Advertisement

ಹ್ಯಾಪಿ ದಿವಾಳಿ; ಲಾಸ್‌ ಮಾಡಿಕೊಂಡವರೇ ಬಾಸ್‌ ಆಗೋದು!

07:18 PM Oct 13, 2019 | Sriram |

ಕೂಲಿಕಾರನೂ, ಸೂಟುಧಾರನೂ ದುಡ್ಡು ತಂದೊಡ್ಡುವ ಸಂಕಷ್ಟದ ಮುಂದೆ ಬೆಂಡಾಗಲೇಬೇಕು. ಕೆಲವರು ದಿವಾಳಿಯೆದ್ದು, ಸೋತು ಸುಣ್ಣವಾದರೆ, ಫೀನಿಕ್ಸ್‌ ಪಕ್ಷಿಯಂತೆ ಮೇಲೆದ್ದು ಬಂದವರೂ ಇದ್ದಾರೆ. ಅಂಥವರ ಅನುಭವ ನಮಗೆಲ್ಲರಿಗೂ ಪಾಠ!

Advertisement

ಕಷ್ಟ ಎನ್ನುವುದು ಮನುಷ್ಯರಿಗೆ ಬರದೇ ಮರಕ್ಕೆ ಬರುತ್ತಾ ಎಂಬ ಹಿರಿಯರ ಮಾತನ್ನು ನೀವೆಲ್ಲರೂ ಕೇಳಿರುತ್ತೀರಾ. ಈ ಜೀವನ ಎಷ್ಟು ಸೊಗಸೆಂದರೆ ಸರ್ವರಿಗೂ ಸಮಬಾಳು- ಸಮಪಾಲನ್ನು ತನ್ನದೇ ಆದ ರೀತಿಯಲ್ಲಿ ದಯಪಾಲಿಸುತ್ತದೆ. ಬೆಳಗ್ಗಿನಿಂದ ಸಂಜೆವರೆಗೆ ಬೆವರು ಹರಿಸಿ ದುಡಿವ ಕೂಲಿಕಾರನೂ, ಹವಾನಿಯಂತ್ರಿತ ಕೋಣೆಯಲ್ಲಿ ಕೂರುವ ಸೂಟುಧಾರನೂ ದುಡ್ಡಿನ ತಲೆನೋವಿನ ಮುಂದೆ ಬೆಂಡಾಗಲೇಬೇಕು. ಕೆಲವರು ಸೋತು ಸುಣ್ಣವಾದರೆ, ಫೀನಿಕ್ಸ್‌ ಪಕ್ಷಿಯಂತೆ ಮೇಲೆದ್ದು ಬಂದವರೂ ಇದ್ದಾರೆ. ಅಂಥ ಕೆಲ ಸೆಲಬ್ರಿಟಿಗಳ ಜೀವನದಿಂದ ನಾವೆಲ್ಲರೂ ಕಲಿಯಬಹುದಾದ್ದು ಬಹಳಷ್ಟಿದೆ.

