ಚೆನ್ನೈ: ತಮಿಳುನಾಡಿನಲ್ಲಿ ಪಕ್ಷದ ಕಾರ್ಯಕರ್ತರು ಮುಂದಿನ ಐದು ವರ್ಷಗಳಲ್ಲಿ ಸ್ವಂತ ಬಲದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವಂತೆ ಮಾಡಬೇಕು. ಹೀಗೆಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಶನಿವಾರ ಚೆನ್ನೈನ ಹೊಟೇಲ್ ಒಂದರಲ್ಲಿ ಆಯೋಜಿಸಲಾಗಿದ್ದ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ಸಭೆಯಲ್ಲಿ ಅವರು ಈ ಅಂಶವನ್ನು ಒತ್ತಿ ಹೇಳಿದ್ದಾರೆ. ಎಐಎಡಿಎಂಕೆ ಜತೆಗೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಮೈತ್ರಿ ಮುಂದುವರಿಯುವುದಾಗಿ ಹೇಳಿಕೊಂಡ ಬೆನ್ನಲ್ಲಿಯೇ ಶಾ ಈ ಮಾತುಗಳನ್ನಾಡಿದ್ದಾರೆ ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.
ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡಿದ್ದರೂ, ನಮ್ಮ ಸ್ವಂತ ಬಲದಿಂದ ಗೆದ್ದು ರಾಜ್ಯದಲ್ಲಿ ಅಧಿಕಾರ ಪಡೆಯುವಂತಾಗಬೇಕು ಎಂದು ಶಾ ಹೇಳಿದ್ದಾರೆ.
ಇದನ್ನೂ ಓದಿ:ಕಾಂಗ್ರೆಸ್ 72 ವರ್ಷದಲ್ಲಿ ಇದೇ ಮೊದಲ ಬಾರಿಗೆ ಅತ್ಯಂತ ಸಂಕಷ್ಟದ ಸ್ಥಿತಿಗೆ ತಲುಪಿದೆ: ಆಜಾದ್
ಸ್ಟಾಲಿನ್ ತಿರುಗೇಟು: 2 ಜಿ ಹಗರಣ ಮತ್ತು ಕುಟುಂಬ ರಾಜಕಾರಣ ಮುಂದಿಟ್ಟುಕೊಂಡು ಟೀಕಿಸಿದ ಅಮಿತ್ ಶಾಗೆ ಡಿಎಂಕೆ ಅಧ್ಯಕ್ಷ ಎಂ.ಕೆ.ಸ್ಟಾಲಿನ್ ತಿರುಗೇಟು ನೀಡಿದ್ದಾರೆ. ಎಐಎಡಿಎಂಕೆ ಸರ್ಕಾರದ ಸಿಎಂ-ಡಿಸಿಎಂ ವಿರುದ್ಧವೇ ಗುರುತರ ಭ್ರಷ್ಟಾಚಾರದ ಆರೋಪಗಳಿವೆ. ಅದನ್ನು ಗಣನೆಗೆ ತೆಗೆದುಕೊಳ್ಳದೆ ವಿಧಾನಸಭೆ ಚುನಾವಣೆ ಗುರಿಯಾಗಿರಿಸಿಕೊಂಡು ನಮ್ಮ ವಿರುದ್ಧ ದೆಹಲಿ ಚಾಣಕ್ಯ ಟೀಕೆ ಮಾಡಿದ್ದಾರೆ. ಜನರಿಗೆ ಇಂಥ ಉಪಾಯಗಳು ಅರ್ಥವಾಗುತ್ತವೆ ಎಂದು ಹೇಳಿದ್ದಾರೆ.