ಗದಗ: ರಾಜ್ಯದಲ್ಲಿ ಕೋವಿಡ್-19 ಭೀತಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಂಬರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಮಕ್ಕಳಲ್ಲಿ ಕೋವಿಡ್ -19 ಭಯ ಹೋಗಲಾಡಿಸಿ, ಆತ್ಮವಿಶ್ವಾ ತುಂಬ ಬೇಕು ಎಂದು ಜಿಪಂ ಅಧ್ಯಕ್ಷ ರಾಜೂಗೌಡ ಕೆಂಚನಗೌಡ್ರ ಸೂಚಿಸಿದರು.
ಜಿಲ್ಲಾಡಳಿತ ಭವನದಲ್ಲಿರುವ ಜಿಪಂ ಅಧ್ಯಕ್ಷರ ಕೊಠಡಿಯಲ್ಲಿ ನಡೆದ ಎಸ್ ಎಸ್‌ಎಲ್‌ಸಿ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪರೀಕ್ಷಾ ಸಂದರ್ಭದಲ್ಲಿ ಮಕ್ಕಳು ಮತ್ತು ಪಾಲಕರು ಅನಾವಶ್ಯಕವಾಗಿ ಭಯಭೀತರಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಪರೀಕ್ಷಾ ಕೇಂದ್ರದಲ್ಲಿ ಹಾಗೂ ಕೊಠಡಿಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಮಕ್ಕಳಿಗೆ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಸೂಚಿಸಬೇಕು. ಶೈಕ್ಷಣಿಕ ಅಭಿವೃದ್ಧಿಗಾಗಿ ಹಿಂದಿನ ಯೋಜನೆಗಳನ್ನು ಮುಂದುವರಿ ಸುವುದಲ್ಲದೇ, ಮುಂದಿನ ದಿನಗಳಲ್ಲಿ ಹೊಸ ಹೊಸ ಯೋಜನೆಗಳನ್ನು ಕಾರ್ಯರೂಪಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಡಿಡಿಪಿಐ ಎನ್.ಎಚ್.ನಾಗೂರ ಮಾತನಾಡಿ, ಕೋವಿಡ್-19 ಹರಡುತ್ತಿರುವ ಹಿನ್ನೆಲೆಯಲ್ಲಿ ಮಕ್ಕಳ ಅರೋಗ್ಯದ ಹಿತದೃಷ್ಟಿಯಿಂದ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ ಪುನರಾವರ್ತಿತ ಸೇರಿ ಒಟ್ಟು 14,210 ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಲಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಪ್ರತಿ ಪರೀಕ್ಷಾ ಕೊಠಡಿಯೊಂದರಲ್ಲಿ 18 ವಿದ್ಯಾರ್ಥಿಗಳಿಗೆ ಮಾತ್ರ ಪರೀಕ್ಷೆ ಬರೆಯಲು ಆಸನಗಳ ವ್ಯವಸ್ಥೆ ಮಾಡಲಾಗಿದೆ ಎಂದರು.
ಪರೀಕ್ಷೆಗೂ ಮುನ್ನ ಪರೀಕ್ಷಾ ಕೇಂದ್ರಗಳಿಗೆ ಸ್ಯಾನಿಟೈಸರ್ ಸಿಂಪಡಿಸಲಾಗುತ್ತಿದ್ದು, ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳನ್ನು ಥರ್ಮಲ್ ಸ್ಕ್ರೀನಿಂಗ್‌ಗೆ ಒಳಪಡಿಸಲಾಗುವುದು. ಗದಗ, ಲಕ್ಕುಂಡಿ ಮತ್ತು ಕೋಟುಮಚಗಿಯ ನಿರ್ಬಂಧಿತ ಪ್ರದೇಶದಿಂದ 7 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದು, ನಿರ್ಬಂಧಿ ತ ಪ್ರದೇಶದಿಂದ ಆಗಮಿಸುವ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿಗಳ ವ್ಯವಸ್ಥೆ ಮಾಡಲಾಗಿದೆ ಎಂದರು.
ಜಿ.ಪಂ ಸದಸ್ಯ ಸಿದ್ದಲಿಂಗೇಶ್ವರ ಪಾಟೀಲ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಸ್. ಎಸ್.ಕೆಳದಿಮಠ, ಎಂ.ಎ.ರಡ್ಡೇರ, ಮಂಗಳಾ ತಾಪಸ್ಕರ್ ಸೇರಿದಂತೆ ವಿವಿಧ ಕ್ಷೇತ್ರ ಶಿಕ್ಷಣಾಧಿಕಾರಿಗಳು, ನೋಡಲ್ ಅಧಿಕಾರಿಗಳು ಇದ್ದರು.