Advertisement

ಅಮೃತ್‌ ಯೋಜನೆ ನಿರ್ಲಕ್ಷ್ಯ ಸಲ್ಲದು

12:30 AM Mar 02, 2019 | |

ಉಡುಪಿ: ಅಮೃತ್‌ ಯೋಜನೆ ಜಾರಿಯಾಗಿ ಮೂರು ವರ್ಷಗಳು ಕಳೆದರೂ ಅನುದಾನ ಖರ್ಚಾಗಿಲ್ಲ, ಕಾಮಗಾರಿಗಳು ಇನ್ನೂ ಟೆಂಡರ್‌ ಹಂತದಲ್ಲೇ ಇವೆ ಎಂದರೆ ಹೇಗೆ? ಕೇಂದ್ರ ಸರಕಾರದ ಯೋಜನೆಗಳ ಜಾರಿಗೆ ನಿರ್ಲಕ್ಷ್ಯ ವಹಿಸುವುದು ಸರಿಯಲ್ಲ ಎಂದು ಸಂಸದೆ ಶೋಭಾ ಕರಂದ್ಲಾಜೆ ಅಸಮಾಧಾನ ವ್ಯಕ್ತಪಡಿಸಿದರು.

Advertisement

ಮಣಿಪಾಲದ ಜಿ.ಪಂ. ಸಭಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನಗರಸಭೆ ಪರಿಸರ ಎಂಜಿನಿಯರ್‌ ರಾಘವೇಂದ್ರ ಮಾತನಾಡಿ, ಕೇಂದ್ರ ಸರಕಾರದಿಂದ 2015-16ರಲ್ಲಿ ಅಮೃತ್‌ ಯೋಜನೆಯಡಿ ನಗರಸಭೆಗೆ 132.5 ಕೋ.ರೂ. ಅನುದಾನ ಬಂದಿದೆ. ಅದರಲ್ಲಿ 1 ಕೋ. ರೂ.ಉದ್ಯಾನ ನಿರ್ಮಾಣಕ್ಕೆ ಟೆಂಡರ್‌ ಆಗಿ ಕಾಮಗಾರಿ ಮುಗಿದಿದೆ. 121.5 ಕೋ.ರೂ. ವಾರಾಹಿಯಿಂದ ಬಜೆ ಅಣೆಕಟ್ಟಿಗೆ ಮೊದಲ ಹಂತದಲ್ಲಿ ನೀರು ತರುವ ಯೋಜನೆಗೆ ಟೆಂಡರ್‌ ಆಗಿದೆ. ಯೋಜನೆ ಬದಲಾವಣೆಯಾದುದರಿಂದ ವರ್ಕ್‌ ಆರ್ಡರ್‌ ನೀಡಲು ಬಾಕಿಯಿದೆ ಎಂದರು.

ಆಯುಷ್ಮಾನ್‌ ಕಾರ್ಡ್‌ ವಿತರಿಸಿ
ಆಯುಷ್ಮಾನ್‌ ಯೋಜನೆಯಡಿ ಆರೋಗ್ಯ ಕಾರ್ಡ್‌ ವಿತರಿಸಲು ತಾಲೂಕಿಗೆ ಒಂದರಂತೆ ವಿತರಣೆ ಕೇಂದ್ರ ನೀಡುವಂತೆ ಸರಕಾರಕ್ಕೆ ಪತ್ರ ಬರೆಯಿರಿ. ಈ ಯೋಜನೆಯಡಿ ಚಿಕಿತ್ಸಾ ಸೌಲಭ್ಯ ಪಡೆಯುವ ಬಗ್ಗೆ ಜನರಲ್ಲಿ ಗೊಂದಲಗಳಿದ್ದು, ಅವನ್ನು ಅಧಿಕಾರಿಗಳು ನಿವಾರಿಸಬೇಕು ಎಂದು ಸಂಸದೆ ಸೂಚಿಸಿದರು.

ಕಾಮಗಾರಿ ವಿಸ್ತರಣೆಗೆ ಪ್ರಸ್ತಾವನೆ 
ಮಲ್ಪೆ ಜೆಟ್ಟಿಯಲ್ಲಿ ಬ್ರೇಕ್‌ ವಾಟರ್‌ ತಡೆ ಕಾಮಗಾರಿಯನ್ನು ವಿಸ್ತರಿಸುವಂತೆ ಮೀನುಗಾರರು ಬೇಡಿಕೆ ಸಲ್ಲಿಸಿದ್ದಾರೆ. 102 ಕೋ. ರೂ. ಖರ್ಚು ಮಾಡಿದ್ದರೂ ಕಾಮಗಾರಿಯ ಲಾಭ ಮೀನುಗಾರರಿಗೆ ಸಿಗುತ್ತಿಲ್ಲ. ಹಾಗಾಗಿ ಕಾಮಗಾರಿ ವಿಸ್ತರಣೆಗೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಎಂದು ಸಂಸದರು ಮೀನುಗಾರಿಕಾ ಇಲಾಖೆಯ ಉಪ ನಿರ್ದೇಶಕ ಪಾರ್ಶ್ವನಾಥ್‌ಗೆ ಸೂಚಿಸಿದರು.

ಮಂಗನ ಕಾಯಿಲೆ
ಇಲ್ಲಿಯವರೆಗೂ 198 ಮಂಗಗಳು ಸತ್ತಿವೆ. 65 ಶವಗಳ ಪರೀಕ್ಷೆ ನಡೆಸಲಾಗಿದೆ. 9 ಮಂಗಗಳದೇಹದಲ್ಲಿ ಕೆಎಫ್ಡಿ ಸೋಂಕು ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿ ಮಾಹಿತಿ ನೀಡಿದರು.

