ಮಹಾನಗರ: ಪ್ರಾರ್ಥನೆ ಎಂದರೆ ಹೃದಯಸೂರ್ಯನನ್ನು ಉದ್ದೀಪಿಸುವುದಾಗಿದೆ. ಆ ಮೂಲಕ ಅಂತರಂಗವನ್ನು ವಿಕಸಿಸಿ ವ್ಯಕ್ತಿಯ ಸರ್ವತೋಮುಖ ಅಭಿವೃದ್ದಿ ಸಾಧಿಸಲು ಸಾಧ್ಯ ಎಂದು ಕೇರಳದ ಅಮೃತಪುರಿಯಲ್ಲಿರುವ ಮಾತಾ ಅಮೃತಾನಂದಮಯಿ ಮಠದ ಪ್ರಧಾನ ಕಾರ್ಯದರ್ಶಿ ಸ್ವಾಮೀಜಿ ಪೂರ್ಣಾಮೃತಾನಂದಪುರಿ ಸ್ವಾಮೀಜಿ
ಹೇಳಿದರು. ನಗರದ ಬೋಳೂರಿನಲ್ಲಿರುವ ಅಮೃತಾನಂದಮಯಿ ಮಠದಲ್ಲಿ ಇತ್ತೀಚೆಗೆ ಜರಗಿದ ‘ಅಮೃತವೈಭವ’ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.
ಇವತ್ತು ನಾವು ಬುದ್ಧಿವಂತರಾಗಿದ್ದೇವೆ ನಿಜ. ಆದರೆ ಇದರ ಜತೆಗೆ ಸಾಕಷ್ಟು ಅಹಂ ತುಂಬಿಸಿಕೊಂಡಿದ್ದೇವೆ. ಇದನ್ನು
ತೊಲಗಿಸಲು ಪ್ರಾರ್ಥನೆ ಸಹಕಾರಿ. ಅಹಂಕಾರ ತೊಲಗಿಸಿಕೊಳ್ಳುವುದರ ಜತೆಗೆ ಮುಗ್ಧತೆ ಮತ್ತು ಅಂತರಂಗ ಪಾವಿತ್ರ್ಯ ಸಾಧಿಸಿದರೆ ಯಾವುದೇ ಸಮಸ್ಯೆಗಳನ್ನು ಎದುರಿಸಿ ಸಾಧನೆ ಮಾಡಲು ಸಾಧ್ಯ. ಅದಕ್ಕೆ ಪ್ರಾರ್ಥನೆ ಮಾಡುವುದು ಅಗತ್ಯ ಎಂದರು. ಮಠವು ಹೊಸದಾಗಿ ಆರಂಭಿಸಿರುವ ವೇದಮಂತ್ರ ಪಠಣ ತರಗತಿಗಳನ್ನು ಹಾಗೂ ಬಾಲಸಂಸ್ಕಾರ ಕೇಂದ್ರವನ್ನು ಸ್ವಾಮೀಜಿಯವರು ಇದೇ ಸಂದರ್ಭದಲ್ಲಿ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿದ್ದ ಜೆ.ಎಫ್.ಬಿ. ಪೆಟ್ರೋ ಕೆಮಿಕಲ್ಸ್ ನಿರ್ದೇಶಕ ಎ.ಜಿ. ಪೈ ಮಾತನಾಡಿ, ನಾವು ಎಷ್ಟೇ ಉನ್ನತ ಸ್ಥಾನಕ್ಕೆ ಏರಿದರೂ ಭಗವಂತನ ಮೇಲೆ ವಿಶ್ವಾಸ ಮತ್ತು ಸಮಾಜಮುಖಿ ಭಾವನೆ ಇಲ್ಲದಿದ್ದರೆ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯವಿಲ್ಲ ಎಂದರು.
ಮುಖ್ಯ ಉಪನ್ಯಾಸಕರಾಗಿ ಅಮೃತ ವಿದ್ಯಾಲಯದ ಆಡಳಿತಾಧಿಕಾರಿ ವಿಜಯ ಮೆನನ್ ಆಗಮಿಸಿದ್ದರು. ಮಾತಾ ಅಮೃತಾನಂದಮಯಿ ಮಠದ ಮಂಗಳೂರು ಶಾಖೆಯ ಮುಖ್ಯಸ್ಥೆ ಬ್ರಹ್ಮಚಾರಿಣಿ ಮಂಗಳಾಮೃತ ಚೈತನ್ಯ, ಸೇವಾ ಸಮಿತಿಯ ಪೂರ್ವಾಧ್ಯಕ್ಷರಾದ ಡಾ| ಜೀವರಾಜ ಸೊರಕೆ, ವಾಮನ ಕಾಮತ್, ಡಾ| ಸನತ್ ಹೆಗ್ಡೆ, ಸಂಸ್ಕೃತಿ ವಿಭಾಗದ ಮುಖ್ಯಸ್ಥ ಡಾ| ವಸಂತ ಕುಮಾರ ಪೆರ್ಲ, ಬಾಲಕೇಂದ್ರದ ನಿರ್ವಾಹಕಿ ವಿಮಲಾ ರಾವ್, ಉಪಾಧ್ಯಕ್ಷರಾದ ಮುರಳೀಧರ ಶೆಟ್ಟಿ, ಡಾ| ದೇವದಾಸ್ ಪುತ್ರನ್, ಕಾರ್ಯದರ್ಶಿ ಸುರೇಶ್ ಅಮೀನ್, ಪ್ರಾಂಶುಪಾಲ ಆರ್.ಸಿ. ಭಟ್ ಉಪಸ್ಥಿತರಿದ್ದರು. ಪ್ರಸಾದ್ ರಾಜ್ ಕಾಂಚನ್ ಸ್ವಾಗತಿಸಿದರು. ಗೌರವಾಧ್ಯಕ್ಷೆ ಶ್ರುತಿ ಸನತ್ ಹೆಗ್ಡೆ ವಂದಿಸಿದರು. ಸದಸ್ಯೆ ಡಾ| ನಂದಿತಾ ಶೆಣೈ ನಿರೂಪಿಸಿದರು.