Advertisement

ಅಮೃತ ಗ್ರಾಮೀಣ ವಸತಿ ಯೋಜನೆ: ಜಿಲ್ಲೆಯ 19 ಗ್ರಾ.ಪಂ.ಗಳು ಆಯ್ಕೆ

05:54 PM Dec 29, 2021 | Team Udayavani |

ಉಡುಪಿ: ರಾಜ್ಯ ಸರಕಾರದ ಅಮೃತ ಗ್ರಾಮೀಣ ವಸತಿ ಯೋಜನೆಗೆ ಉಡುಪಿ ಜಿಲ್ಲೆಯ 19 ಗ್ರಾ.ಪಂ.ಗಳು ಆಯ್ಕೆಯಾಗಿವೆ.

Advertisement

ಈ ಯೋಜನೆಯಿಂದ ಈ ಎಲ್ಲ ಗ್ರಾಮದ ಜನರಿಗೆ ವಸತಿ ಸೌಲಭ್ಯ, ನಿವೇಶನ ರಹಿತರಿಗೆ ನಿವೇಶನ ನೀಡುವ ಉದ್ದೇಶವನ್ನು ಹೊಂದಲಾಗಿದೆ.

ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ರಾಜ್ಯ ಸರಕಾರ 14 ಹೊಸ ಘೋಷಣೆಗಳನ್ನು ಮಾಡಿದ್ದು, ಆ ಪೈಕಿ ವಸತಿ ಯೋಜನೆಯೂ ಒಂದಾಗಿದೆ. ಸರಕಾರಗಳು ಈ ಹಿಂದೆ ನಿವೇಶನ ರಹಿತರಿಗೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿತ್ತು. ಆದರೆ ಗ್ರಾ.ಪಂ. ವ್ಯಾಪ್ತಿಯ ಅರ್ಹರೆಲ್ಲರಿಗೂ ವಸತಿ ನಿವೇಶನ ಒದಗಿಸುವ ಯೋಜನೆ ಇದೇ ಮೊದಲು. ಅದರಂತೆ ಉಡುಪಿ ಜಿಲ್ಲೆಯ 19 ಗ್ರಾ.ಪಂ.ಗಳಲ್ಲಿ 2 ಸಾವಿರಕ್ಕೂ ಅಧಿಕ ಮಂದಿಗೆ ನಿವೇಶನ ದೊರೆಯುವ ನಿರೀಕ್ಷೆ ಹೊಂದಲಾಗಿದೆ.

ಖಾಸಗಿ ಜಮೀನು ಖರೀದಿಗೂ ಅವಕಾಶ
ವಸತಿ ಇಲಾಖೆ ಸೂಚನೆ ಪ್ರಕಾರ ಆಯ್ಕೆಯಾಗಿರುವ ಗ್ರಾ.ಪಂ.ಗಳಲ್ಲಿ ಸರಕಾರಿ ಜಮೀನು ಲಭ್ಯವಿಲ್ಲದಿದ್ದರೆ ಖಾಸಗಿ ಜಮೀನನ್ನು ಸರಕಾರದ ಮಾರ್ಗಸೂಚಿಗಳನ್ವಯ ಖರೀದಿಸಿ ಒದಗಿಸಬೇಕು. 2018ರ ಸಮೀಕ್ಷೆಯಲ್ಲಿ ವಸತಿ ರಹಿತರ ಪಟ್ಟಿ ಪರಿಶೀಲಿಸಿ ಅರ್ಹರು ಬಿಟ್ಟು ಹೋಗಿದ್ದರೆ ಸೇರ್ಪಡೆ ಮಾಡಿ ಗ್ರಾಮಸಭೆ ಮೂಲಕ ಏಕಕಾಲದಲ್ಲಿ ಆಯ್ಕೆ ಮಾಡುವಂತೆ ಸೂಚಿಸಲಾಗಿದೆ.

ಆಯ್ಕೆಯಾಗಿರುವ
ಗ್ರಾ.ಪಂ.ಗಳು
ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಶಂಕರನಾರಾಯಣ, ಸಿದ್ದಾಪುರ, ಅಂಪಾರು, ನಾಡ, ಬಿಜೂರು, ಕುಂದಾಪುರ ತಾಲೂಕಿನ ಕೋಟೇಶ್ವರ, ಕಾಳಾವರ, ಬೆಳ್ವೆ, ಕೋಟ, ಉಡುಪಿ ತಾಲೂಕಿನ ತೆಂಕನಿಡಿಯೂರು, ನಾಲ್ಕೂರು, 38 ಕಳತ್ತೂರು, ಕಾಪು ತಾಲೂಕಿನ 80 ಬಡಗಬೆಟ್ಟು, ಎಲ್ಲೂರು, ಪಲಿಮಾರು, ಕಾರ್ಕಳ ತಾಲೂಕಿನ ಕುಕ್ಕುಂದೂರು, ನಿಟ್ಟೆ, ಮುಡಾರು, ಹೆಬ್ರಿ.

Advertisement

ತ್ವರಿತಗತಿ ಅನುಷ್ಠಾನ
ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆಯ ಅಂಗವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಒಟ್ಟು 14 ಯೋಜನೆಗಳನ್ನು ಘೋಷಣೆ ಮಾಡಿದ್ದರು.ಆ ಪೈಕಿ ಅಮೃತ ಗ್ರಾಮೀಣ ವಸತಿ ಯೋಜನೆಗೆ ಸಂಬಂಧಿಸಿದ ಗ್ರಾಮಗಳ ಆಯ್ಕೆ ಪ್ರಕ್ರಿಯೆ ತ್ವರಿತಗತಿಯಲ್ಲಿ ಪೂರ್ಣಗೊಂಡಂತಾಗಿದೆ.

ಸೂರು ಒದಗಿಸುವ ಉದ್ದೇಶ
ಅರ್ಹರಿಗೆ ವಸತಿ ಮತ್ತು ನಿವೇಶನ ಒದಗಿಸಿಕೊಡುವ ಉದ್ದೇಶದಿಂದ ಸರಕಾರ ಅಮೃತ ಗ್ರಾಮೀಣ ವಸತಿ ಯೋಜನೆಗೆ ಜಿಲ್ಲೆಯ 19 ಗ್ರಾ.ಪಂ.ಗಳನ್ನು ಆಯ್ಕೆಮಾಡಿದೆ. ಈ ಮೂಲಕ ಜಿಲ್ಲೆಯ 2 ಸಾವಿರಕ್ಕೂ ಅಧಿಕಮಂದಿಗೆ ವಸತಿ ಮತ್ತು ನಿವೇಶನ ರಹಿತರಿಗೆ ಸೂರು ಒದಗಿಸುವ ಉದ್ದೇಶ ಹೊಂದಲಾಗಿದೆ.
-ಡಾ| ವೈ.ನವೀನ್‌ ಭಟ್‌,
ಜಿ.ಪಂ. ಸಿಇಒ, ಉಡುಪಿ

– ಪುನೀತ್‌ ಸಾಲ್ಯಾನ್‌

Advertisement

Udayavani is now on Telegram. Click here to join our channel and stay updated with the latest news.

Next