Advertisement

28ಕ್ಕೆ ಅಮೃತ ಭಾರತಿಗೆ ಕನ್ನಡದ ಆರತಿ ಕಾರ್ಯಕ್ರಮ

05:21 PM May 20, 2022 | Team Udayavani |

ದೇವನಹಳ್ಳಿ: 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ರಾಜ್ಯಾದ್ಯಂತ ಎಲ್ಲಾ ಕಂದಾಯ ವಿಭಾಗಗಳಲ್ಲಿ ಅಮೃತ ಭಾರತಿಗೆ ಕನ್ನಡದ ಆರತಿ ಎಂಬ ಶೀರ್ಷಿಕೆಯಡಿ ನಾಲ್ಕು ಹಂತಗಳಲ್ಲಿ ನಾಡಿನ ಸಾಂಸ್ಕೃತಿಕ ಇತಿಹಾಸದಲ್ಲೇ ವಿನೂತನ ರೀತಿಯಲ್ಲಿ ಕಾರ್ಯಕ್ರಮಗಳನ್ನು ನಡೆಸಲು ಉದ್ದೇಶಿಸಲಾಗಿದೆ. ಜಿಲ್ಲೆಯಲ್ಲೂ ಮೇ 28ರಂದು ಮೊದಲ ಹಂತದ ಕಾರ್ಯಕ್ರಮಕ್ಕೆ ಸಂಬಂಧಿಸಿದ ಇಲಾಖೆಗಳು ಸಹಕಾರ ನೀಡುವ ಮೂಲಕ ಅಗತ್ಯ ಕ್ರಮಕೈಗೊಳ್ಳಬೇಕು ಎಂದು
ಅಪರ ಜಿಲ್ಲಾಧಿಕಾರಿ ವಿಜಯ.ಈ.ರವಿಕುಮಾರ್‌ ತಿಳಿಸಿದರು.

Advertisement

ತಾಲೂಕಿನ ಬೀರಸಂದ್ರ ಗ್ರಾಮದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆ ಕುರಿತ ಸಭೆಯಲ್ಲಿ ಮಾತನಾಡಿ, ಮೇ 28ರಂದು ಮೊದಲ ಹಂತದ ಕಾರ್ಯಕ್ರಮವಾಗಿ ಅಮೃತ ಭಾರತಿಗೆ ಕನ್ನಡದ ಅರತಿ ಕಾರ್ಯಕ್ರಮ ನಡೆಯಲಿದೆ. ಜೂನ್‌ 15ರಿಂದ 30ರವರೆಗೆ ಹೋರಾಟದ ನೆಲದಲ್ಲಿ ಒಂದು ದಿನ ಕಾರ್ಯಕ್ರಮವು ಎರಡನೇ ಹಂತದ ಕಾರ್ಯಕ್ರಮವಾಗಿದೆ. ಮೂರನೇ ಹಂತದ ಕಾರ್ಯಕ್ರಮದಲ್ಲಿ ಆಗಸ್ಟ್‌ 1ರಿಂದ 8ರವರೆಗೆ ರಥಯಾತ್ರೆ ನಡೆಯಲಿದೆ. ನಾಲ್ಕನೇ ಹಂತದಲ್ಲಿ ಆಗಸ್ಟ್‌ 9ರಿಂದ 3 ದಿನಗಳು ಸಮಾರೋಪ ಸಮಾರಂಭ ನಡೆಯಲಿದೆ ಎಂದು ಹೇಳಿದರು.

ಜಿಲ್ಲಾ ಮಟ್ಟದ ಕಾರ್ಯಕ್ರಮ:ಮೊದಲ ಹಂತದ ಕಾರ್ಯಕ್ರಮ ಮೇ 28ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ, ದೊಡ್ಡಬಳ್ಳಾಪುರ ತಾಲೂಕುಗಳಲ್ಲಿ ಏಕಕಾಲದಲ್ಲಿ ನಡೆಯಲಿದೆ. ದೇವನಹಳ್ಳಿಯಲ್ಲಿ ಜಿಲ್ಲಾ ಮಟ್ಟದ ಕಾರ್ಯಕ್ರಮ ನಡೆಯಲಿದೆ. ಸ್ವಾತಂತ್ರ್ಯ ಹೋರಾಟಗಾರರು, ಸಾಹಿತಿಗಳು, ಕಲಾವಿದರು, ಜನಪ್ರತಿನಿಧಿಗಳು, ಎಲ್ಲ ಸಂಘಟನೆಗಳ ಮುಖಂಡರು ಮೆರವಣಿಗೆ ನಡೆಸಲಿದ್ದಾರೆ.

ಶಿಷ್ಟಾಚಾರದಂತೆ ಜನಪ್ರತಿನಿಧಿಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಬೇಕು. ಜಾನಪದ ಕಲಾ ತಂಡಗಳಿಂದ ಪ್ರದರ್ಶನ ಏರ್ಪಡಿಸಬೇಕು. ಸ್ವಾತಂತ್ರ್ಯ ಹೋರಾಟದ ಕುರಿತು ಉಪನ್ಯಾಸ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮ, ದೇಶಭಕ್ತಿ ಗೀತೆಗಳ ಗಾಯನ, ಸ್ವಾತಂತ್ರ್ಯ ಹೋರಾಟದ ಕುರಿತು ನೃತ್ಯ ರೂಪಕ, ನಾಟಕ, ಆಶು ಭಾಷಣ ಕಾರ್ಯಕ್ರಮಗಳನ್ನು ಆಯೋಜನೆ ಮಾಡಬೇಕು ಎಂದರು.

ಮೇ 28ರಂದು ವೀರ ಸಾವರ್ಕರ್‌ ಜನ್ಮ ದಿನಾಚರಣೆ ಅಂಗವಾಗಿ ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಿ ಸಿದ ಸಾಕ್ಷ್ಯಚಿತ್ರಗಳ ಪ್ರದರ್ಶನ ನಡೆಯಲಿದೆ. ದೇವನಹಳ್ಳಿ, ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಏಕಕಾಲಕ್ಕೆ ನಡೆಯಲಿರುವ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದರು. ಸಭೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ್‌ ಆರಾಧ್ಯ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಶಾಲಿನಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next