1. ಅಮಿತಾಭ್‌ ಬಚ್ಚನ್‌
ಸಂಪತ್ತಿನ ಮೂಲ: ಸಿನಿಮಾ, ಟಿ.ವಿ ಕಾರ್ಯಕ್ರಮ, ಜಾಹೀರಾತು
ಉತ್ತುಂಗ: 1999ರಲ್ಲಿ ಅವರ ಸಂಸ್ಥೆಯ ಒಟ್ಟು ಮೌಲ್ಯ 60.52 ಕೋಟಿ ಇತ್ತು.
ಕುಸಿತ: ಅವರ ಅಮಿತಾಭ್‌ ಬಚ್ಚನ್‌ ಕಾರ್ಪೊರೇಷನ್‌ ಲಿಮಿಟೆಡ್‌(ಎಬಿಸಿಎಲ್‌) ಕಂಪನಿ ತುಂಬಾ ನಷ್ಟವನ್ನು ಅನುಭವಿಸಿತ್ತು. ಅಮಿತಾಭ್‌ ಕೈಗಳಲ್ಲಿ ಯಾವ ಸಿನಿಮಾ ಆಫ‌ರ್‌ಗಳೂ ಇರಲಿಲ್ಲ. ಹಲವು ಮೊಕದ್ದಮೆಗಳು ನ್ಯಾಯಾಲಯದಲ್ಲಿ ನಡೆಯುತ್ತಿದ್ದವು. ತೆರಿಗೆ ಕಟ್ಟದ ಕಾರಣ, ಮನೆಯನ್ನು ಅಡ ಇಡಬೇಕಾದ ಪರಿಸ್ಥಿತಿಯೂ ಬಂದಿತ್ತು.
ಕುಸಿತಕ್ಕೆ ಕಾರಣ : ಎಬಿಸಿಎಲ್‌ ಕಂಪನಿ ತನ್ನ ಸಾಮರ್ಥ್ಯವನ್ನು ಮೀರಿ ಕಾಂಟ್ರಾಕುrಗಳನ್ನು ಒಪ್ಪಿಕೊಂಡಿತ್ತು. ಮಿಸ್‌ ವರ್ಲ್ಡ್ ಸೌಂದರ್ಯ ಸ್ಪರ್ಧೆಯ ಆಯೋಜನೆ ಅವುಗಳಲ್ಲೊಂದು. ಈ ಸಂದರ್ಭದಲ್ಲಿ, ಮರುಪಾವತಿ ಮಾಡಲು ಸಾಧ್ಯವಾಗದಷ್ಟು ಮೊತ್ತವನ್ನು ಬ್ಯಾಂಕುಗಳಿಂದ ಸಾಲವಾಗಿ ಪಡೆದುಕೊಂಡಿತು. ಆಗ ಅಮಿತಾಭ್‌ ಅವರಿಗೆ ಹೇಳಿಕೊಳ್ಳುವಷ್ಟು ಆದಾಯವೂ ಬರುತ್ತಿರಲಿಲ್ಲ.
ಆರ್ಥಿಕ ಪಾಠಗಳು:
-ಆಳ ಅಗಲ ಗೊತ್ತಿಲ್ಲದೆ, ಸಂಶೋಧನೆ ಮಾಡದೆ ಯಾವುದೇ ಹೊಸ ಬಿಸಿನೆಸ್‌ಅನ್ನು ಪ್ರಾರಂಭಿಸಬಾರದು.
-ನಿವೃತ್ತಿ ಸಮಯಕ್ಕೆಂದು ಕೂಡಿಟ್ಟ ದುಡ್ಡನ್ನು ಮತ್ತಿನ್ಯಾವುದೋ ಕೆಲಸಕ್ಕೆ ಬಳಸಿಕೊಳ್ಳಬಾರದು.
-ಹೊಸ ವ್ಯಾಪಾರ ಶುರು ಮಾಡುವಾಗ ಕೈಯಲ್ಲಿ ಹಣ ಇಟ್ಟುಕೊಂಡೇ ಶುರುಮಾಡಬೇಕು. ನಾಳೆ ನಾಳಿದ್ದು ಹಣ ಬರುತ್ತದೆ ಎಂಬ ಹುಸಿ ನಂಬಿಕೆ ಮಾತ್ರದಿಂದ ಮಾತ್ರ ಶುರು ಮಾಡಬಾರದು.

ಸದ್ಯ ಅವರ ಕೈಯಲ್ಲಿ ಭರಪೂರ ಸಿನಿಮಾ ಅವಕಾಶಗಳಿವೆ. ಬ್ರ್ಯಾಂಡ್‌ ಮೌಲ್ಯವೂ ಹೆಚ್ಚಿದೆ. ಅವರ ಸದ್ಯದ ಮೌಲ್ಯ 2,866 ಕೋಟಿ ರೂ.

