Advertisement

ಅಂಫಾನ್‌ ಚಂಡಮಾರುತ ಪರಿಣಾಮ: ಜಿಲ್ಲೆಯ ವಿವಿಧೆಡೆ ಗಾಳಿ-ಮಳೆಗೆ ಹಾನಿ

11:11 PM May 18, 2020 | Sriram |

ಉಡುಪಿ: ಅಂಫಾನ್‌ ಚಂಡಮಾರುತ ತೀವ್ರ ಸ್ವರೂಪ ಪಡೆದುಕೊಂಡಿದೆ.ಪರಿಣಾಮ ಉಡುಪಿ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಸೋಮವಾರ ಮತ್ತು ರವಿವಾರ ರಾತ್ರಿ ಗುಡುಗು, ಮಿಂಚು ಸಹಿತ ಭಾರೀ ಗಾಳಿ ಮಳೆಯಾಗಿದೆ. ಮಳೆಗೆ ಹಲವು ಕಡೆಗಳಲ್ಲಿ ಹಾನಿ ಸಂಭವಿಸಿ ನಷ್ಟ ಉಂಟಾಗಿದೆ.

Advertisement

ಕಾಪು ತಾಲೂಕಿನ ಯೇಣಗುಡ್ಡೆ ನಿವಾಸಿ ಭರತ್‌ಗೆ ರವಿವಾರ ರಾತ್ರಿ ಸಿಡಿಲು ಬಡಿದು ಅವರು ಮೃತರಾಗಿದ್ದಾರೆ. ಇದರೊಂದಿಗೆ ಮಳೆ ಜಿಲ್ಲೆಯಲ್ಲಿ ಮೊದಲ ಬಲಿ ಪಡೆದುಕೊಂಡಿದೆ. ಕಾಪು ಮೊದಲಾದೆಡೆ ಗುಡುಗು, ಮಿಂಚು ಭಾರೀ ಗಾಳಿ ಮಳೆಗೆ ಅಪಾರ ನಷ್ಟ ಸಂಭವಿಸಿದೆ.

ಇನ್ನು ಹಲವು ಕಡೆಗಳಲ್ಲಿ ಮನೆಗಳ ಮೇಲೆ ಸಣ್ಣ ಪುಟ್ಟ ಮರಗಳು ಉರುಳಿ ಬಿದ್ದು ನಷ್ಟವಾದ ಬಗ್ಗೆ ತಿಳಿದು ಬಂದಿದೆ. ಕೃಷಿ ತೋಟಗಳಿಗೂ ಹಾನಿ ಆದ ಬಗ್ಗೆ ವರದಿಯಾಗಿದೆ.

ಮಧ್ಯಾಹ್ನದವರೆಗೂ ಮಳೆ
ಸೋಮವಾರ ಮುಂಜಾನೆ ಹೊತ್ತಲ್ಲಿ ಜಿಲ್ಲೆಯ ವಿವಿಧೆಡೆಗಳಲ್ಲಿ ಗುಡುಗು ಮಿಂಚು ಗಾಳಿ ಮಳೆಯಾಗಿದೆ. ಬೆಳಗ್ಗೆ ಹೊತ್ತು ಮೋಡದ ವಾತಾವರಣದಿಂದ ಪರಿಸರ ಕತ್ತಲಿನಂತಾಗಿತ್ತು. ಮಧ್ಯಾಹ್ನದವರೆಗೂ ಮೋಡದ ವಾತಾವರಣ, ಲಘು ಮಳೆ ಮುಂದುವರಿದಿತ್ತು. ಆರಂಭಿಕ ಮಳೆಗೆ ಉಡುಪಿ ನಗರದ ಪ್ರಮುಖ ರಸ್ತೆಗಳು ಸೇರಿ ವಿವಿಧೆಡೆಯಲ್ಲಿ ಸೂಕ್ತ ಚರಂಡಿ ವ್ಯವಸ್ಥೆಯಿಲ್ಲದೆ ರಸ್ತೆ ಮೇಲೆ ನೀರು ಹರಿದು ಸಂಚಾರದಲ್ಲಿ ತೊಂದರೆ ಉಂಟಾಯಿತು.

