ಜಕಾರ್ತಾ: ಭಾರತದ ಬಾಕ್ಸರ್ ಅಮಿತ್ ಪಾಂಗಾಲ್ ಏಶ್ಯನ್ ಗೇಮ್ಸ್ನಲ್ಲಿ ಚಿನ್ನದ ಪದಕ ಜಯಿಸಿದ್ದಾರೆ. 49 ಕೆಜಿ ಲೈಟ್ ಫ್ಲೈ ವಿಭಾಗದಲ್ಲಿ ಅಮಿತ್ ಬಂಗಾರದ ಬೇಟೆಯಾಡಿದ್ದಾರೆ. ಬ್ರಿಡ್ಜ್ ಗೇಮ್ ನಲ್ಲಿ ಭಾರತದ ಪುರುಷರ ತಂಡ ಬಂಗಾರದ ಪದಕ ಪಡೆದಿದೆ.
ಶನಿವಾರ ನಡೆದ ಫೈನಲ್ ನಲ್ಲಿ ಅಮಿತ್, ಉಜ್ಬೆಕಿಸ್ಥಾನದ ಹಸನ್ ಬಾಯ್ ದುಸ್ಮತೋವ್ ವಿರುದ್ದ ಗೆಲುವನ್ನು ತಮ್ಮದಾಗಿಸಿದರು. ದುಸ್ಮತೋವ್ ರಿಯೋ ಒಲಿಂಪಿಕ್ಸ್ ನ ಚಾಂಪಿಯನ್ ಎನ್ನುವುದನ್ನು ಇಲ್ಲಿ ಸ್ಮರಿಸಬಹುದು.
ಪ್ರಸ್ತುತ ನಡೆಯುತ್ತಿರುವ ಏಶ್ಯನ್ ಗೇಮ್ಸ್ ನಲ್ಲಿ ಭಾರತದ ಬೇರೆ ಯಾವುದೇ ಬಾಕ್ಸರ್ ಗಳು ಫೈನಲ್ ತಲುಪಿಲ್ಲ. ಭಾರತದ ವಿಕಾಸ್ ಕೃಷ್ಣನ್ ಕಣ್ಣಿನ ಗಾಯದಿಂದ ಸೆಮಿ ಫೈನಲ್ ಆಡದೆ ಕಂಚಿನ ಪದಕಕ್ಕೆ ತೃಪ್ತಿಪಟ್ಟಿದ್ದರು. 22ರ ಹರೆಯದ ಅಮಿತ್ ಕಳೆದ ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಬೆಳ್ಳಿ ಪದಕ ಪಡೆದಿದ್ದರೆ, ಬಲ್ಗೇರಿಯಾದಲ್ಲಿ ನಡೆದ ಸ್ಟ್ರಾಂಜಾ ಮೆಮೋರಿಯಲ್ ಟೂರ್ನಮೆಂಟ್ ನಲ್ಲಿ ಚಿನ್ನದ ಪದಕ ಪಡೆದಿದ್ದರು.
ಬ್ರಿಡ್ಜ್ ಗೇಮ್ ಚಿನ್ನ:ಶನಿವಾರ ನಡೆದ ಬ್ರಿಡ್ಜ್ ಗೇಮ್ ಫೈನಲ್ ನಲ್ಲಿ ಭಾರತದ ಪ್ರನಾಬ್ ಭರ್ದಾನ್ ಮತ್ತು ಶ್ರಿಬಾಂತ್ ಸರ್ಕಾರ್ ಚೀನಾ ಪುರುಷರ ತಂಡದ ವಿರುದ್ದ ಗೆಲುವು ಸಾಧಿಸಿದರು.
ಈ ಮೂಲಕ ಭಾರತದ ಪದಕ ಪಟ್ಟಿಯಲ್ಲಿ8 ನೇ ಸ್ಥಾನದಲ್ಲಿದೆ. 15 ಚಿನ್ನ, 23 ಬೆಳ್ಳಿ, 29 ಕಂಚಿನ ಪದಕಗಳು ಸೇರಿದಂತೆ ಒಟ್ಟು 67 ಪದಕಗಳು ಭಾರತದ ಈ ಏಶ್ಯನ್ ಗೇಮ್ಸ್ ನ ಸಾಧನೆ.