ಹೊಸದಿಲ್ಲಿ : ಬಾಲಿವುಡ್ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ಅವರು ಟ್ವಿಟರ್‌ನಲ್ಲಿ ರಾಹುಲ್ ಗಾಂಧಿ ಸಹಿತ ಹಲವು ಕಾಂಗ್ರೆಸ್ ನಾಯಕರನ್ನು ಫಾಲೋ ಮಾಡುತ್ತಿರುವುದು ತೀವ್ರ ಊಹಾಪೋಹಗಳಿಗೆ ಎಡೆ ಮಾಡಿಕೊಟ್ಟಿದೆ.
ಅಮಿತಾಭ್ ಅವರು ಈ ಹಿಂದೆ ಕಾಂಗ್ರೆಸ್ ಪಕ್ಷದೊಂದಿಗೆ ಹಾಗೂ ನೆಹರೂ – ಗಾಂಧಿ ಕುಟುಂಬದೊಂದಿಗೆ ಅನ್ಯೋನ್ಯವಾಗಿದ್ದರು ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಆದರೆ ಅವರಿಂದ ದೂರವಾಗಿ ಸಾಕಷ್ಟು ಸಮಯವೇ ಆಗಿರುವಾಗ ಈಗ ಏಕಾಏಕಿ ಮತ್ತೆ ಕಾಂಗ್ರೆಸ್ ಹಾಗೂ ಅದರ ನಾಯಕರ ಬಗ್ಗೆ ಟ್ಟಿಟರ್ ನಲ್ಲಿ ಅಮಿತಾಭ್ ಆಸಕ್ತಿ ತೋರುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ. ರಾಜಕೀಯ ವಲಯಗಳಲ್ಲಿ ಹಲವು ಊಹಾಪೋಹಗಳನ್ನು ಸೃಷ್ಟಿಸಿದೆ.
ಅಮಿತಾಭ್ ಅವರು ಟ್ವಿಟರ್‌ನಲ್ಲಿ ರಾಹುಲ್ ಗಾಂಧಿ ಅವರನ್ನು ಮಾತ್ರವಲ್ಲದೆ ಕಾಂಗ್ರೆಸ್‌ನ ಇತರ ಹಿರಿಯ ನಾಯಕರಾಗಿರುವ ಪಿ ಚಿದಂಬರಂ, ಕಪಿಲ್ ಸಿಬಲ್, ಅಹ್ಮದ್ ಪಟೇಲ್, ಅಶೋಕ್ ಗೆಹಲೋತ್, ಅಜಯ್ ಮಾಕನ್, ಜ್ಯೋತಿರಾದಿತ್ಯ ಸಿಂಧ್ಯಾ, ಸಚಿನ್ ಪೈಟಲ್ ಮತ್ತು ಸಿಪಿ ಜೋಷಿ ಅವರನ್ನು ಈ ತಿಂಗಳಿಂದ ಟ್ವಿಟರ್‌ನಲ್ಲಿ ಫಾಲೋ ಮಾಡುತ್ತಿದ್ದಾರೆ.
ಬಚ್ಚನ್ ಅವರಿಗೆ ಟ್ವಿಟರ್‌ನಲ್ಲಿ 33.1 ದಶಲಕ್ಷ ಫಾಲೋವರ್ಗಳಿದ್ದಾರೆ; ಆದರೆ ಅವರು ಫಾಲೋ ಮಾಡುತ್ತಿರುವವರ ಸಂಖ್ಯೆ ಕೇವಲ 1,689.
ವಿಶೇಷವೆಂದರೆ ಅಮಿತಾಭ್ ಟ್ವಿಟರ್‌ನಲ್ಲಿ ಇತರ ಪಕ್ಷಗಳ ನಾಯಕರನ್ನೂ ಫಾಲೋ ಮಾಡುತ್ತಿದ್ದಾರೆ. ಅವರಲ್ಲಿ ಮುಖ್ಯರೆಂದರೆ ಲಾಲು ಪ್ರಸಾದ್ ಯಾದವ್, ಮೀಸಾ ಭಾರತಿ, ನಿತೀಶ್ ಕುಮಾರ್, ಸೀತಾರಾಮ್ ಯೆಚ್ಚಾರಿ, ಉಮರ್ ಅಬ್ದುಲ್ಲಾ, ಸುಪ್ರಿಯಾ ಸುಳೆ, ಆಪ್ ನಾಯಕರಾಗಿರುವ ಮನೀಶ್ ಸಿಸೋಡಿಯಾ, ಗೋಪಾಲ್ ರಾಯ್, ಸಂಜಯ್ ಸಿಂಗ್, ಕುಮಾರ್ ವಿಶ್ವಾಸ್, ಆಶಿಷ್ ಖೇತಾನ್.
ಈ ಪೈಕಿ ಮನೀಶ್ ತಿವಾರಿ ಅವರು ಅಮಿತಾಭ್‌ಗೆ ವಿಶೇಷ ಥ್ಯಾಂಕ್ಸ್ ಹೇಳಿದ್ದಾರೆ. 70 ಮತ್ತು 80ರ ದಶಕದಲ್ಲಿ ನಿಮ್ಮ ಚಿತ್ರಗಳ ಮೊದಲ ದಿನದ ಮೊದಲ ಪ್ರದರ್ಶವನ್ನು ಕಾಣುತ್ತಾ ಬಂದವನು ನಾನು; ಚಂಡೀಗಢದಲ್ಲಿ ಆಗ ಬಾಲ್ಕನಿ ಟಿಕೇಟ್ ದರ ಕೇವಲ 3 ರೂ. ಈಗ ಅದು ನಂಬಲಸಾಧ್ಯ ಎಂದು ತಿವಾರಿ ಟ್ವೀಟ್ ಮಾಡಿದ್ದಾರೆ.