ಹಾಸನ: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಅಮೃತ ಗ್ರಾಮ ಪಂಚಾಯತಿ ಯೋಜನೆಗೆ ಜಿಲ್ಲೆಯ 31 ಗ್ರಾಮ ಪಂಚಾಯತಿಗಳು ಆಯ್ಕೆಯಾಗಿವೆ.
ಬೆಂಗಳೂರಿನಲ್ಲಿ ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲೆಯ ಶಾಸಕರ ಸಭೆಯಲ್ಲಿ ಚರ್ಚಿಸಿದ ನಂತರ ಅಮೃತ ಗ್ರಾಮ ಪಂಚಾಯತಿ ಯೋಜನೆಗೆ ಜಿಲ್ಲೆಯ 31 ಗ್ರಾಮ ಪಂಚಾಯತಿಗಳನ್ನು ಹಾಸನ ಜಿಲ್ಲಾ ಪಂಚಾಯತಿ ಆಯ್ಕೆ ಮಾಡಿ ಸರ್ಕಾರದ ಅನುಮೋದನೆಗಾಗಿ ಕಳುಹಿಸಿಕೊಟ್ಟಿದೆ.
ಅಮೃತ ಗ್ರಾಮ ಪಂಚಾಯತಿ ಯೋಜನೆಗೆ ಆಯ್ಕೆಯಾಗಿರುವ ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯ ಗ್ರಾಮಗಳಲ್ಲಿ 2022ರ ಮಾರ್ಚ್ ಅಂತ್ಯದೊಳಗೆ ಸಮಗ್ರ ಮೂಲ ಸೌಕರ್ಯಗಳನ್ನು ಒದಗಿಸಲು ಪ್ರತಿ ಗ್ರಾಮ ಪಂಚಾಯತಿಗೆ 3 ಕೋಟಿರೂ. ವೆಚ್ಚ ಮಾಡಲಾಗುತ್ತದೆ. ನಿಗದಿತ ಅವಧಿ ಯೊಳಗೆ ಯೋಜನೆ ಅನುಷ್ಠಾನಗೊಳಿಸುವ ಗ್ರಾಮ ಪಂಚಾಯತಿಗೆ 25 ಲಕ್ಷ ರೂ. ಪ್ರೋತ್ಸಾಹ ಧನವನ್ನು ಸರ್ಕಾರ ನೀಡಲಿದೆ.
ಗ್ರಾಮಗಳಲ್ಲಿ ಬೀದಿ ದೀಪ ಅಳವಡಿಕೆ, ಪ್ರತಿ ಮನೆಗೂ ನಲ್ಲಿ ಅಳವಡಿಸಿ ಕುಡಿಯುವ ನೀರು ಪೂರೈಕೆ ಶೌಚಾಲಯ ವ್ಯವಸ್ಥೆ, ಗ್ರಾಮಗಳ ಕಲ್ಯಾಣಿ ಮತ್ತು ಕೆರೆಗಳ ಪುನಶ್ಚೇನ ಕಾರ್ಯಕ್ರಮ, ಉದ್ಯಾನವನಗಳ ನಿರ್ಮಾಣ, ಶಾಲೆಗಳಿಗೆ ಮೂಲ ಸೌಕರ್ಯ, ಗ್ರಾಮ ಪಂಚಾಯತಿ ಕಚೇರಿ ಕಟ್ಟಡಕ್ಕೆ ಸೌರ ವಿದ್ಯುತ್ ವ್ಯವಸ್ಥೆ ಸೇರಿದಂತೆ ವಿವಿಧ ಸೌಲಭ್ಯ ಗಳನ್ನು ಈ ಯೋಜನೆಯಡಿ ಒದಗಿಸಲಾಗುತ್ತದೆ.
ರಾಜ್ಯದ 750 ಗ್ರಾಮ ಪಂಚಾಯತಿಗಳನ್ನು ಅಮೃತ ಗ್ರಾಮ ಪಂಚಾಯತಿ ಯೋಜನೆಗೆ ಆಯ್ಕೆಮಾಡಲಾಗಿದ್ದು, ಹಾಸನ ಜಿಲ್ಲೆಯ 31 ಗ್ರಾಮಪಂಚಾಯತಿಗಳೂ ಆ ಪಟ್ಟಿಯಲ್ಲಿ ಸೇರಿ ಸಮಗ್ರಮೂಲ ಸೌಕರ್ಯ ಅಭಿವೃದ್ಧಿಗೆ ಅನುದಾನ ಪಡೆಯಲಿವೆ.