ರಂಗಾಸಕ್ತರೆಲ್ಲರೂ ಸೇರಿ “ಅಮ್ಮಚ್ಚಿಯೆಂಬ ನೆನಪು’ ಎಂಬ ಚಿತ್ರ ಮಾಡಿದ್ದಾರೆ. ಚಿತ್ರ ಪೂರ್ಣಗೊಂಡಿದ್ದು, ಇತ್ತೀಚೆಗೆ ಆಡಿಯೋ ಸಿಡಿ ಬಿಡುಗಡೆ ಮಾಡಲಾಯಿತು. ಚಲನಚಿತ್ರ ಅಕಾಡೆಮಿ ಅಧ್ಯಕ್ಷ ನಾಗತಿಹಳ್ಳಿ ಚಂದ್ರಶೇಖರ್, ರಂಗಕರ್ಮಿ ಶ್ರೀನಿವಾಸ್ ಕಪ್ಪಣ್ಣ ಹಾಗು ಕಥೆಗಾರ್ತಿ ವೈದೇಹಿ ಅಂದಿನ ಆಕರ್ಷಣೆ. ಇದು ವೈದೇಹಿ ಅವರ ಕಾದಂಬರಿ. ಅದನ್ನು ಚಿತ್ರಕ್ಕೆ ಅಳವಡಿಸಿದ್ದು ನಿರ್ದೇಶಕಿ ಚಂಪಾ ಪಿ.ಶೆಟ್ಟಿ. ಈ ಹಿಂದೆ ಇದನ್ನಿಟ್ಟುಕೊಂಡು ನಾಟಕ ನಿರ್ದೇಶಿಸಿದ್ದ ಚಂಪಾ ಪಿ.ಶೆಟ್ಟಿ, ಈಗ ಸಿನಿಮಾ ಮಾಡಿದ್ದಾರೆ. ಅಂದು ಚಿತ್ರದ ಹಾಡೊಂದನ್ನು ಪ್ರದರ್ಶಿಸಲಾಯಿತು. ಹಾಡು ವೀಕ್ಷಿಸಿದ ವೈದೇಹಿ, “ನನ್ನ ಕಥೆ ದೃಶ್ಯರೂಪದಲ್ಲಿ ಅಷ್ಟೊಂದು ಚೆನ್ನಾಗಿ ಕಾಣುತ್ತಿರುವುದನ್ನು ನೋಡಿ ಖುಷಿಯಾಯ್ತು. ನಾನು ಹಿಂದೆ “ಅಕ್ಕು’ ನಾಟಕ ನೋಡಿ ಖುಷಿಪಟ್ಟಿದ್ದೆ. ಈ ಚಿತ್ರ ನನ್ನ ಕಥೆಯನ್ನೂ ದಾಟಿ ಹೋಗಿದೆ. ಕಥೆ ಬರೆಯುವಾಗ, ನಾನು ಕಂಡ ಜಗತ್ತು ಬೇರೆಯಾಗಿತ್ತು. ಚಿತ್ರ ನೋಡಿದಾಗ, ಇನ್ನೊಂದು ಮಜಲು ಎನಿಸಿದೆ. ಆಶಯವೆಲ್ಲ ಚೌಕಟ್ಟಿನೊಳಗೆ ಇಟ್ಟು ಸಿನಿಮಾ ಮಾಡಿದ್ದಾರೆ. ಇದೊಂದು ಹೊಸತನದ ನಿರೂಪಣೆ ಇರುವ ಚಿತ್ರ. ಕಥೆ ಇಟ್ಟು ಚಿತ್ರ ಮಾಡಿದ್ದಕ್ಕೆ ಸಾರ್ಥಕವೆನಿಸಿದೆ’ ಎಂಬುದು ವೈದೇಹಿ ಅವರ ಮಾತು.