2. ಬೋರಿಸ್‌ ಬೆಕರ್‌, ಖ್ಯಾತ ಟೆನ್ನಿಸ್‌ ಆಟಗಾರ
ಸಂಪತ್ತಿನ ಮೂಲ: ಟೆನ್ನಿಸ್‌ ಗೆಲುವುಗಳು, ಜಾಹೀರಾತುಗಳು, ಪ್ರಾಯೋಜಕತ್ವ, ಪುಸ್ತಕ ಬರವಣಿಗೆ
ಉತ್ತುಂಗ: ವರ್ಲ್ಡ್ ನಂ. 1 ಪಟ್ಟ, ವಿಂಬಲ್ಡನ್‌ ಗೆದ್ದ ಅತಿ ಕಿರಿಯ ಆಟಗಾರ(17) ಎಂಬ ಖ್ಯಾತಿ, ಅತ್ಯಂತ ಶ್ರೀಮಂತ ಟೆನ್ನಿಸ್‌ ಆಟಗಾರ, 1,400 ಕೋಟಿ ಮೌಲ್ಯ
ಕುಸಿತ: 2017ರಲ್ಲಿ ದಿವಾಳಿ, 2019ರಲ್ಲಿ ಅವರು ಗೆದ್ದ 82 ಟ್ರೋಫಿಗಳನ್ನು ಒತ್ತಾಯಪೂರ್ವಕವಾಗಿ ಮಾರಾಟ ಮಾಡಿಸಲಾಯಿತು. 617 ಕೋಟಿ ಸಾಲ.
ಕುಸಿತಕ್ಕೆ ಕಾರಣ : ವೀಕ್ಷಕ ವಿವರಣೆಗಾರ ಆಗಿದ್ದು, ಪೋಕರ್‌ ಆಟ, ಕಡಿವಾಣವಿಲ್ಲದ ವೆಚ್ಚ, ಸಾಲ
ಆರ್ಥಿಕ ಪಾಠಗಳು:
ನಿರ್ಲಕ್ಷಿಸಿದ ಮಾತ್ರಕ್ಕೆ ಸಾಲ ಮಾಯವಾಗದು. ಸಮಯ ಹೋದಷ್ಟೂ ಅವು ದೊಡ್ಡದಾಗುತ್ತಾ ಹೋಗುವವು. ಸಾಲವನ್ನು ಮೊದಲು ತೀರಿಸಿಕೊಳ್ಳಬೇಕು
ಗಳಿಕೆಗಿಂತ ಹೆಚ್ಚು ಖರ್ಚು ಮಾಡಬಾರದು. ಕೋಟಿ ರೂಪಾಯಿ ಸಂಪಾದಿಸಿದರೂ, ನೂರು ರೂಪಾಯಿ ಸಂಪಾದಿಸಿದರೂ ಅನ್ವಯಿಸುವ ನಿಯಮವಿದು. ಹಾಗೊಂದು ವೇಳೆ ಈ ನಿಯಮವನ್ನು ಪಾಲಿಸದಿದ್ದಲ್ಲಿ ಸಂಪತ್ತು ಬಹಳ ಕಾಲ ಉಳಿಯದು.

Advertisement

ಟೆನ್ನಿಸ್‌ನಲ್ಲಿ ಸದ್ಯ ಮಿಂಚುತ್ತಿರುವ ಜೋಕೋವಿಕ್‌ಗೆ ತರಬೇತುದಾರರಾಗಿದ್ದರು. ಮಾಡಿಟ್ಟ ಆಸ್ತಿ ಉಳಿಸಿಕೊಳ್ಳಲಾಗದಿದ್ದರೂ ಸಾಲದ ಶೂಲದಿಂದ ಹೊರಬಂದ ಸಂತೃಪ್ತಿ,.

