ಚಂದೀಗಢ: ಅಮೃತಸರದ ರಾಜಸಾಂಸಿಯಲ್ಲಿರುವ ನಿರಾಂಕಾರಿ ಭವನದಲ್ಲಿ ಭಾನುವಾರ ಧಾರ್ಮಿಕ ಸಭೆ ನಡೆಯುತ್ತಿದ್ದ ವೇಳೆ ಗ್ರೆನೇಡ್ ದಾಳಿ ನಡೆಸಲಾಗಿದ್ದು, ಮೂವರು ದಾರುಣವಾಗಿ ಸಾವನ್ನಪ್ಪಿ,ಹತ್ತಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
250 ಮಂದಿ ಧಾರ್ಮಿಕ ಸಭೆ ನಡೆಸಲೆಂದು ಸೇರಿದ್ದ ವೇಳೆ ಈ ದಾಳಿ ನಡೆದಿದೆ. ಇಬ್ಬರು ಇಲ್ಲ ಮೂವರು ದುಷ್ಕರ್ಮಿಗಳು ಬೈಕ್‌ನಲ್ಲಿ ಆಗಮಿಸಿ ಗ್ರೆನೇಡ್ ಎಸೆದು ಪರಾರಿಯಾಗಿದ್ದಾರೆ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿರುವುದಾಗಿ ಐಜಿ ಸುರೀಂದರ್ ಪಾಲ್ ಸಿಂಗ್ ಪಾರ್‌ಮರ್ ತಿಳಿಸಿದ್ದಾರೆ.
ಘಟನೆ ನಡೆದ ತಕ್ಷಣ ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಅವರು ತುರ್ತು ಸಭೆಯನ್ನು ಕರೆದು ಅಧಿಕಾರಿಗಳೊಂದಿಗೆ ಚರ್ಚಿಸಿದ್ದಾರೆ.ರಾಜ್ಯಾಧ್ಯಂತ ಹೈ ಅಲರ್ಟ್ ಘೋಷಿಸಲಾಗಿದೆ.
ಸ್ಥಳದಲ್ಲಿ ಪೊಲೀಸರ ತಂಡಗಳು ಬೀಡು ಬಿಟ್ಟಿದ್ದು ವ್ಯಾಪಕ ಪರಿಶೀಲನೆ ನಡೆಸುತ್ತಿದ್ದಾರೆ.ದಾಳಿ ನಡೆದ ಸ್ಥಳದಲ್ಲಿದ್ದ ಸಿಸಿಟಿವಿಗಳನ್ನು ಪರಿಶೀಲಿಸಲಾಗುತ್ತಿದೆ.
ಇಂತು ಶಾಂತಿ ಕದಡಲು ನಡೆಸಿರುವ ಯತ್ನ ಎಂದು ಪಂಜಾಬ್ ಕಾಂಗ್ರೆಸ್ ನಾಯಕ ಸುನೀಲ್ ಜಾಖರ್ ಹೇಳಿಕೆ ನೀಡಿದ್ದಾರೆ.
ಈಗಾಗಲೇ ಗುಪ್ತಚರ ಇಲಾಖೆ ಪಂಜಾಬ್‌ನಲ್ಲಿ ಉಗ್ರ ದಾಳಿ ನಡೆಯುವ ಸಾಧ್ಯತೆಗಳಿವೆ ಎಂದು ಎಚ್ಚರಿಕೆ ನೀಡಿತ್ತು.