ಜಮ್ಮು ಮತ್ತು ಕಾಶ್ಮೀರದ ಮೂರು ದಿನಗಳ ಭೇಟಿಯಲ್ಲಿರುವ ಅವರು ಶ್ರೀನಗರ ಸಮೀಪ ಇರುವ ಭಗವತಿ ನಗರ ಎಂಬಲ್ಲಿ ಆಯೋಜಿಸಲಾಗಿದ್ದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಗೃಹ ಸಚಿವರು ಈ ಘೋಷಣೆ ಮಾಡಿದ್ದಾರೆ. ಜಮ್ಮುವಿನಲ್ಲಿ ಸದ್ಯ ಇರುವ ವಿಮಾನ ನಿಲ್ದಾಣವನ್ನು ವಿಸ್ತರಿಸಲಾಗುತ್ತದೆ. ಈ ಸಂದರ್ಭದಲ್ಲಿ ಹೆಲಿಕಾಪ್ಟರ್ ಸೇವೆಗಳನ್ನು ಆರಂಭಿಸಲೂ ಸಾಧ್ಯವಾಗುತ್ತದೆ. ಇದರ ಜತೆಗೆ ಕೇಂದ್ರಾಡಳಿತ ಪ್ರದೇಶದ ಪ್ರತಿ ಜಿಲ್ಲೆಯಲ್ಲಿ ಕೂಡ ಹೆಲಿಕಾಪ್ಟರ್ ಸೇವೆಗಳನ್ನು ಆರಂಭಿಸಲೂ ಇದರಿಂದ ನೆರವಾಗಲಿದೆ ಎಂದರು ಗೃಹ ಸಚಿವ. ಇದರ ಜತೆಗೆ ಜಮ್ಮುವಿಗೆ ಮೆಟ್ರೋ ರೈಲು ಸೇವೆ ನೀಡುವ ಬಗ್ಗೆಯೂ ವಾಗ್ಧಾನ ಮಾಡಿದ್ದಾರೆ.
Advertisement
ತಡೆಯಲು ಸಾಧ್ಯವಿಲ್ಲ:ಕೇಂದ್ರಾಡಳಿತ ಪ್ರದೇಶದಲ್ಲಿ ಸದ್ಯ ನಡೆಯುತ್ತಿರುವ ಅಭಿವೃದ್ಧಿಯ ಸರಣಿ ಮತ್ತು ಶಾಂತಿ-ನೆಮ್ಮದಿಯನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಕೇಂದ್ರ ಗೃಹ ಸಚಿವರು ಪ್ರತಿಪಾದಿಸಿದ್ದಾರೆ. ಹಿಂದಿನ ಅವಧಿಗಳಲ್ಲಿ ಜಮ್ಮು ಮತ್ತು ಕಾಶ್ಮೀರ, ಲಡಾಖ್‌ಗಳಿಗೆ ಅಭಿವೃದ್ಧಿ ಕಾಮಗಾರಿಗಳಲ್ಲಿ ಅನ್ಯಾಯ ಉಂಟಾಗುತ್ತಿತ್ತು. ಆದರೆ, ಈಗ ಪರಿಸ್ಥಿತಿ ಹಾಗಿಲ್ಲ ಎಂದಿದ್ದಾರೆ.
ಕೇಂದ್ರಾಡಳಿತ ಪ್ರದೇಶಕ್ಕೆ ಈಗಾಗಲೇ 12 ಸಾವಿರ ಕೋಟಿ ರೂ. ಮೌಲ್ಯದ ಬಂಡವಾಳ ಹೂಡಿಕೆ ಪ್ರಸ್ತಾಪ ಬಂದಿದೆ. 2022ರ ವರ್ಷಾಂತ್ಯಕ್ಕೆ 51 ಸಾವಿರ ಕೋಟಿ ರೂ. ಮೌಲ್ಯದ ಬಂಡವಾಳ ಹೂಡಿಕೆ ಬರಲಿದೆ ಎಂದರು ಗೃಹ ಸಚಿವ. ಕಾಂಗ್ರೆಸ್ ಮತ್ತು ಎನ್‌ಸಿಪಿಯ ಹೆಸರು ಪ್ರಸ್ತಾಪಿಸದೆ, ಕೇಂದ್ರಾಡಳಿತ ಪ್ರದೇಶದಲ್ಲಿ ಅಭಿವೃದ್ಧಿ ಕುಂಠಿತವಾಗಲು ಕುಟುಂಬಗಳೇ ಕಾರಣ ಎಂದು ಟೀಕಿಸಿದರು. 2004ರಿಂದ 2014ರ ಅವಧಿಯಲ್ಲಿ 2,081 ಮಂದಿ ನಾಗರಿಕರು ಅಸುನೀಗಿದ್ದಾರೆ. ಅಂದರೆ ಸರಾಸರಿ ವರ್ಷವೊಂದಕ್ಕೆ 239 ಮಂದಿ ಅಸುನೀಗಿದಂತಾಗಿದೆ ಎಂದರು. ಇದಕ್ಕೂ ಮೊದಲು ಗೃಹ ಸಚಿವರು ಗುರುದ್ವಾರಕ್ಕೆ ಭೇಟಿ ನೀಡಿ, ಪ್ರಾರ್ಥನೆ ಸಲ್ಲಿಸಿದ್ದಾರೆ.
