ಮುಂಬೈ: ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಮಧ್ಯಂತರ ಬ್ಯಾಟಿಂಗ್ ಕೋಚ್ ಆಗಿ ಮುಂಬೈನ ಮಾಜಿ ಆಟಗಾರ ಅಮೋಲ್ ಮುಜುಂದಾರ್ ಆಯ್ಕೆಯಾಗಿದ್ದಾರೆ. ಈ ವಿಷಯವನ್ನು ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಸೋಮವಾರ ಖಚಿತ ಪಡಿಸಿದೆ.
ಭಾರತ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಮುಜುಂದಾರ್, ಹರಿಣಗಳಿಗೆ ಬ್ಯಾಟಿಂಗ್ ಕೋಚ್ ಆಗಿ ಕೆಲಸ ಮಾಡಲಿದ್ದಾರೆ.
ಅಮೋಲ್ ಮುಜುಂದಾರ್ 1994ರ ರಣಜಿ ಋತುವಿನಲ್ಲಿ ಮುಂಬೈ ತಂಡಕ್ಕೆ ಪದಾರ್ಪಣೆಯಾಗಿದ್ದರು. ರಣಜಿ ಕ್ರಿಕೆಟ್ ಇತಿಹಾಸದಲ್ಲೇ ಎರಡನೇ ಅತೀ ಹೆಚ್ಚು ರನ್ ಗಳಿಸಿರುವ ಖ್ಯಾತಿಯ ಮುಜುಂದಾರ್, 11167 ರನ್ ಗಳಿಸಿದ್ದಾರೆ.
2014ರಲ್ಲಿ ಪ್ರಥಮ ದರ್ಜೆ ಕ್ರಿಕೆಟ್ ನಿಂದ ದೂರವಾಗಿದ್ದ ಮುಜುಂದಾರ್, ನಂತರ ರಾಜಸ್ಥಾನ ರಾಯಲ್ಸ್, ಅಂಡರ್ 19, ಎನ್ ಸಿಎ ಮುಂತಾದ ತಂಡಗಳಿಗೆ ಕೋಚ್ ಆಗಿ ಸೇವೆ ಸಲ್ಲಿಸಿದ್ದರು. 2013ರಲ್ಲಿ ನೆದರ್ ಲ್ಯಾಂಡ್ ತಂಡದ ತರಬೇತುದಾರನಾಗಿದ್ದರು.
ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್ ಸರಣಿ ಅಕ್ಟೋಬರ್ ಎರಡರಂದು ಆರಂಭವಾಗಲಿದ್ದು, ಮೂರು ಟೆಸ್ಟ್ ಪಂದ್ಯಗಳು ವಿಶಾಖಪಟ್ಟಣ, ಪುಣೆ ಮತ್ತು ರಾಂಚಿಯಲ್ಲಿ ನಡೆಯಲಿದೆ.