ಕುಂದಾಪುರ – ಬೈಂದೂರು : ಗುಡುಗು ಸಹಿತ ಉತ್ತಮ ಮಳೆ
ಕುಂದಾಪುರ ಹಾಗೂ ಬೈಂದೂರು ತಾಲೂಕಿನ ಎಲ್ಲ ಕಡೆಗಳಲ್ಲಿ ಸೋಮವಾರ ಬೆಳಗ್ಗಿನ ಜಾವ ಗುಡುಗು ಸಹಿತ ಉತ್ತಮ ಮಳೆಯಾಗಿದೆ.

Advertisement

ಸಿದ್ದಾಪುರ, ಗೋಳಿಯಂಗಡಿ, ಬೆಳ್ವೆ, ಹಾಲಾಡಿ, ಅಮಾಸೆಬೈಲು, ಹೆಂಗವಳ್ಳಿ, ಕೊಲ್ಲೂರು, ಜಡ್ಕಲ್‌, ಮುದೂರು, ವಂಡ್ಸೆ, ಬೈಂದೂರು, ಉಪ್ಪುಂದ ಮತ್ತಿತರ ಕಡೆಗಳಲ್ಲಿ ಬೆಳಗ್ಗೆ ಉತ್ತಮ ಮಳೆಯಾಗಿತ್ತು. ಕುಂದಾಪುರ, ಕೋಟೇಶ್ವರ, ಬೀಜಾಡಿ, ತೆಕ್ಕಟ್ಟೆ, ಬೇಳೂರು, ಕುಂಭಾಸಿ, ಹೆಮ್ಮಾಡಿ, ತಲ್ಲೂರು, ಗಂಗೊಳ್ಳಿ, ತ್ರಾಸಿ, ಮರವಂತೆ ಮತ್ತಿತರ ಕಡೆಗಳಲ್ಲಿ ಬೆಳಗ್ಗೆ 10 ಗಂಟೆ ಸುಮಾರಿಗೆ ಗುಡುಗು ಸಹಿತ ಮಳೆ ಬಂದಿದೆ.

ಕುಂದಾಪುರ – ಬೈಂದೂರು ಹೆದ್ದಾರಿ, ಕೊಲ್ಲೂರು – ಹೆಮ್ಮಾಡಿ ದ್ವಿಪಥ ಕಾಮಗಾರಿ ಸಹಿತ ಅನೇಕ ಕಡೆಗಳಲ್ಲಿ ರಸ್ತೆ ಡಾಮರೀಕರಣ ನಡೆಯುತ್ತಿದ್ದು, ಅಕಾಲಿಕ ಮಳೆಯಿಂದಾಗಿ ಕೆಲವೆಡೆಗಳಲ್ಲಿ ಕಾಮಗಾರಿಗೆ ಅಡ ಚಣೆಯಾಗಿದೆ. ಇನ್ನು ಕೆಲವೆಡೆಗಳಲ್ಲಿ ರಸ್ತೆಯಲ್ಲಿಯೇ ನೀರು ನಿಂತು ವಾಹನ ಸಂಚಾರಕ್ಕೂ ತೊಂದರೆಯಾಗಿತ್ತು.

ಕೃಷಿ ಚಟುವಟಿಕೆಗೆ ಚಾಲನೆ
ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆ ಈಗಾಗಲೇ ಕೆಲವೆಡೆಗಳಲ್ಲಿ ಆರಂಭಗೊಂಡಿದ್ದು, ಈ ಮಳೆಯಿಂದಾಗಿ ಗದ್ದೆ ಉಳುಮೆ ಮಾಡಲು, ಗೊಬ್ಬರ ಹಾಕಲು ಮತ್ತಷ್ಟು ಸಹಾಯವಾದಂತಾಗಿದೆ. ಈಗಾಗಲೇ ಗದ್ದೆ ಉಳುಮೆ ಆಗುತ್ತಿದ್ದು, ಬಿತ್ತನೆ ಕಾರ್ಯ ಇನ್ನಷ್ಟೇ ಆರಂಭಗೊಳ್ಳಬೇಕಿದೆ.