3. ವಿಜಯ್‌ ಮಲ್ಯ
ಸಂಪತ್ತಿನ ಮೂಲ: ಯುಬಿ ಗ್ರೂಪಿನಡಿ ಇದ್ದ 60ಕ್ಕೂ ಹೆಚ್ಚು ಸಂಸ್ಥೆಗಳು
ಉತ್ತುಂಗ: ಯುಬಿ ಚೇರ್ಮನ್‌, 2007ರಲ್ಲಿ ಸಂಸ್ಥೆಯ ಮೌಲ್ಯ 11,500 ಕೋಟಿ ರೂ.
ಕುಸಿತ: 9,000 ಕೋಟಿ ರು. ಸಾಲ ಬಾಕಿ, ವಿದೇಶಕ್ಕೆ ಪರಾರಿ, ವಂಚನೆ ಮತ್ತು ಹವಾಲಾ ಆರೋಪ
ಕುಸಿತಕ್ಕೆ ಕಾರಣ : ಕಿಂಗ್‌ಫಿಷರ್‌ ಏರ್‌ಲೈನ್ಸ್‌ ನಷ್ಟದಲ್ಲಿದ್ದರೂ ಸಾಲ ಪಡೆದು ನಡೆಸಿದ್ದು, ಕಷ್ಟಕರ ಸಮಯದಲ್ಲೂ ಐಷಾರಾಮಿ ಜೀವನ ನಡೆಸಿದ್ದು
ಆರ್ಥಿಕ ಪಾಠಗಳು:
ನಷ್ಟದಲ್ಲಿ ನಡೆಯುತ್ತಿರುವ ಬಿಸಿನೆಸ್‌ ಮೇಲೆ ಭಾವಾನಾತ್ಮಕ ನಂಟು ಇರಿಸಿಕೊಳ್ಳಬಾರದು ತೀರಿಸಲು ಆಗುವುದಿಲ್ಲ ಎಂದು ಗೊತ್ತಿದ್ದ ಮೇಲೆ ಸಾಲ ಪಡೆಯಲೇಬಾರದು

ವಿದೇಶದಲ್ಲಿ ಜೀವನ. ಸಾಲ ಇನ್ನೂ ಉಳಿದಿದೆ. ಅಲ್ಲದೆ ಅವರ ವಿರುದ್ಧದ ಮೊಕದ್ದಮೆಗಳ ವಿಚಾರಣೆ ಇನ್ನೂ ಜಾರಿಯಲ್ಲಿದೆ.

4. ನಿಕೊಲಸ್‌ ಕೇಜ್‌, ಹಾಲಿವುಡ್‌ ನಟ
ಸಂಪತ್ತಿನ ಮೂಲ: ಸಿನಿಮಾ
ಉತ್ತುಂಗ: ಹಾಲಿವುಡ್‌ನ‌ಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟನೆಂಬ ಖ್ಯಾತಿ, ಜಗತ್ತಿನಾದ್ಯಂತ 15 ಬಂಗಲೆ ಮತ್ತು ಐಷಾರಾಮಿ ಕಾರುಗಳು
ಕುಸಿತ: 2009ರಲ್ಲಿ 100 ಕೋಟಿ ರೂ.ಯನ್ನು ತೆರಿಗೆ ರೂಪದಲ್ಲಿ ಕಟ್ಟಲು ಹಲವು ಆಸ್ತಿ ಮಾರಬೇಕಾಯಿತು
ಕುಸಿತಕ್ಕೆ ಕಾರಣ : ಐಷಾರಾಮಿ ಜೀವನಶೈಲಿ, ಡೈನೋಸಾರ್‌ ತಲೆ ಬುರುಡೆ ಖರೀದಿಯಂಥ ಅನಗತ್ಯ ದುಂದುವೆಚ್ಚ, ದ್ವೀಪ ಖರೀದಿ, ದುರ್ಬಲ ಹಣ ಹೂಡಿಕೆ
ಆರ್ಥಿಕ ಪಾಠಗಳು:
ಎಷ್ಟೇ ಚೆನ್ನಾಗಿ ದುಡಿಯುತ್ತಿದ್ದರೂ ಹಣವನ್ನು ಎಲ್ಲಾದರೂ ಹೂಡಿಕೆ ಮಾಡಿದರೆ ಮಾತ್ರ ದುಡ್ಡು ಬೆಳೆಯುವುದು, ಉಳಿಯುವುದು

