Advertisement

ಗದುಗಿನ ವೀರೇಶ್ವರ ಪುಣ್ಯಾಶ್ರಮಕ್ಕೆಅಮೃತ ಮಹೋತ್ಸವ ರಾಜ್ಯ ಪ್ರಶಸ್ತಿ

08:14 PM Nov 01, 2021 | Team Udayavani |

ಗದಗ: ಸಂಗೀತ ಸಾಧಕರ ಪುಣ್ಯಭೂಮಿ ಎಂದೇ ಖ್ಯಾತಿ ಪಡೆದಿರುವ ಇಲ್ಲಿನ ವೀರೇಶ್ವರ ಪುಣ್ಯಾಶ್ರಮದ ಅಂಧ ಮಕ್ಕಳ ಶಾಲೆಗೆ ಭಾರತ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವ ಸ್ಮರಣೆಗಾಗಿ ರಾಜ್ಯ ಸರಕಾರ ಪ್ರಕಟಿಸಿರುವ ಅಮೃತ ಮಹೋತ್ಸವ ರಾಜ್ಯ ಪ್ರಶಸ್ತಿ ಸಂದಿದೆ.

Advertisement

ಹಾನಗಲ್‌ ಕುಮಾರೇಶ್ವರ ಸ್ವಾಮೀಗಳ ಪ್ರೇರಣೆಯಿಂದ ಪ| ಪಂಚಾಕ್ಷರಿ ಗವಾಯಿಗಳು 1914ರಲ್ಲಿ ಗುರುಕುಲ ಪದ್ಧತಿಯಲ್ಲಿ ಸ್ಥಾಪನೆಗೊಂಡಿರುವ ಶ್ರೀ ವೀರೇಶ್ವರ ಪುಣ್ಯಾಶ್ರಮ ಪಂ| ಪಂಚಾಕ್ಷರ ಗವಾಯಿಗಳವರ ಅಂಧ ಮಕ್ಕಳ ಸಂಗೀತ, ಸಾಹಿತ್ಯ ಮಹಾವಿದ್ಯಾಲಯ ಈಗಾಗಲೇ ಶತಮಾನೋತ್ಸವ ಕಂಡಿದ್ದು, 107 ವಸಂತಗಳನ್ನು ಪೂರೈಸಿದೆ.

ಪ್ರತಿನಿತ್ಯ ನಿರಂತರ ಅನ್ನದಾಸೋಹ, ಸಂಗೀತ ದಾಸೋಹ, ಅಕ್ಷರ ದಾಸೋಹ ಹೀಗೆ ತ್ರಿವಿಧ ದಾಸೋಹಗಳೊಂದಿಗೆ ಸಂಗೀತ, ಲಲಿತ ಕಲೆಗಳಿಗೆ ಒತ್ತು ನೀಡಲಾಗಿದೆ. ತ್ರಿಭಾಷಾ ಕವಿ ಗಾನಯೋಗಿ ಲಿಂ|ಡಾ|ಪಂ| ಪುಟ್ಟರಾಜ ಕವಿ ಗುರುವರ್ಯರು 1989-90ರಲ್ಲಿ ಸಂಸ್ಥಾಪಕ ಆಜೀವ ಅಧ್ಯಕ್ಷತೆಯಲ್ಲಿ ಡಾ| ಪಂ.ಪುಟ್ಟರಾಜ ಗವಾಯಿಗಳವರ ಅಂಧರ ಶಿಕ್ಷಣ ಸಮಿತಿ ಸ್ಥಾಪಿಸಿ, ಅದರ ಅಡಿಯಲ್ಲಿ ತಮ್ಮ ಗುರುಗಳಾದ ಪಂ| ಪಂಚಾಕ್ಷರ ಗವಾಯಿಗಳವರ ಹೆಸರಿನಲ್ಲಿ ಪಂ| ಪಂಚಾಕ್ಷರ ಗವಾಯಿಗಳವರ ಅಂಧರ ವಸತಿಯುತ ವಿಶೇಷ ಸಂಗೀತ ಪಾಠಶಾಲೆ ಸೇರಿದಂತೆ ಸುಮಾರು 14ಕ್ಕೂ ಹೆಚ್ಚು ಶಾಲಾ-ಕಾಲೇಜು ಆರಂಭಿಸಿದರು.

ಪುಣ್ಯಾಶ್ರಮದಲ್ಲಿ ಅಂಧ, ಅಂಗವಿಕಲ ಹಾಗೂ ಸರ್ವಜಾತಿಯ ಬಡಮಕ್ಕಳು ಒಮ್ಮೆ ಪ್ರವೇಶ ಪಡೆದರೆ ಪ್ರಾಥಮಿಕ ಹಂತದಿಂದ ಸಂಗೀತದಲ್ಲಿ ಮತ್ತು ಶಿಕ್ಷಣದಲ್ಲಿ ಉನ್ನತ ಪದವಿ ಮುಗಿಸಿ ಸಮಾಜದ ಉತ್ತಮ ಪ್ರಜೆಯನ್ನಾಗಿಸುವುದು ಶ್ರೀಗುರು ಪುಟ್ಟರಾಜರ ಸದಾಶಯವಾಗಿತ್ತು. ಪೂಜ್ಯರು ಲಿಂಗೈಕ್ಯರಾದ ನಂತರ ಪೂಜ್ಯಡಾ| ಕಲ್ಲಯ್ಯಜ್ಜನವರು ಕಾರ್ಯಾಧ್ಯಕ್ಷರಾಗಿ ಗುರುವರ್ಯರು ಹಾಕಿಕೊಟ್ಟ ಮಾರ್ಗದಲ್ಲೇ ಉಚಿತ ಊಟ-ವಸತಿಯೊಂದಿಗೆ ಸಂಗೀತ, ಸಾಹಿತ್ಯದೊಂದಿಗೆ ಅಂಧ ಮಕ್ಕಳಿಗೆ ವಿಶೇಷ ಶಿಕ್ಷಣ, ಬ್ರೆçಲ್‌ ಲಿಪಿ ಕಲಿಕೆ, ಸಂಗೀತ ವಿದ್ವಾನರಿಂದ ಕಾರ್ಯಾಗಾರ, ಮೋಬಿಲಿಟಿ ತರಬೇತಿ ಹೀಗೆ ನೂರಾರು ಅಂಧ ಮಕ್ಕಳಿಗೆ ವರ್ಷದುದ್ದಕ್ಕೂ ರಚನಾತ್ಮಕ ಕಾರ್ಯಕ್ರಮಗಳನ್ನು ನಿರ್ವಹಿಸಲಾಗುತ್ತಿದೆ.

