ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಕನ್ನಡ, ತೆಲುಗು, ತಮಿಳು, ಮರಾಠಿ ಮತ್ತು ಹಿಂದಿ ಭಾಷೆಯ ಸಿನಿಮಾಗಳನ್ನು ನಿರ್ಮಿಸಿದ್ದಾರೆ. ಇದು ಎಲ್ಲರಿಗೂ ಗೊತ್ತಿರುವ ವಿಷಯ. ಈಗ ಹೊಸ ಸುದ್ದಿಯೆಂದರೆ, ಮುಂದಿನ ವರ್ಷ ಬಾಲಿವುಡ್‌ನ ಖ್ಯಾತ ನಟ ಅಮಿತಾಭ್ ಬಚ್ಚನ್ ಅವರ ಚಿತ್ರವೊಂದನ್ನು ನಿರ್ಮಿಸುವ ಯೋಚನೆ ಮಾಡಿದ್ದಾರೆ. ಹೌದು, ಸದ್ಯಕ್ಕೆ ರಾಧಿಕಾ ಪಂಡಿತ್ ಹಾಗೂ ನಿರೂಪ್ ಭಂಡಾರಿ ಅಭಿನಯದ ಚಿತ್ರವೊಂದನ್ನು ನಿರ್ಮಿಸುತ್ತಿರುವ ರಾಕ್‌ಲೈನ್, ಆ ಚಿತ್ರವನ್ನೀಗ ಮುಗಿಸುವ ಹಂತಕ್ಕೆ ತಂದಿದ್ದಾರೆ.
ಹೆಸರಿಡದ ಆ ಚಿತ್ರ ಡ್ರಗ್ಸ್ ಮಾಫಿಯಾ ಕುರಿತು ಕಥೆ ಹೊಂದಿದೆ. ಈ ಸಿನಿಮಾ ಬಳಿಕ ಅವರು ಹಿಂದಿಯಲ್ಲಿ ಸಿನಿಮಾ ನಿರ್ಮಾಣ ಮಾಡಲಿದ್ದು, ಅದು ಅಮಿತಾಭ್ ಬಚ್ಚನ್ ಅಭಿನಯದಲ್ಲಿ ನಿರ್ಮಾಣ ಮಾಡಬೇಕೆಂಬ ಯೋಚನೆ ಮಾಡಿದ್ದಾರೆ. ಈ ಕುರಿತು ಸ್ಪಷ್ಟಪಡಿಸುವ ರಾಕ್‌ಲೈನ್ ವೆಂಕಟೇಶ್, ಸದ್ಯಕ್ಕೆ ಆ ಕುರಿತು ಮಾತುಕತೆ ನಡೆಯುತ್ತಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಮುಂದಿನ ವರ್ಷ ಅಮಿತಾಭ್ ಬಚ್ಚನ್ ಚಿತ್ರ ನಿರ್ಮಾಣವಾಗಲಿದೆ.
ಬಾಲಿವುಡ್ ಖ್ಯಾತ ನಿರ್ದೇಶಕ ಅನುರಾಗ್ ಕಶ್ಯಪ್ ಅವರ ನಿರ್ದೇಶನದಲ್ಲೂ ಇನ್ನೊಂದು ಚಿತ್ರವನ್ನು ಹಿಂದಿಯಲ್ಲಿ ನಿರ್ಮಾಣ ಮಾಡಲಿದ್ದೇನೆ. ಆದರೆ, ಅದು ಯಾವಾಗ, ಏನು, ಎತ್ತ ಎಂಬುದು ಗೊತ್ತಿಲ್ಲ. ಎಲ್ಲವೂ ಈಗ ಮಾತುಕತೆಯ ಹಂತದಲ್ಲಿದೆ. ಮುಂದಿನ ದಿನಗಳಲ್ಲಿ ಅದಕ್ಕೊಂದು ಸ್ಪಷ್ಟ ರೂಪ ಸಿಗಲಿದೆ’ ಎಂಬುದು ರಾಕ್‌ಲೈನ್ ವೆಂಕಟೇಶ್ ಮಾತು. ಇನ್ನು, ಕಲಾವಿದರ ಸಂಘದ ಕಟ್ಟಡ ಕುರಿತು ಹೇಳಿಕೊಳ್ಳುವ ರಾಕ್‌ಲೈನ್, “ಆ ಕಟ್ಟಡದ ಮೇಲ್ಭಾಗದಲ್ಲಿ ಥಿಯೇಟರ್ ಇದ್ದು, ಕೆಳಭಾಗದಲ್ಲಿ ದೊಡ್ಡ ಜಿಮ್ ಮಾಡಬೇಕು ಎಂಬುದು ಅಂಬರೀಷ್ ಅವರ ಆಸೆ.
