Advertisement

ಅಮೃತಮಹಲ್‌ ತಳಿ ರಾಸುಗಳ ಹರಾಜು

10:23 AM Jan 24, 2019 | |

ಕಡೂರು: ಅಮೃತಮಹಲ್‌ ತಳಿ ರಾಸುಗಳ ವಾರ್ಷಿಕ ಹರಾಜು ಪ್ರಕ್ರಿಯೆ ಪಟ್ಟಣ ಹೊರವಲಯದ ದೇವರಾಜ ಅರಸು ತಳಿ ಸಂವರ್ಧನಾ ಕೇಂದ್ರದಲ್ಲಿ ನಡೆದು 1.81 ಲಕ್ಷ ರೂ.ಗೆ ಒಂದು ಜೊತೆ ರಾಸು ಹರಾಜು ನಡೆದು ದಾಖಲೆ ನಿರ್ಮಿಸಿದೆ.

Advertisement

ಪ್ರತಿ ವರ್ಷ ಜನೆವರಿಯಲ್ಲಿ ಕಡೂರು- ಬೀರೂರು ಮಧ್ಯೆ ಇರುವ ದೇವರಾಜ ಅರಸು ಅಮೃತಮಹಲ್‌ ತಳಿ ಸಂವರ್ಧನಾ ಕೇಂದ್ರದಲ್ಲಿ ರಾಸುಗಳ ಹರಾಜು ಪ್ರಕ್ರಿಯೆ ನಡೆಯುತ್ತದೆ.

ಬುಧವಾರ ನಡೆದ ಹರಾಜಿನಲ್ಲಿ ರಾಜ್ಯದ ನಾನಾ ಭಾಗಗಳಿಂದ ಕಳೆದ ಬಾರಿಗಿಂತ ಹೆಚ್ಚು ಜನರು ಪಾಲ್ಗೊಂಡು ದೇಸಿ ತಳಿಗಳ ಸಂರಕ್ಷಣೆ ಮತ್ತು ಅಮೃತಮಹಲ್‌ ತಳಿ ಸಾಕಲು ಪ್ರೋತ್ಸಾಹ ನೀಡಲು ಮುಂದಾಗಿದ್ದು ವಿಶೇಷ ಎನಿಸುವಂತಿತ್ತು.

ತಳಿಸಂವರ್ಧನಾ ಕೇಂದ್ರದಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಅಜ್ಜಂಪುರ, ಲಿಂಗದಹಳ್ಳಿ, ಹಬ್ಬನಘಟ್ಟ, ರಾಮಗಿರಿ, ಚಿಕ್ಕ ಎಮ್ಮಿಗನೂರು ಮತ್ತು ಬಾಸೂರು ಕೇಂದ್ರಗಳಿಂದ ತರಲಾಗಿದ್ದ 180 ಗಂಡು ಕರುಗಳು, 10ಬೀಜದ ಹೋರಿಗಳ ಹರಾಜು ನಡೆಯಿತು. ಕರುಗಳಿಗೆ ಇಡಲಾಗಿದ್ದ ಕುಕ್ಕೋಡಿ, ಶಾರದೆ, ಬೆಳ್ಳಿಗೆಜ್ಜೆ, ಕಾವೇರಿ,ರಂಗನಾಥ, ಓಬಳಾದೇವಿ, ದೇವಗಿರಿ, ಕೆಂಪ, ಗಂಗೆ, ಮುದ್ರೆ, ನಾಮಧಾರಿ, ಕಾಳಿಂಗ, ಸಿದ್ದರಾಮ, ಬೆಳದಿಂಗಳು, ನಾರಾಯಣಿ ಮೊದಲಾದ ತಳಿಗಳ ಹೆಸರೂ ಆಕರ್ಷಕವಾಗಿತ್ತು.

ವಿವಿಧ ಜಿಲ್ಲೆಗಳ ಗ್ರಾಮೀಣ ಪ್ರದೇಶಗಳಿಂದ ಆಗಮಿಸಿದ್ದ ರೈತಾಪಿ ಜನರ ಬಿಡ್‌ ಪ್ರೋತ್ಸಾಹದ ನಡುವೆ ಬಿಡ್‌ ಮಾಡುವವರ ಗ್ರಾಮೀಣ ಶೈಲಿಯ ಮಾತುಗಾರಿಕೆ ಪ್ರಕ್ರಿಯೆಗೆ ಮತ್ತಷ್ಟು ರಂಗು ತುಂಬಿತ್ತು.