ದಶಕಗಳ ಹಿಂದೆ ಆತನ ಬಳಿ ಸಾವಿರ ಕೋಟಿಯಷ್ಟು ಸಂಪತ್ತು ಇತ್ತು. ನಂತರ ಎಲ್ಲವನ್ನೂ ಮರಳಿಸಬೇಕಾಗಿ ಬಂದು ಈಗ ಆತನ ಬಳಿ ಇರುವ ಸಂಪತ್ತು ಎರಡೂವರೆ ಕೋಟಿ ರೂ. ಆಗೊಮ್ಮೆ ಈಗೊಮ್ಮೆ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

5. ಐಕ್‌ ಬಟಿಸ್ಟಾ, ಉದ್ಯಮಿ
ಸಂಪತ್ತಿನ ಮೂಲ: ಇಬಿಎಕ್ಸ್‌ ಕಂಪನಿ ಮಾಲೀಕತ್ವ, ಗಣಿಗಾರಿಕೆ, ಇಂಧನ ವಲಯದಲ್ಲಿ ಹೂಡಿಕೆ
ಉತ್ತುಂಗ: 2012ರಲ್ಲಿ ಬ್ರೆಝಿಲ್‌ನ ನಂ. 1 ಶ್ರೀಮಂತ ಎಂಬ ಪಟ್ಟ, ಜಗತ್ತಿನ 7 ನೇ ಅತಿ ಶ್ರೀಮಂತ, ಆಗಿನ ಸಂಪತ್ತಿನ 2.5 ಲಕ್ಷ ಕೋಟಿ ರೂ.
ಕುಸಿತ: ಈಗ ಆತನ ಸಂಪತ್ತಿನ ಮೌಲ್ಯ ಸೊನ್ನೆಯಷ್ಟೇ ಅಲ್ಲ ನೆಗೆಟಿವ್‌, 8.600 ಕೋಟಿ ರೂ. ಸಾಲ, ಲಂಚ ನೀಡಿದ ಆರೋಪದಡಿ 30 ವರ್ಷ ಸೆರೆವಾಸ
ಕುಸಿತಕ್ಕೆ ಕಾರಣ : ಆತನ ಸಂಸ್ಥೆಗಳು ನೈಜ ಆದಾಯವನ್ನು ಮರೆಮಾಚಿ ಹೆಚ್ಚಿನ ಲಾಭಗಳಿಕೆಯನ್ನು ತೋರಿಸಿದ್ದವು, ಆತನ ಸಂಸ್ಥೆಯ ಶೇರುಗಳು ಶೇಕಡಾ 99ರಷ್ಟು ಮೌಲ್ಯ ಕಳೆದುಕೊಂಡವು
ಆರ್ಥಿಕ ಪಾಠಗಳು:
ಕಂಪನಿಯ ಮಾಲೀಕ ಇರಲಿ, ಉದ್ಯೋಗಿಯೇ ಆಗಿರಲಿ ತನ್ನ ಕೈಲಾಗುವಷ್ಟನ್ನೇ ಆಶ್ವಾಸನೆ ನೀಡಬೇಕು.

ಬ್ರೆಝಿಲ್‌ನ ತೆರಿಗೆ ಇಲಾಖೆ ಆತನಿಗೆ 950 ಕೋಟಿ ದಂಡ ವಿಧಿಸಿದೆ. ನ್ಯಾಯಾಲಯ ವಿಧಿಸಿರುವ 30 ವರ್ಷಗಳ ಸೆರೆವಾಸದಿಂದ ತಪ್ಪಿಸಿಕೊಳ್ಳುವ ಸಲುವಾಗಿ ಮೇಲ್ಮನವಿ ಸಲ್ಲಿಸಿದ್ದಾನೆ. ಗೃಹಬಂಧನದಿಂದ, ಜೈಲುವಾಸ ಮತ್ತೆ ಜೈಲಿನಿಂದ ಬಿಡುಗಡೆಯಾಗಿ ಗೃಹಬಂಧನ ಹೀಗೆ ಸಾಗಿದೆ ಆತನ ಜೀವನ..

