“2020 ನನ್ನ ಪಾಲಿಗೆ ಲಕ್ಕಿ ಈಯರ್. ಜನವರಿಯಿಂದ ಇಲ್ಲಿಯವರೆಗೆ ಮೂರು ತಿಂಗಳಲ್ಲಿ ಮೂರು ಸಿನಿಮಾ ರಿಲೀಸ್ ಆಗ್ತಿದೆ. ಇನ್ನೂ ಎರಡು-ಮೂರು ಸಿನಿಮಾಗಳು ರೆಡಿಯಿದ್ದು, ಅವುಗಳು ಕೂಡ ಇನ್ನು ಮೂರು-ನಾಲ್ಕು ತಿಂಗಳಲ್ಲಿ ರಿಲೀಸ್ ಆಗಬಹುದು. ನಿಜಕ್ಕೂ ಹೀಗೆ ಒಂದರ ಹಿಂದೊಂದು ಸಿನಿಮಾ ರಿಲೀಸ್ ಆಗುತ್ತೆ, ಆಡಿಯನ್ಸ್, ಇಂಡಸ್ಟ್ರಿ ಎಲ್ಲರೂ ನನ್ನ ಇಷ್ಟರ ಮಟ್ಟಿಗೆ ಗುರುತಿಸುತ್ತಾರೆ ಅಂಥ ಅಂದುಕೊಂಡೇ ಇರಲಿಲ್ಲ.
ಹೋಟೆಲ್, ಮಾಲ್ ಎಲ್ಲಿಗೇ ಹೋದ್ರು ಜನ ನನ್ನನ್ನು ಗುರುತಿಸಿ ಮಾತನಾಡಿಸುತ್ತಿದ್ದಾರೆ. ಈ ವಿಷಯದಲ್ಲಿ ತುಂಬ ಎಕ್ಸೈಟ್ ಆಗಿದ್ದೇನೆ…’ ಹೀಗೆ ಹೇಳುತ್ತಾ ಮಾತಿಗಿಳಿದವರು ಅಮೃತಾ ಅಯ್ಯಂಗಾರ್. ಅಂದಹಾಗೆ, ಅಮೃತಾ ಅವರ ಇಂಥದ್ದೊಂದು ಖುಷಿಗೆ ಕಾರಣವಾಗಿರುವುದು, ಅವರು ಅಭಿನಯಿಸಿರುವ ಚಿತ್ರಗಳು ಒಂದರ ಹಿಂದೊಂದು ಬಿಡುಗಡೆಯಾಗಿ ಹಿಟ್ ಲೀಸ್ಟ್‌ಗೆ ಸೇರುತ್ತಿರುವುದು. ಈ ವರ್ಷದ ಮೊದಲು ಅಮೃತಾ ಅಯ್ಯಂಗಾರ್ ಅಭಿನಯಿಸಿದ್ದ “ಲವ್ ಮಾಕ್ಟೇಲ್’ ಚಿತ್ರ ತೆರೆಕಂಡಿತ್ತು.
ಅದಾದ ಬಳಿಕ ಧನಂಜಯ್ ಅಭಿನಯದ “ಪಾಪ್‌ಕಾರ್ನ್ ಮಂಕಿ ಟೈಗರ್’ ಚಿತ್ರ ಬಿಡುಗಡೆಯಾಗಿತ್ತು. ಇಲ್ಲಿಯವರೆಗೆ ಬಿಡುಗಡೆಯಾದ “ಲವ್ ಮಾಕ್ಟೇಲ್’ ಮತ್ತು “ಪಾಪ್‌ಕಾರ್ನ್ ಮಂಕಿ ಟೈಗರ್’ ಎರಡೂ ಚಿತ್ರಗಳೂ ಬಾಕ್ಸಾಫೀಸ್‌ನಲ್ಲಿ ಒಂದಷ್ಟು ಸದ್ದು ಮಾಡಿ, ಹಿಟ್ ಲೀಸ್ಟ್ ಸೇರಿದ್ದು, ಈ ವಾರ ರಿಲೀಸ್ ಆಗುತ್ತಿರುವ “ಶಿವಾರ್ಜುನ’ ಕೂಡ ಅದೇ ಲೀಸ್ಟ್‌ಗೆ ಸೇರಲಿದೆ ಎಂಬ ವಿಶ್ವಾಸ ಅಮೃತಾ ಅವರದ್ದು.
ಇನ್ನು ಇಂದು ತೆರೆಕಾಣುತ್ತಿರುವ “ಶಿವಾರ್ಜುನ’ ಚಿತ್ರದಲ್ಲಿ ಅಮೃತಾ ಅಯ್ಯಂಗಾರ್ ಅವರದ್ದು ಒಂಥರಾ ಬಜಾರಿಯ ಪಾತ್ರವಂತೆ. ಅವರೇ ಹೇಳುವಂತೆ, “ಇದೊಂಥರ ಮಂಜುಳಾ ಅವರು ಮಾಡುತ್ತಿದ್ದ, ಗಂಡುಬೀರಿ -ಬಜಾರಿ ಥರದ ಹಳ್ಳಿ ಹುಡುಗಿ ಪಾತ್ರ. ಲಂಗ-ದಾವಣಿ ಹಾಕಿಕೊಂಡು, ಯಾರಿಗೂ ಕೇರ್ ಮಾಡದೆ ಆರಾಮಾಗಿ ಓಡಾಡಿಕೊಂಡಿರುತ್ತೇನೆ. ಊರೆಲ್ಲ ಸುತ್ತಾಡುತ್ತೇನೆ, ಬೋರಾದ್ರೆ ರಸ್ತೆಯಲ್ಲೇ ಆರಾಮಾಗಿ ಕೂತು ಬೀಡುತ್ತೇನೆ.