ಭಾರೀ ಗಾಳಿ-ಮಳೆಗೆ ಹೆಜಮಾಡಿ ಚೆಕ್‌ಪೋಸ್ಟ್‌ ತಗಡು ಚಪ್ಪರ ಧರಾಶಾಯಿ
ಪಡುಬಿದ್ರಿ: ರವಿವಾರ ರಾತ್ರಿ ಹೆಜಮಾಡಿ ಭಾಗದಲ್ಲಿ ಭಾರೀ ಗಾಳಿ ಮಳೆ ಕಾರಣ ಚೆಕ್‌ಪೋಸ್ಟ್‌ನಲ್ಲಿ ಹಾಕಲಾಗಿದ್ದ ತಗಡು ಶೀಟು ಚಪ್ಪರಗಳು ಧರಾಶಾಯಿಯಾಗಿದೆ. ಆದರೆ ಯಾರಿಗೂ ಯಾವುದೇ ಅಪಾಯವಾಗಿಲ್ಲ.

ದ.ಕ., ಮತ್ತು ಉಡುಪಿ ಗಡಿಭಾಗ ಹೆಜಮಾಡಿಯಲ್ಲಿ ಹೊರ ರಾಜ್ಯಗಳಿಂದ ಆಗಮಿಸುವವರ ಮಾಹಿತಿ ಸಂಗ್ರಹಕ್ಕಾಗಿ ಕೆಲವು ದಿನಗಳ ಹಿಂದೆ ಹೆದ್ದಾರಿಯ ಎರಡೂ ಬದಿಗಳಲ್ಲಿ ತಗಡು ಶೀಟು ಹಾಕಿ ತಪಾಸಣಾ ಕೇಂದ್ರಗಳನ್ನು ಆರಂಭಿಸಲಾಗಿತ್ತು. ಆದರೆ ರವಿವಾರ ರಾತ್ರಿಯ ಭಾರೀ ಗಾಳಿ ಮಳೆಗೆ ಉಡುಪಿ ಭಾಗದ ಎಲ್ಲ ತಗಡು ಚಪ್ಪರಗಳೂ ನೆಲಸಮವಾಗಿದ್ದು, ಅದರೊಳಗಿದ್ದ ಎಲ್ಲ ಸಿಬಂದಿ ಹೊರಗೋಡಿದ ಪರಿಣಾಮ ಅಪಾಯದಿಂದ ಪಾರಾಗಿದ್ದಾರೆ. ರಸ್ತೆ ಡಿವೈಡರ್‌ ಮೇಲೆ ಹಾಕಲಾಗಿದ್ದ ಚಪ್ಪರವು ನೆಲಸಮವಾಗಿದೆ.

ದ.ಕ., ಜಿಲ್ಲಾಡಳಿತವು ರಸ್ತೆಯ ಪೂರ್ವ ಬದಿಯಲ್ಲಿ ಬೋಲ್ಟ್ ಹಾಕಿ ತಗಡು ಚಪ್ಪರ ಹಾಕಲಾಗಿದ್ದು ಯಾವುದೇ ಅಪಾಯ ಸಂಭವಿಸಿಲ್ಲ. ಕೇವಲ ಒಂದೆರಡು ಶೀಟುಗಳು ಹಾರಿಹೋಗಿದೆ.