ಅದಕ್ಕಾಗಿಯೇ ದೊಡ್ಡ ಜಾಗ ಬಿಡಲಾಗಿದೆ. ಅಲ್ಲೊಂದು ದೊಡ್ಡ ಜಿಮ್ ವ್ಯವಸ್ಥೆ ಕಲ್ಪಿಸಿ, ಕಲಾವಿದರು ಫಿಟ್ ಆಗಲು ಅನುಕೂಲ ಮಾಡಿಕೊಡಬೇಕು ಎಂಬ ನಿಟ್ಟಿನಲ್ಲಿ ಅಂಬರೀಷ್ ಯೋಚನೆ ಮಾಡಿದ್ದಾರೆ. ಅದಕ್ಕೆ ತಯಾರಿ ನಡೆಯುತ್ತಿದೆ. ಕಲಾವಿದರ ಸಂಘದ ಕಟ್ಟಡ ರೂಪುಗೊಳ್ಳಲು ಅಂಬರೀಷ್ ಅವರ ಸಹಕಾರ ಮರೆಯುವಂತಿಲ್ಲ. ಅದಕ್ಕೊಂದು ಘಟನೆ ಹೇಳಲೇಬೇಕು. ಕಟ್ಟಡ ಪೂರ್ಣಗೊಂಡಿರಲಿಲ್ಲ. ಕಾರಣ ಅದಕ್ಕೆ ಹಣದ ಅಗತ್ಯವಿತ್ತು.
ಒಮ್ಮೆ ಅಂಬರೀಷ್ ಅವರು, “ಕಟ್ಟಡ ಕೆಲಸ ಹೇಗೆ ನಡೆಯುತ್ತಿದೆ, ಎಲ್ಲಿಯವರೆಗೆ ಬಂದಿದೆ ‘ ಆಂತ ಕೇಳಿದ್ರು. ಆಗ ನಾನು ಎರಡು ಕೋಟಿ ಹಣ ಇದ್ದರೆ, ಕಟ್ಟಡ ಕೆಲಸ ಪೂರ್ಣಗೊಳ್ಳುತ್ತೆ ಅಂದೆ. ಆಗ ನೋಡೋಣ ಅಂದವರು, ಮರುದಿನ ನನಗೆ ಫೋನ್ ಮಾಡಿ, ಮಧ್ಯಾಹ್ನ 12 ಗಂಟೆಗೆ ಕಟ್ಟಡದ ಬಳಿ ಬಾ, ಯಾರಿಗೂ ಹೇಳಬೇಡ ಅಂದರು. ನಾನು ಮರುದಿನ ಬೇಗನೇ ಅಲ್ಲಿಗೆ ಹೋಗಿದ್ದೆ. ನೋಡಿದರೆ, ಅಲ್ಲೊಬ್ಬ ಪೊಲೀಸ್ ಓಡೋಡಿ ಬಂದರು. ಯಾರು ಅಂತ ನೋಡುತ್ತಿದ್ದಂತೆಯೇ, ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಕರೆದುಕೊಂಡು ಬಂದು, ಕಟ್ಟಡ ತೋರಿಸಿದರು.
ಇದಕ್ಕೆ ಹಣ ಕಮ್ಮಿ ಇದೆ. ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಿ ಅಂತ ಕೇಳಿದರು. ಸಿಎಂ ಸಿದ್ಧರಾಮಯ್ಯ ಮನವಿಗೆ ಸ್ಪಂದಿಸಿ ಅನುದಾನ ಬಿಡುಗಡೆ ಮಾಡಿದರು. ಹೀಗೆ ಅಂಬರೀಷ್ ಅವರ ಸಹಾಯ ಇರದಿದ್ದರೆ ಕಟ್ಟಡ ಪೂರ್ಣಗೊಳ್ಳುತ್ತಲೇ ಇರಲಿಲ್ಲ’ ಎನ್ನುವ ರಾಕ್‌ಲೈನ್ ವೆಂಕಟೇಶ್, ಉತ್ತರ ಭಾಗದಲ್ಲಿ ಪುಣೆ ಫಿಲ್ಮ್ ಇನ್ಸ್‌ಟಿಟ್ಯೂಟ್ ಇದ್ದು, ಅದರ ಶಾಖೆಯೊಂದನ್ನು ದಕ್ಷಿಣ ಭಾಗದಲ್ಲೂ ಆರಂಭಿಸಬೇಕೆಂಬ ಆಸೆ ಇದೆ.
ಈ ಭಾಗದ ಪ್ರತಿಭಾವಂತರಿಗೆ, ಕಲಾವಿದರಿಗೆ ತರಬೇತಿ ಕಲ್ಪಿಸುವ ನಿಟ್ಟಿನಲ್ಲಿ ಈ ಭಾಗದಲ್ಲೊಂದು ಪುಣೆ ಇನ್ಸ್‌ಟಿಟ್ಯೂಟ್ ಶಾಖೆಯ ಅಗತ್ಯವಿದೆ ಎನ್ನುತ್ತಾರೆ. ಈ ಮಧ್ಯೆ, ಕೊಡಗು ಸಂತ್ರಸ್ಥರಿಗೆ ಪರಿಹಾರ ಕಲ್ಪಿಸುವ ಯೋಚನೆ ಕಲಾವಿದರ ಸಂಘಕ್ಕಿದೆ. ಅಂಬರೀಷ್ ಅವರು ದೊಡ್ಡ ಮಟ್ಟದಲ್ಲಿ ಅವರಿಗೆ ನೆರವಾಗಬೇಕು ಎಂದಿದ್ದಾರೆ. ಇಷ್ಟರಲ್ಲೇ ಸಂಘದ ಸಭೆ ಸೇರಿ ಮುಂದೆ ಅವರಿಗೆ ಯಾವ ರೀತಿ ಪರಿಹಾರ ಕೊಡಬೇಕು ಎಂಬ ಬಗ್ಗೆ ಚರ್ಚೆ ಮಾಡ್ತೀವಿ ಎಂಬುದು ರಾಕ್‌ಲೈನ್ ವೆಂಕಟೇಶ್ ಮಾತು.