ಬೀಡಿ ಸೇದುತ್ತೇನೆ, ಜಗಳ ಮಾಡುತ್ತೇನೆ. ಈ ಥರ ಇರುವಂಥ ಪಾತ್ರ. ಹೊಸಥರದ ಪಾತ್ರಗಳನ್ನು ಮಾಡಬೇಕು ಅಂಥ ಬಯಸುತ್ತಿದ್ದಾಗ ಸಿಕ್ಕ ಪಾತ್ರವಿದು. ಆಡಿಯನ್ಸ್‌ಗೆ ನನ್ನ ಪಾತ್ರ ಒಂದಷ್ಟು ಮಜಾ ಕೊಡುತ್ತದೆ’ ಎನ್ನುತ್ತಾರೆ ಅಮೃತಾ ಅಯ್ಯಂಗಾರ್. “ನನಗೆ ಒಂದೇ ಥರದ ಪಾತ್ರಗಳನ್ನು ಮಾಡೋದು ಅಂದ್ರೆ ಬೋರ್. ಒಬ್ಬ ನಟಿಯಾಗಿ ಬೇರೆ ಬೇರೆ ಥರದ ಪಾತ್ರಗಳನ್ನು ಮಾಡಬೇಕು ಅನ್ನೋ ಆಸೆಯಿದೆ. ಇವತ್ತು ಎಷ್ಟೋ ಜನಕ್ಕೆ ನನ್ನ ಹೆಸರೇ ಗೊತ್ತಿಲ್ಲ.
ಆದ್ರೆ ಜನ ನನ್ನನ್ನು ಎಲ್ಲೇ ನೋಡಿದ್ರೂ, ನಾನು ಮಾಡಿದ ಪಾತ್ರದ ಹೆಸರು ಹೇಳಿ ನನ್ನನ್ನು ಗುರುತಿಸಿ, ಕರೆಯುತ್ತಾರೆ. ಪಾತ್ರವಾಗಿ ಗುರುತಿಸುವುದನ್ನು ಕಂಡಾಗ ಆ ಪಾತ್ರಕ್ಕೆ ನಾನು ನ್ಯಾಯ ಕೊಟ್ಟಿದ್ದೇನೆ ಅಂಥ ಖುಷಿಯಾಗುತ್ತಿದೆ’ ಎನ್ನುವುದು ಅಮೃತಾ ಮಾತು. “ಈಗಾಗಲೇ ರಿಲೀಸ್ ಆಗಿರುವ “ಲವ್ ಮಾಕ್ಟೇಲ್’ ನನಗೊಂದು ಮೋಟಿವೇಶನ್ ಕೊಟ್ಟಂಥ ಸಿನಿಮಾ. “ಪಾಪ್ ಕಾರ್ನ್ ಮಂಕಿ ಟೈಗರ್’ ಇಂಡಸ್ಟ್ರಿಯಲ್ಲಿ ಗುರುತಿಸುವಂತೆ ಮಾಡಿದ ಸಿನಿಮಾ.
ಈಗ ರಿಲೀಸ್ ಆಗುತ್ತಿರುವ “ಶಿವಾರ್ಜುನ’ ವೃತ್ತಿಪರತೆ ತೋರಿಸಿಕೊಟ್ಟಂಥ ಸಿನಿಮಾ’ ಅನ್ನೋದು ಅಮೃತಾ ಮಾತು. ಒಟ್ಟಾರೆ ಸಾಲು ಸಾಲು ಚಿತ್ರಗಳಲ್ಲಿ ಪ್ರೇಕ್ಷಕರ ಮುಂದೆ ಬರುತ್ತಿರುವ ಅಮೃತಾ ಅಯ್ಯಂಗಾರ್, ಮುಂದಿನ ದಿನಗಳಲ್ಲಿ ಧನಂಜಯ್ ಅವರೊಂದಿಗೆ “ಬಡವ ರಾಸ್ಕಲ್’ ಮತ್ತು ಶೀತಲ್ ಶೆಟ್ಟಿ ನಿರ್ದೇಶನದ ಇನ್ನೂ ಹೆಸರಿಡ ಚಿತ್ರವೊಂದರಲ್ಲಿ ಮತ್ತೂಂದು ವಿಭಿನ್ನ ಪಾತ್ರದ ಮೂಲಕ ದರ್ಶನ ಕೊಡುವ ತಯಾರಿಯಲ್ಲಿದ್ದಾರೆ.