Related Articles
Advertisement
ಗುಂಡಿನ ಚಕಮಕಿ ವೇಳೆ ವ್ಯಕ್ತಿ ಸಾವುಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್‌ನ ಬಾಬಾಪೊರಾ ಎಂಬಲ್ಲಿ ಪೊಲೀಸರು ಮತ್ತು ಉಗ್ರರ ನಡುವಿನ ಗುಂಡಿನ ಚಕಮಕಿಯಲ್ಲಿ ವ್ಯಕ್ತಿ ಅಸುನೀಗಿದ್ದಾನೆ. ಬಾಬಾಪೋರಾದಲ್ಲಿ ಸಿಆರ್‌ಪಿಎಫ್ ಬೆಟಾಲಿಯನ್ ಒಂದರ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದರು. ಈ ಸಂದರ್ಭದಲ್ಲಿ ಯೋಧರೂ ಪ್ರತಿಯಾಗಿ ಗುಂಡು ಹಾರಿಸಿದರು. ಈ ಸಂದರ್ಭದಲ್ಲಿ ಆ್ಯಪಲ್ ಮಾರಾಟ ಮಾಡುತ್ತಿದ್ದ ಶಾಹಿದ್ ಅಹ್ಮದ್ ಎಂಬಾತ ಅಸುನೀಗಿದ್ದಾನೆ. ಈ ಪ್ರಕರಣದ ವಿರುದ್ಧ ತನಿಖೆಯಾಗಬೇಕು ಎಂದು ಪ್ರಮುಖ ರಾಜಕೀಯ ಪಕ್ಷಗಳು ಒತ್ತಾಯಿಸಿವೆ. 14ನೇ ದಿನಕ್ಕೆ:
ಪೂಂಛ್ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ 14ನೇ ದಿನವಾಗಿರುವ ಭಾನುವಾರ ಕೂಡ ಉಗ್ರರ ಜತೆಗೆ ಪೊಲೀಸರು ಮತ್ತು ಸೇನಾ ಪಡೆಗಳ ಜಂಟಿ ತಂಡದ ಗುಂಡಿನ ಚಕಮಕಿ, ಶೋಧ ಕಾರ್ಯ ಮುಂದುವರಿದಿದೆ. ಲಷ್ಕರ್-ಎ-ತೊಯ್ಬಾ ಉಗ್ರರ ಜತೆಗೆ ಈ ಕಾಳಗ ನಡೆದಿದೆ. ಇದೇ ಸಂದರ್ಭದಲ್ಲಿ ಜಿಯಾ ಮುಸ್ತಾಫಾ ಎಂಬ ಬಂಧಿತ ಉಗ್ರನೂ ಸಾವಿಗೀಡಾಗಿದ್ದಾನೆ. ಇಬ್ಬರು ಪೊಲೀಸ್ ಸಿಬ್ಬಂದಿ ಮತ್ತು ಸೇನೆಯ ಯೋಧರೊಬ್ಬರಿಗೆ ಗಾಯಗಳಾಗಿವೆ ಎಂದು ಪೊಲೀಸ್ ಇಲಾಖೆಯ ವಕ್ತಾರರು ತಿಳಿಸಿದ್ದಾರೆ. ಅ.11 ಮತ್ತು ಅ.14ರಂದು ಉಗ್ರರ ಜತೆಗಿನ ಕಾರ್ಯಾಚರಣೆ ವೇಳೆ ಒಂಭತ್ತು ಮಂದಿ ಯೋಧರು ಹುತಾತ್ಮರಾದ ಬಳಿಕ ಕಾರ್ಯಾಚರಣೆ ಬಿರುಸುಗೊಂಡಿದೆ.