ಪಂ| ಪುಟ್ಟರಾಜಕವಿ ಗವಾಯಿಗಳ ಅವರ ಅವ ಧಿಯಲ್ಲೇ ಪುಣ್ಯಾಶ್ರಮದ ಸಂಗೀತ ಮತ್ತು ಸಾಮಾಜಿಕ ಕಾರ್ಯಗಳು ಹೆಚ್ಚು ಬೆಳಕಿಗೆ ಬಂದಿದ್ದವು. ಅಂಧರು ಕುಟುಂಬಕ್ಕೆ ಹೊರೆಯಾಗದಂತೆ ಅವರನ್ನು ಸ್ವಾವಲಂಬಿಯನ್ನಾಗಿಸುವ ಪೂಜ್ಯರ ಪ್ರಯತ್ನ ಫಲಿಸಿದೆ. ಸಂಗೀತ ಸಾಧನೆಯೊಂದಿಗೆ ಅಂಧ ಮಕ್ಕಳ ಶಾಲಾ ವಿದ್ಯಾರ್ಥಿಗಳು ಬರಹಗಾರರ ನೆರವಿನೊಂದಿಗೆ ಎಸ್‌ ಎಸ್‌ಎಲ್‌ಸಿ, ಪಿಯುಸಿ ಮತ್ತು ಪದವಿ ತರಗತಿಗಳನ್ನೂ ಪೂರೈಸುತ್ತಿದ್ದಾರೆ. ಕಳೆದ 100 ವರ್ಷಗಳಿಂದ ಲಕ್ಷಾಂತರ ವಿದ್ಯಾರ್ಥಿಗಳು ಕಲಾವಿದರಾಗಿ ಹೊರ ಹೊಮ್ಮಿದ್ದಾರೆ.

Advertisement

ಶಾಲೆಯ ಹಳೇ ವಿದ್ಯಾರ್ಥಿಗಳಾದ ಸಿದ್ದಪ್ಪ ಮಾಸ್ತರ್‌ ಗುಳೆಂ, ರೇವಣಪ್ಪ ಕುಂಕುಮಗಾರ, ಗೋವಿಂದರಾಜ ಬೊಮ್ಮಳಾಪುರ, ಸೇರಿದಂತೆ ಹಲವರು ಸಂಗೀತ, ನಾಟಕ ಮತ್ತು ರಂಗಭೂಮಿ ಕ್ಷೇತ್ರದಲ್ಲಿ ಖ್ಯಾತಿ ಗಳಿಸಿದ್ದಾರೆ. 300ರಿಂದ 400 ಹಳೇ ವಿದ್ಯಾರ್ಥಿಗಳು ರಾಣಿಚನ್ನಮ್ಮ, ನವೋದಯ, ಮೊರಾರ್ಜಿ ಸೇರಿದಂತೆ ವಿವಿಧ ವಸತಿ ಶಾಲೆಗಳಲ್ಲಿ ಸಂಗೀತ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ರೋಟರಿ ಕ್ಲಬ್‌ ನೆರವು: ವೀರೇಶ್ವರ ಪುಣ್ಯಾಶ್ರಮದ ಸಾಮಾಜಿಕ ಮತ್ತು ಸಂಗೀತ ಸೇವೆ ಗೌರವಿಸಿ ರೋಟರಿ ಅಂತಾರಾಷ್ಟ್ರೀಯ ಕ್ಲಬ್‌ನಿಂದ 90ರ ದಶಕದಲ್ಲಿ ಶಾಲಾ ಅಭಿವೃದ್ಧಿಗೆ ಅನುದಾನದಡಿ ಸುಮಾರು 20 ಕೊಠಡಿಗಳನ್ನು ನಿರ್ಮಿಸಿಕೊಟ್ಟಿದ್ದು ವಿಶೇಷ. ಜತೆಗೆ 2014 ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಹಿರಿಯ ನಾಗಕರು ಮತ್ತು ವಿಕಲಚೇತನರ ಇಲಾಖೆಯಿಂದ ರಾಜ್ಯ ಪ್ರಶಸ್ತಿ ಸೇರಿದಂತೆ ಸಂಸ್ಥೆಗೆ ನೂರಾರು ಪ್ರಶಸ್ತಿ, ಪುರಸ್ಕಾರಗಳು ಸಂದಿವೆ.

*ವೀರೇಂದ್ರ ನಾಗಲದಿನ್ನಿ

Advertisement

Udayavani is now on Telegram. Click here to join our channel and stay updated with the latest news.

Next