆಗಿರುವ ಶಾಸನ ಶ್ಲೋಕ ಅಸ್ಪಷ್ಟವಾಗಿದೆ. ನಂತರ ಕೆಳಭಾಗದಲ್ಲಿ ಶ್ರೀ ಸ್ವಸ್ತಿ ಸಮಸ್ತ ಭುವನಾಶ್ರಯ……….. ಎಂದು ಆರಂಭವಾಗುವ ಶಾಸನ 23 ಸಾಲುಗಳನ್ನು ಒಳಗೊಂಡಿದೆ.

ಕಲ್ಯಾಣ ಚಾಲುಕ್ಯರ ಚಾಳುಕ್ಯಾಭರಣ ಎರಡನೇ ಜಗದೇಕಮಲ್ಲದೇವನ ಆಳ್ವಿಕೆಯಲ್ಲಿ ಅವನ ಮಂತ್ರಿಯಾಗಿದ್ದ, ಸಂ ವಿಗ್ರಹಿಯಾಗಿದ್ದ ಬನವಾಸಿ ಪುರವೇಶ್ವರ, ಕುಂದಮರಸನ ಮಾಂಡಳಿಕ, ಕದನಮಾರ್ತಾಂಡನಾದ ಬಮ್ಮರಸದೇವ ನಾಗರಖಂಡ ಎಪ್ಪತ್ತನ್ನು ಆಳುತ್ತಿರುವಾಗ ಸಕ ವರುಷ 951 ಶುಕ್ಲ ಸಂವತ್ಸರದ ಸಂಕ್ರಾಂತಿಯಂದು ಅಂದರೆ ಸುಮಾರು ಕ್ರಿ.ಶ. 1029ರಂದು ಕೋಣವತ್ತಿಯ ಕೆರೆಗೆ ಭೂದಾನ ಕೊಟ್ಟ ಉಲ್ಲೇಖವಿದೆ.

ಬನವಾಸಿ 12000ರ ನಾಗರಖಂಡ ಪ್ರದೇಶದಲ್ಲಿ ಕೆರೆ, ಬಾವಿ ಕಟ್ಟಿಸುವುದು, ತುಂಬು-ಕಾಲುವೆಗಳನ್ನು ನಿರ್ಮಿಸುವುದು ಮುಂತಾದವು ಪುಣ್ಯದ ಕಾರ್ಯವೆಂದು ನಂಬಿ ಅರಸರು ಅ ಧಿಕಾರಿಗಳು ಅನೇಕ ದಾನದತ್ತಿಗಳನ್ನು ಬಿಟ್ಟಿರುವುದು ಶಾಸನೋಕ್ತವಾಗಿವೆ. ಇದು ಕೆರೆಗೆ ನೀಡಿದ ಭೂದಾನದ ಮಹತ್ವ ಪಡೆದಿದೆ ಎಂದು ರಟ್ಟಿಹಳ್ಳಿಯ ಪ್ರಿಯದರ್ಶಿನಿ ಪ್ರಥಮ ದರ್ಜೆ
ಕಾಲೇಜಿನ ಸಂಶೋಧಕ ಪ್ರಾಧ್ಯಾಪಕ ಡಾ|ಚಾಮರಾಜ ಕಮ್ಮಾರ ಮತ್ತು ಬಿ.ಆರ್‌.ತಂಬಾಕದ ಪ್ರಥಮ ದರ್ಜೆ ಕಾಲೇಜಿನ ಸಂಶೋಧಕ ಪ್ರಾಧ್ಯಾಪಕ ಡಾ|ಎಸ್‌.ಬಿ.ಚನ್ನಗೌಡ್ರ ತಿಳಿಸಿದ್ದಾರೆ.

ಇದೇ ಗ್ರಾಮದಲ್ಲಿ ಹೊಂಡದ ದಂಡೆಯಲ್ಲಿ ಇನ್ನೊಂದು ವರದಿಯಾದ ತ್ರುಟಿತ ವೀರಗಲ್ಲು ಅಪ್ರಕಟಿತ ಶಾಸನವಿದ್ದು ಪ್ರಭವ ನಾಮಸಂವತ್ಸರದ ಮಾರ್ಗಶಿರ ಬಹುಳ ಶುದ್ಧ ಗುರುವಾರ ಅಸುಂಡಿಯ ಬಮಗೌಡನ ಮಗ ಸಣಪಗೌಡನು ಹೋರಾಡಿ ಮರಣಿಸಿದ ವೀರನೊಬ್ಬನ ಉಲ್ಲೇಖವಿದೆ. ಹಾಳು ಬಿದ್ದ ರಾಮಲಿಂಗೇಶ್ವರ ದೇವರ ಗರ್ಭಗುಡಿಯಲ್ಲಿ ಲಿಂಗ, ತ್ರುಟಿತಗೊಂಡ ವಿಷ್ಣುವಿನ ಶಿಲ್ಪ, ಅಪರೂಪದ ಹುಲಿ ಬೇಟೆ ಶಿಲ್ಪ, ನಂದಿ ಶಿಲ್ಪಗಳು ಅಲ್ಲಲ್ಲಿ ಕಂಡುಬರುತ್ತವೆ.

Advertisement

ಪೌರಾಣಿಕ ಸ್ತ್ರೀ ನಾಮವಿರುವ “ಸೀತಿಕೊಂಡ’ ಹತ್ತಿರದ ಬೇಟಕೆರೂರ ಗುಡ್ಡದಲ್ಲಿ ಶ್ರೀ ರಾಮಚಂದ್ರನು ವಾಸವಾಗಿದ್ದನು. ಅಲ್ಲದೇ, ಈ ಪ್ರದೇಶದಲ್ಲಿ ಸೀತವ್ವ (ಬಾವಿಯ ಹತ್ತಿರ) ವಾಸವಾಗಿದ್ದರಿಂದ ಈ ಊರಿಗೆ ಸೀತಮ್ಮನ ಕೊಂಡ, ಸೀತಮ್ಮನ ಬಾವಿ, ಸೀತಿಕೊಂಡ ಎಂಬ ಹೆಸರಿದೆ ಎಂಬ ಪ್ರತೀತಿಗಳಿವೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ. ಶಾಸನ ಪತ್ತೆ ಮಾಡುವಲ್ಲಿ ಮಂಜು, ಮುತ್ತನಗೌಡ ಚನ್ನಗೌಡ್ರ ಹಾಗೂ ಗ್ರಾಮಸ್ಥರು ಸಹಕರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next