ಜಿಲ್ಲೆಯಲ್ಲಿ 20 ಮಿ.ಮೀ ಮಳೆ
ಸೋಮವಾರ ಬೆಳಗ್ಗೆ 8.30ಕ್ಕೆ ಹಿಂದಿನ 24 ಗಂಟೆಗಳಲ್ಲಿ ಉಡುಪಿಯಲ್ಲಿ 20 ಮಿ.ಮೀ, ಕುಂದಾಪುರ 2 ಮಿ.ಮೀ, ಕಾರ್ಕಳದಲ್ಲಿ 33ಮಿ. ಮೀ ಮಳೆಯಾಗಿದ್ದು ಸರಾಸರಿ ಮೂರು ತಾಲೂಕುಗಳಲ್ಲಿ 20 ಮಿ. ಮೀ ನಷ್ಟು ಮಳೆಯಾಗಿದೆ. ಉಡುಪಿ ನಗರವಲ್ಲದೆ ಪಡುಬಿದ್ರಿ, ಶಿರ್ವ, ಕೋಟ, ಸಾಸ್ತಾನ, ಸಾೖಬರಕಟ್ಟೆ, ಬ್ರಹ್ಮಾವರ, ಕಾಪು, ಕಟಪಾಡಿ ಮುಂತಾದೆಡೆಗಳಲ್ಲಿ ಕೂಡ ಗುಡುಗು ಮಿಂಚು ಗಾಳಿ ಮಳೆಯಾಗಿದೆ.

ಜಾರಿ ಬಿದ್ದ ದ್ವಿಚಕ್ರ ವಾಹನ ಸವಾರರು!
ಪರ್ಕಳದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಅರ್ಧಕ್ಕೆ ಸ್ಥಗಿತವಾಗಿದ್ದು, ಮಳೆ ಬಂದಾಗ ಮಣ್ಣಿನ ರಸ್ತೆ ಜಾರುತ್ತಿದೆ. ಸೋಮವಾರ ಮುಂಜಾನೆ ಸುರಿದ ಭಾರೀ ಮಳೆಯಿಂದಾಗಿ ಸಿಂಡಿಕೇಟ್‌ ಬ್ಯಾಂಕ್‌ ಎದುರಿನ ರಸ್ತೆಯಲ್ಲಿ ಹಲವು ದ್ವಿಚಕ್ರ ವಾಹನಗಳು ಉರುಳಿಬಿದ್ದವು.

ಪರ್ಕಳ ಸರ್ಕಲ್‌ನಿಂದ ಮಣಿಪಾಲದ ಬದಿಗೆ ಸುಮಾರು 50 ಮೀಟರ್‌ ಉದ್ದಕ್ಕೆ ರಸ್ತೆಯ ಒಂದು ಭಾಗವನ್ನು ಮೂರು ತಿಂಗಳ ಹಿಂದೆಯೇ ಮಣ್ಣು ಹಾಕಿ ಎತ್ತರಿಸಿದ್ದು, ಲಾಕ್‌ಡೌನ್‌ ಕಾರಣ ಕಾಮಗಾರಿ ಮುಂದುವರಿದಿಲ್ಲ. ಇನ್ನು ಮಳೆಗಾಲ ಆರಂಭವಾದರೆ ನೀರಿನೊಂದಿಗೆ ಮಣ್ಣು ಸೇರಿಕೊಂಡು ಅಲ್ಲೇ ತಗ್ಗಿನಲ್ಲಿರುವ ಮನೆಗಳಿಗೆ ನುಗ್ಗುವ ಅಪಾಯವೂ ಇದೆ. ಮಣ್ಣು ಹಾಕಿರುವ ಪ್ರದೇಶದ ಕಾಮಗಾರಿಯನ್ನಾದರೂ ಕೂಡಲೇ ಪೂರ್ಣಗೊಳಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಬಸ್ರೂರು: ಸುತ್ತಮುತ್ತ ಮಳೆ
ಬಸ್ರೂರು, ಹಟ್ಟಿಕುದ್ರು, ಬಳ್ಕೂರು, ಕಂದಾವರ, ಕೋಣಿ, ಕಂಡ್ಲೂರು, ಗುಲ್ವಾಡಿ, ಜಪ್ತಿ, ಆನಗಳ್ಳಿ ಮುಂತಾದೆಡೆ ಸೋಮವಾರ ಮುಂಜಾನೆ ಸುಮಾರು ಒಂದು ಗಂಟೆ ಕಾಲ ಉತ್ತಮ ಮಳೆ ಸುರಿದಿದೆ.

Advertisement

Udayavani is now on Telegram. Click here to join our channel and stay updated with the latest news.

Next