ಕಪ್ಪಣ್ಣ ಅವರ ಪ್ರಕಾರ, “ಆಸಕ್ತಿ ಇರುವವರಿಗೆ ಮಾತ್ರ, ಕೃತಿ ಇಟ್ಟುಕೊಂಡು ಸಿನಿಮಾ ಕಟ್ಟಿಕೊಡಲು ಸಾಧ್ಯ. ಇಲ್ಲಿ ಶುದ್ಧ ಸಾಹಿತ್ಯ, ಶುದ್ಧ ಸಂಗೀತವಿದೆ. ಇಂತಹ ಚಿತ್ರಗಳು ಜನರನ್ನು ತಲುಪಬೇಕು. ಎಲ್ಲರ ಶ್ರಮ ಇಲ್ಲಿ ಎದ್ದು ಕಾಣುತ್ತಿದೆ. ರಂಗಾಸಕ್ತರೆಲ್ಲ ಸೇರಿ ಹಿಂದೆ “ಕಾಕನ ಕೋಟೆ’ ಚಿತ್ರ ಮಾಡಿದ್ದೆವು. ಆ ಚಿತ್ರ ಹಲವು ಪ್ರಶಸ್ತಿ ಪಡೆದಿತ್ತು. ಈ ಚಿತ್ರಕ್ಕೂ ರಂಗಾಸಕ್ತರ ಸ್ಪರ್ಶವಿದೆ. ಇದಕ್ಕೂ ಮೆಚ್ಚುಗೆ ಸಿಗಲಿ’ ಎಂದು ಶುಭಹಾರೈಸಿದರು ಶ್ರೀನಿವಾಸ್ ಕಪ್ಪಣ್ಣ.
ಆಡಿಯೋ ಸಿಡಿ ಬಿಡುಗಡೆ ಮಾಡಿದ ನಾಗತಿಹಳ್ಳಿ ಚಂದ್ರಶೇಖರ್ ಅವರಿಗೆ, ನಿರ್ದೇಶಕಿ ಚಂಪಾ ಪಿ.ಶೆಟ್ಟಿ ಅವರ ಪ್ರಯತ್ನ ಸಾರ್ಥಕ ಎನಿಸಿದೆಯಂತೆ. “ಒಂದು ಸಿನಿಮಾ ಹೇಗೆ ಮೂಡಿದೆ ಎಂಬುದಕ್ಕೆ ಒಂದು ಹಾಡು ಸಾಕು. ಇಲ್ಲಿ ಹಾಡೇ ಎಲ್ಲವನ್ನೂ ಹೇಳಿದೆ. ಸಾಹಿತ್ಯದ ವ್ಯಾಕರಣ ಬೇರೆ, ಸಿನಿಮಾ ವ್ಯಾಕರಣವೇ ಬೇರೆ. ಎರಡನ್ನೂ ಬ್ಯಾಲೆನ್ಸ್ ಮಾಡಿ ಸಿನಿಮಾ ಮಾಡುವುದು ಸುಲಭವಲ್ಲ. ಇಲ್ಲಿ ಛಾಯಾಗ್ರಹಣದ ಅದ್ಭುತ ಕೆಲಸ ಕಾಣುತ್ತದೆ. ಇಡೀ ಚಿತ್ರಕ್ಕೆ ಗೆಲುವು ಸಿಗಲಿ’ ಎಂದರು ನಾಗತಿಹಳ್ಳಿ ಚಂದ್ರಶೇಖರ್.
ನಿರ್ದೇಶಕಿ ಚಂಪಾ ಪಿ.ಶೆಟ್ಟಿ ಅಂದು ಹೆಚ್ಚು ಮಾತನಾಡಲಿಲ್ಲ. ಎಲ್ಲರ ಸಹಕಾರಕ್ಕೆ ಥ್ಯಾಂಕ್ಸ್ ಹೇಳಿದರು. “ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ. ಪ್ರೋತ್ಸಾಹ ಇರಲಿ’ ಎಂದಷ್ಟೇ ಹೇಳಿ ಸುಮ್ಮನಾದರು. ಸಂಗೀತ ನಿರ್ದೇಶಕ ಪಂಡಿತ್ ಕಾಶೀನಾಥ್ ಪತ್ತಾರ್ ಅವರಿಲ್ಲಿ ಸಿಕ್ಕ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡ ಬಗ್ಗೆ ವಿವರಿಸಿದರು. “ಒಂದೊಳ್ಳೆಯ ಚಿತ್ರದಲ್ಲಿ ನಾನಿದ್ದೇನೆ ಎಂಬ ಹೆಮ್ಮೆ ನನ್ನದು’ ಎಂಬುದು ಅವರ ಮಾತು. ರಾಜ್ ಬಿ. ಶೆಟ್ಟಿ, ಪ್ರಕಾಶ್ ಪಿ.ಶೆಟ್ಟಿ, ಗೀತಾ ಸೂರತ್ಕಲ್, ನಾಯಕಿ ವೈಜಯಂತಿ ಇತರರು “ಅಮ್ಮಚ್ಚಿಯ’ ನೆನಪಿಸಿಕೊಂಡರು.