Advertisement

ಹೊರಭಾಗಗಳಿಂದ ಆಗಮಿಸಿದ್ದ ಬಿಡ್‌ದಾರರ ಹೊಟ್ಟೆ ತಣಿಸಲು ಕ್ಯಾಂಟೀನ್‌, ಹಣ್ಣಿನ ವ್ಯಾಪಾರಿಗಳು, ಕಡ್ಲೆಗಿಡ, ಐಸ್‌ಕ್ರೀಂ ಮಾರುವವರು ಕೇಂದ್ರದ ಆವರಣದಲ್ಲಿ ಬೀಡು ಬಿಟ್ಟಿದ್ದರು.ಅತಿಹೆಚ್ಚಿನ ಮೊತ್ತವಾದ 1.81 ಲಕ್ಷ ರೂ.ಗೆ ಹರಾಜು ಮಾಡಲಾದ ಜೋಡಿಯನ್ನು ಚಳ್ಳಕೆರೆ ತಾಲೂಕು ಗಡ್ಡದೇವರಹಟ್ಟಿಯ ನನ್ನಿವಾಳದ ಗೌಡರ ಓಬಯ್ಯ ಖರೀದಿಸಿದರು. ಇದು ಪ್ರಕ್ರಿಯೆಯ ಅತಿ ಹೆಚ್ಚಿನ ಬಿಡ್‌ ಮೊತ್ತವಾಗಿದೆ.

ಎರಡನೇ ಜೋಡಿ ಕೆ.16-8 ಮೆಣಸಿ ಕೆ.16-3 ಕರಿಯಕ್ಕ ಕರುಗಳನ್ನು ಶಿಕಾರಿಪುರ ತಾಲೂಕು ಮಳವಳ್ಳಿಯ ಪರಮೇಶ್ವರಪ್ಪ ಬಿನ್‌ ಶಿವನಗೌಡ 1.55 ಲಕ್ಷ ರೂ.ಗೆ ಖರೀದಿಸಿದರು. ಸಾಯಂಕಾಲ 6 ಗಂಟೆಯ ವೇಳೆಗೆ ಒಟ್ಟು 80 ಜೊತೆ ರಾಸುಗಳ ಹರಾಜಿನಿಂದ ಸರಿಸುಮಾರು 87 ಲಕ್ಷ ರೂ. ಸಂಗ್ರಹವಾಗಿತ್ತು.

ಕೊಪ್ಪಳ, ಚಿತ್ರದುರ್ಗ, ಮಂಡ್ಯ, ಮೈಸೂರು, ಶಿಕಾರಿಪುರ, ಹಾವೇರಿ, ಸೊರಬ, ಹೊಳಲ್ಕೆರೆ, ಚನ್ನರಾಯಪಟ್ಟಣ, ಅರಸೀಕೆರೆ, ದುದ್ದ, ಗಂಡಸಿ, ಹಾಸನ, ಹಿರೇಕೆರೂರು ಮುಂತಾದ ಕಡೆಗಳಿಂದ ಆಗಮಿಸಿದ್ದ 300ಕ್ಕೂ ಹೆಚ್ಚು ಜನರು ಬಿಡ್‌ನ‌ಲ್ಲಿ ಪಾಲ್ಗೊಂಡರು.

ಪಶುಸಂಗೋಪನಾ ಇಲಾಖೆ ರಾಜ್ಯ ವಲಯ ಜಂಟಿ ನಿರ್ದೇಶಕ ಡಾ|ಪಿ. ಶ್ರೀನಿವಾಸ್‌ ಬೀರೂರು ಕೇಂದ್ರದ ಜಂಟಿ ನಿರ್ದೇಶಕ ಡಾ| ಜಯಣ್ಣ, ಅಜ್ಜಂಪುರ ಕೇಂದ್ರದ ಉಪನಿರ್ದೇಶಕ ಡಾ| ರಾಜಶೇಖರ್‌, ಜಂಟಿ ನಿರ್ದೇಶಕರ ಕಚೇರಿಯ ಡಾ| ಬಸವರಾಜ್‌, ಬೀರೂರು ಕೇಂದ್ರದ ಅಧಿಕಾರಿ ಭಾನುಪ್ರಕಾಶ್‌, ಬೀರೂರು ಪಶುವೈದ್ಯ ಶಾಲೆಯ ಡಾ|ಉಮೇಶ್‌, ಕುಡ್ಲೂರಿನ ಡಾ| ನವೀನ್‌, ಖಲಂದರ್‌ ಮತ್ತು ಉಪಕೇಂದ್ರಗಳ ಅಧಿಕಾರಿ, ಸಿಬ್ಬಂದಿ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಂಡರು.

Advertisement

Udayavani is now on Telegram. Click here to join our channel and stay updated with the latest news.

Next