6. ಮೈಕ್‌ ಟೈಸನ್‌, ವಿಶ್ವವಿಖ್ಯಾತ ಬಾಕ್ಸರ್‌
ಸಂಪತ್ತಿನ ಮೂಲ: ಪಂದ್ಯಾವಳಿಗಳಲ್ಲಿ ಗೆದ್ದ ಹಣ, ಸಿನಿಮಾ, ಟಿ.ವಿ ಕಾರ್ಯಕ್ರಮಗಳು ಮತ್ತು ಪುಸ್ತಕ
ಉತ್ತುಂಗ: 20ನೇ ವಯಸ್ಸಿನಲ್ಲಿ ಚಾಂಪಿಯನ್‌ ಪಟ್ಟ, ವೃತ್ತಿಯಿಂದ ಗಳಿಸಿದ ದುಡ್ಡು 4,910 ಕೋಟಿ ರೂ.
ಕುಸಿತ: 2003ರಲ್ಲಿ ಮಾಜಿ ಪತ್ನಿ ಮತ್ತು ವಕೀಲರಿಗೆ ಒಟ್ಟು 193 ಕೋಟಿ ರೂ. ಪಾವತಿಸಲಾಗದೆ ದಿವಾಳಿಯೆದ್ದಿದ್ದ,
ಕುಸಿತಕ್ಕೆ ಕಾರಣ : ಐಷಾರಾಮಿ ಜೀವನಶೈಲಿ, 110 ಲಕ್ಷುರಿ ಕಾರುಗಳು, ಹುಲಿ ಸಾಕಣೆ, ಬಂಗಲೆಗಳ ಖರೀದಿ, ಮಾದಕವಸ್ತು ವ್ಯಸನ, ಮೊಕದ್ದಮೆಗಳು
ಆರ್ಥಿಕ ಪಾಠಗಳು:
ಮದ್ಯ, ಸಿಗರೇಟು, ಜೂಜೇ ಇರಲಿ, ಮಾದಕ ವಸ್ತುಗಳೇ ಇರಲಿ ಮುಂತಾದ ವ್ಯಸನಗಳಿಂದ ದೂರವಿರಬೇಕು. ಅದು ವೃತ್ತಿಜೀವನ ಮತ್ತು ಸಂಪತ್ತನ್ನು ತಿಂದುಹಾಕುತ್ತದೆ ಹೂಡಿಕೆಯನ್ನು ಮತ್ತೂಬ್ಬರು ನೋಡಿಕೊಳ್ಳುತ್ತಿದ್ದರೂ ನಿಗಾ ವಹಿಸಿಲೇಬೇಕು

ದಿವಾಳಿ ಎಂದು ಘೋಷಣೆಯಾದ ಬಳಿಕ ಹೊಸ ಬದುಕಿಗೆ ಮುನ್ನುಡಿ ಬರೆದರು. ಜೀವನಶೈಲಿಯಲ್ಲಿ ಮಹತ್ತರ ಬದಲಾವಣೆಗಳನ್ನು ಮಾಡಿಕೊಂಡರು. ನಟನಾಗಿ, ಉದ್ಯಮಿಯಾಗಿ ಮನರಂಜನಾ ಉದ್ಯಮದಲ್ಲಿ ನಿರೂಪಕನಾಗಿ ತನ್ನನ್ನು ತಾನು ತೊಡಗಿಸಿಕೊಂಡು ಆದಾಯ ಮೂಲಗಳನ್ನು ಹೆಚ್ಚಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next