Advertisement

ಮಣಿಪಾಲದ ಸುಧೀಂದ್ರ ಗ್ಯಾಸ್‌ ಏಜೆನ್ಸಿ ಉಜ್ವಲ ಯೋಜನೆ ಫ‌ಲಾನುಭವಿಗಳಿಗೆ ಗ್ಯಾಸ್‌ ಸಂಪರ್ಕ ನೀಡುತ್ತಿಲ್ಲ ಎಂಬ ದೂರುಗಳು ಕೇಳಿಬಂದಿವೆ. ಸರಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಅಡ್ಡಿಯಾಗಿರುವ ಏಜೆನ್ಸಿಯ ಪರವಾನಗಿಯನ್ನು ರದ್ದು ಮಾಡಲು ಇಲಾಖೆಗೆ ಪತ್ರ ಬರೆಯುವಂತೆ ಅಧಿಕಾರಿಗಳಿಗೆ ಸಂಸದೆ ಸೂಚಿಸಿದರು.

ಜಿ.ಪಂ. ಅಧ್ಯಕ್ಷ ದಿನಕರ ಬಾಬು, ಡಿಸಿಹೆಪ್ಸಿಬಾ ರಾಣಿ ಕೊರ್ಲಪಾಟಿ, ಜಿ.ಪಂ. ಸಿಇಒ ಸಿಂಧೂ ಬಿ. ರೂಪೇಶ್‌ ಉಪಸ್ಥಿತರಿದ್ದರು. ಹಾಲಾಡಿ ಶ್ರೀನಿವಾಸ ಶೆಟ್ಟಿ, ಲಾಲಾಜಿ ಮೆಂಡನ್‌ ಪಾಲ್ಗೊಂಡಿದ್ದರು. 

ಸಾರಿಗೆ ಇಲಾಖೆ ಅಧಿಕಾರಿಗಳಿಗೆ ತರಾಟೆ
ಚಾಲಕರು ಹಾಗೂ ನಿರ್ವಾಹಕರು ಹೊಂದಾಣಿಕೆ ಮಾಡಿಕೊಂಡು ಖಾಸಗಿ ಬಸ್‌ಗಳ ಹಿಂದೆಯೇ ನರ್ಮ್ ಬಸ್‌ಗಳನ್ನು ಓಡಿಸುತ್ತಿದ್ದಾರೆ ಎನ್ನುವ ದೂರುಗಳು ಕೇಳಿ ಬರುತ್ತಿವೆ. ಖಾಸಗಿ ಬಸ್‌ಗಳ ಸೇವೆ ನೀಡಲು ಸಾಧ್ಯವಿಲ್ಲದ ಕಡೆಗಳಲ್ಲಿ ನರ್ಮ್ ಬಸ್‌ಗಳನ್ನು ಓಡಿಸಿ ಎಂದು ಸಂಸದೆ ಶೋಭಾ ಕರಂದ್ಲಾಜೆ ಸಾರಿಗೆ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಜಿಲ್ಲೆಯಲ್ಲಿ ಒಟ್ಟು 40 ನರ್ಮ್ ಬಸ್‌ ಓಡಾಡುತ್ತಿವೆ. ನಗರ, ಗ್ರಾಮಾಂತರ ಪ್ರದೇಶಗಳಲ್ಲಿ ಸಂಚರಿಸುತ್ತವೆ. ಆರ್‌ಟಿಓ ಸಭೆಯಲ್ಲಿ ಬಸ್‌ಗಳುಓಡಿಸುವ ಸಮಯ, ಮಾರ್ಗದ ವಿವರ ನೀಡಲಾಗುತ್ತದೆ. ಅದರಂತೆ ಬಸ್‌ಗಳನ್ನು ಓಡಿಸಲಾಗುತ್ತದೆ ಎಂದು ಅಧಿಕಾರಿ ಸಮಜಾಯಿಷಿ ನೀಡಿದರು. 

ಮಾತೃಪೂರ್ಣ ಯೋಜನೆ ವಿಫ‌ಲ
ಜಿಲ್ಲೆಯಲ್ಲಿ ಮಾತೃಪೂರ್ಣ ಯೋಜನೆ ನಿರುಪಯುಕ್ತ ಹಾಗೂ ಅವ್ಯವಹಾರಗಳು ನಡೆಯುತ್ತಿವೆ ಎನ್ನುವ ಆರೋಪಗಳು ಕೇಳಿ ಬರುತ್ತಿವೆ. ಕರಾವಳಿ ಹಾಗೂ ಮಲೆನಾಡಿನ ಭಾಗದಲ್ಲಿ ಗರ್ಭಿಣಿಯರು ಅಂಗನವಾಡಿಗೆ ತೆರಳಿ ಊಟ ಮಾಡುವ ಪದ್ಧತಿ ಇಲ್ಲ. ಹಾಗಾಗಿ ಫ‌ಲಾನುಭವಿಗಳಿಗೆ ಊಟ ಕೊಡುವ ಬದಲು ಅವರ ಬ್ಯಾಂಕ್‌ ಖಾತೆಗೆ ಹಣ ಹಾಕುವ ವ್ಯವಸ್ಥೆಯಾಗಬೇಕು. ಇಲ್ಲವಾದರೆ ಮೊದಲಿನಂತೆ ಕಿಟ್‌ ವಿತರಿಸುವ ಕುರಿತು ಸರಕಾರಕ್ಕೆ ಮತ್ತೂಮ್ಮೆ ಪತ್ರ ಬರೆಯಬೇಕು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಗ್ರೇಸಿ ಗೊನ್ಸಾಲ್ವಿಸ್‌ ಅವರಿಗೆ ಸಂಸದೆ ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next